ADVERTISEMENT

ಸಂಕಷ್ಟದಲ್ಲಿ ಶ್ರೀಲಂಕಾ ತಂಡ

ಜಿಂಬಾಬ್ವೆ ವಿರುದ್ಧದ ಟೆಸ್ಟ್‌ ಪಂದ್ಯ; ಕುಶಾಲ್‌ ಮೆಂಡಿಸ್‌ ಅರ್ಧಶತಕ

ಏಜೆನ್ಸೀಸ್
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST
ಕುಶಾಲ್‌ ಮೆಂಡಿಸ್‌ ಆಟದ ವೈಖರಿ.
ಕುಶಾಲ್‌ ಮೆಂಡಿಸ್‌ ಆಟದ ವೈಖರಿ.   

ಕೊಲಂಬೊ: ಗುರಿ ಬೆನ್ನಟ್ಟುವ ಹಾದಿಯಲ್ಲಿ ಪ್ರಮುಖ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿರುವ ಶ್ರೀಲಂಕಾ ತಂಡ ಜಿಂಬಾಬ್ವೆ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಸೋಲಿನ ಭೀತಿ ಎದುರಿಸಿದೆ.

ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ 6 ವಿಕೆಟ್‌ಗೆ 252ರನ್‌ಗಳಿಂದ ಸೋಮವಾರ ಆಟ ಮುಂದುವರಿಸಿದ ಜಿಂಬಾಬ್ವೆ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 107.1 ಓವರ್‌ಗಳಲ್ಲಿ 377ರನ್‌ ಗಳಿಗೆ ಆಲೌಟ್‌ ಆಯಿತು.

ಗೆಲುವಿಗೆ 388ರನ್‌ಗಳ ಗುರಿ ಪಡೆದು ಎರಡನೇ ಇನಿಂಗ್ಸ್‌ ಶುರು ಮಾಡಿರುವ ಸಿಂಹಳೀಯ ನಾಡಿನ ತಂಡ ದಿನದಾಟದ ಅಂತ್ಯಕ್ಕೆ 48 ಓವರ್‌ಗಳಲ್ಲಿ 3 ವಿಕೆಟ್‌ಗೆ 170ರನ್‌ ಗಳಿಸಿದೆ. ಈ ತಂಡಕ್ಕೆ ಡ್ರಾ ಮಾಡಿಕೊಳ್ಳಬೇಕಾದರೆ ಅಂತಿಮ ದಿನವಾದ ಮಂಗಳವಾರ ಪೂರ್ಣ 90 ಓವರ್‌ಗಳ ಆಟ ಆಡಬೇಕಿದೆ.

ADVERTISEMENT

ಅರ್ಧಶತಕದ ಆರಂಭ: ಗುರಿ ಬೆನ್ನಟ್ಟಿದ ದಿನೇಶ್‌ ಚಾಂಡಿಮಲ್‌ ಪಡೆಗೆ ದಿಮುತ್‌ ಕರುಣಾರತ್ನೆ (49; 84ಎ,1ಬೌಂ) ಮತ್ತು ಉಪುಲ್‌ ತರಂಗ (27; 69ಎ, 4ಬೌಂ) ಉತ್ತಮ ಆರಂಭ ನೀಡಿದರು. ಇವರು ಮೊದಲ ವಿಕೆಟ್‌ಗೆ 58ರನ್‌ ಸೇರಿಸಿದರು. 20ನೇ ಓವರ್‌ನಲ್ಲಿ ದಾಳಿಗಿಳಿದ  ಜಿಂಬಾಬ್ವೆ ನಾಯಕ ಗ್ರೇಮ್‌ ಕ್ರೀಮರ್‌ ಎರಡನೇ ಎಸೆತದಲ್ಲಿ ತರಂಗ ವಿಕೆಟ್‌ ಉರುಳಿಸಿ ಈ ಜೊತೆಯಾಟವನ್ನು ಮುರಿದರು.

