ADVERTISEMENT

ಸಜ್ಜಾಗಲು ಕೊನೆಯ ಅವಕಾಶ

ಕ್ರಿಕೆಟ್: ಇಂದು ಭಾರತ- ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST
ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಗೆ ಸಿದ್ಧರಾಗಲು ಮಂಗಳವಾರ ಭಾರತ ತಂಡ ಮತ್ತೊಂದು ಅಭ್ಯಾಸ ಪಂದ್ಯ ಆಡಲಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಗೆದ್ದಿರುವ ದೋನಿ ಬಳಗ ಈಗ ವಿಶ್ವಾಸದಿಂದ ಕೂಡಿದೆ
ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಗೆ ಸಿದ್ಧರಾಗಲು ಮಂಗಳವಾರ ಭಾರತ ತಂಡ ಮತ್ತೊಂದು ಅಭ್ಯಾಸ ಪಂದ್ಯ ಆಡಲಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಗೆದ್ದಿರುವ ದೋನಿ ಬಳಗ ಈಗ ವಿಶ್ವಾಸದಿಂದ ಕೂಡಿದೆ   

ಕಾರ್ಡಿಫ್ (ಪಿಟಿಐ): ಮೊದಲ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಲಭಿಸಿದ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಭಾರತ ತಂಡ ಮಂಗಳವಾರ ನಡೆಯುವ ಎರಡನೇ ಹಾಗೂ ಕೊನೆಯ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ.

ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪೂರ್ಣ ರೀತಿಯಲ್ಲಿ ಸಜ್ಜಾಗಲು ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ಲಭಿಸುವ ಕೊನೆಯ ಅವಕಾಶ ಇದು. ಈ ಪಂದ್ಯದ ಪ್ರಯೋಜನವನ್ನು ಭಾರತದ ಆಟಗಾರರು ಯಾವ ರೀತಿಯಲ್ಲಿ ಪಡೆಯುವರು ಎಂಬುದನ್ನು ನೋಡಬೇಕು.

ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಲಂಕಾ ವಿರುದ್ಧ ಗೆಲುವು ಸಾಧಿಸಿತ್ತು. ಎದುರಾಳಿಗಳು ನೀಡಿದ್ದ 334 ರನ್‌ಗಳ ಗುರಿಯನ್ನು ಮುಟ್ಟುವಲ್ಲಿ `ಮಹಿ' ಬಳಗ ಯಶಸ್ವಿಯಾಗಿತ್ತು. ಆಕರ್ಷಕ 144 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಮತ್ತು ಅಜೇಯ ಶತಕ ಗಳಿಸಿದ್ದ ದಿನೇಶ್