ಬಳಿಕ ಕರುಣಾರತ್ನೆ ಮತ್ತು ಕುಶಾಲ್‌ ಮೆಂಡಿಸ್‌ (ಬ್ಯಾಟಿಂಗ್‌ 60; 85ಎ, 6ಬೌಂ) ಅವರು ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 50 ರನ್‌ ಕಲೆಹಾಕಿ ತಂಡ 100ರ ಗಡಿ ದಾಟುವಂತೆ ನೋಡಿಕೊಂಡರು.

ಈ ಹಂತದಲ್ಲಿ ಆತಿಥೇಯ ಲಂಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಯಿತು. ಅರ್ಧಶತಕದ ಅಂಚಿನಲ್ಲಿದ್ದ ಕರುಣಾರತ್ನೆ, 33ನೇ ಓವರ್‌ನ ಮೊದಲ ಎಸೆತದಲ್ಲಿ  ಸೀನ್‌ ವಿಲಿಯಮ್ಸ್‌ಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿಕೊಂಡರು.

ಇದರ ಬೆನ್ನಲ್ಲೇ ನಾಯಕ ದಿನೇಶ್‌ ಚಾಂಡಿಮಲ್‌ (15; 17ಎ, 2 ಬೌಂ) ಕ್ರೀಮರ್‌ಗೆ ವಿಕೆಟ್‌ ನೀಡಿದ್ದರಿಂದ ಲಂಕಾ ಪಾಳಯದ ಮೇಲೆ ಆತಂಕ ಆವರಿಸಿತ್ತು.

ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಮೆಂಡಿಸ್‌ ಎದೆಗುಂದಲಿಲ್ಲ. ಜಿಂಬಾಬ್ವೆ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು ಲೀಲಾಜಾಲವಾಗಿ ರನ್‌ ಕಲೆಹಾಕಿ ತವರಿನ ಅಭಿಮಾನಿಗಳ ಪ್ರೀತಿ ಗಳಿಸಿದರು.

68 ಎಸೆತಗಳಲ್ಲಿ 49ರನ್‌ ಸೇರಿಸಿದ್ದ ಮೆಂಡಿಸ್‌, ಸೀನ್‌ ವಿಲಿಯಮ್ಸ್‌ ಬೌಲ್‌ ಮಾಡಿದ 43ನೇ ಓವರ್‌ನ ಮೊದಲ ಎಸೆತದಲ್ಲಿ ಒಂದು ರನ್‌ ಗಳಿಸಿ ಅರ್ಧಶತಕ ಪೂರೈಸಿದರು.

ಮೆಂಡಿಸ್‌ಗೆ ಅನುಭವಿ ಆಟಗಾರ ಏಂಜೆಲೊ ಮ್ಯಾಥ್ಯೂಸ್‌ (ಬ್ಯಾಟಿಂಗ್‌; 17; 33ಎ, 1ಬೌಂ, 1ಸಿ) ಸೂಕ್ತ ಬೆಂಬಲ ನೀಡಿದರು. ಇವರು ಮುರಿಯದ ನಾಲ್ಕನೇ ವಿಕೆಟ್‌ಗೆ 37ರನ್‌ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

ಸಿಕಂದರ ಶತಕ: ಇದಕ್ಕೂ ಮುನ್ನ ಜಿಂಬಾಬ್ವೆ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ ಬೃಹತ್‌ ಮೊತ್ತ ಕಲೆಹಾಕಿತು. ಇದಕ್ಕೆ ಕಾರಣವಾಗಿದ್ದು ಸಿಕಂದರ  ರಾಜ (127; 205ಎ, 9ಬೌಂ, 1ಸಿ) ಅವರ ಅಮೋಘ ಶತಕದ ಆಟ.

ಭಾನುವಾರದ ಅಂತ್ಯಕ್ಕೆ 97ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಸಿಕಂದರ, ದಿಲ್ರುವಾನ ಪೆರೆರಾ ಬೌಲ್‌ ಮಾಡಿದ 69ನೇ ಓವರ್‌ನ ಎರಡನೇ ಎಸೆತದಲ್ಲಿ ಎರಡು ರನ್‌ ಕಲೆಹಾಕಿ ಟೆಸ್ಟ್‌ ಮಾದರಿಯಲ್ಲಿ ಚೊಚ್ಚಲ ಶತಕದ ಸಂಭ್ರಮ ಆಚರಿಸಿದರು. ಇದಕ್ಕಾಗಿ ಅವರು ತೆಗೆದುಕೊಂಡಿದ್ದು 160 ಎಸೆತ.
ಇನ್ನೊಂದೆಡೆ ಮಾಲ್ಕಂ ವಾಲರ್‌(68; 98ಎ, 8ಬೌಂ) ಕೂಡ ಮಿಂಚಿನ ಆಟದ ಮೂಲಕ ಗಮನ ಸೆಳೆದರು. ಲಂಕಾ ಬೌಲರ್‌ಗಳನ್ನು ಹೈರಾಣಾಗಿಸಿದ ಈ ಜೋಡಿ ಏಳನೇ ವಿಕೆಟ್‌ಗೆ 144ರನ್‌ ಗಳಿಸಿತು.

ನಾಯಕ ಗ್ರೇಮ್‌ ಕ್ರೀಮರ್‌(48; 94ಎ, 5ಬೌಂ) ಕೂಡ ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು. ಹೀಗಾಗಿ ತಂಡ ಸವಾಲಿನ ಮೊತ್ತ ಕಲೆಹಾಕಿತು.
ಅನುಭವಿ ಸ್ಪಿನ್ನರ್‌ ರಂಗನಾ ಹೆರಾತ್‌ ಅವರು ಲಂಕಾ ಪರ ಯಶಸ್ವಿ ಬೌಲರ್‌ ಎನಿಸಿದರು. 39.1 ಓವರ್‌ ಬೌಲ್‌ ಮಾಡಿದ ಅವರು 133ರನ್‌ ನೀಡಿ 6 ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ: ಮೊದಲ ಇನಿಂಗ್ಸ್‌: 94.4 ಓವರ್‌ಗಳಲ್ಲಿ 356  ಮತ್ತು 107.1 ಓವರ್‌ಗಳಲ್ಲಿ 377 (ಸಿಕಂದರ ರಾಜ 127, ಮಾಲ್ಕಂ ವಾಲರ್‌ 68, ಗ್ರೇಮ್‌ ಕ್ರೀಮರ್‌ 48, ಡೊನಾಲ್ಡ್‌ ತಿರಿಪಾನೊ 19; ರಂಗನಾ ಹೆರಾತ್‌ 133ಕ್ಕೆ6, ದಿಲ್ರುವಾನ ಪೆರೇರಾ 95ಕ್ಕೆ3, ಲಾಹಿರು ಕುಮಾರ 72ಕ್ಕೆ1).

ಶ್ರೀಲಂಕಾ: ಪ್ರಥಮ ಇನಿಂಗ್ಸ್‌: 102.3 ಓವರ್‌ಗಳಲ್ಲಿ 346  ಮತ್ತು 48 ಓವರ್‌ಗಳಲ್ಲಿ 3 ವಿಕೆಟ್‌ಗೆ 170 (ದಿಮುತ್‌ ಕರುಣಾರತ್ನೆ 49, ಉಪುಲ್‌ ತರಂಗ 27, ಕುಶಾಲ್‌ ಮೆಂಡಿಸ್‌ ಬ್ಯಾಟಿಂಗ್‌ 60, ದಿನೇಶ್‌ ಚಾಂಡಿಮಲ್‌ 15, ಏಂಜೆಲೊ ಮ್ಯಾಥ್ಯೂಸ್‌ ಬ್ಯಾಟಿಂಗ್‌ 17; ಸೀನ್‌ ವಿಲಿಯಮ್ಸ್‌ 62ಕ್ಕೆ1, ಗ್ರೇಮ್‌ ಕ್ರೀಮರ್‌ 67ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.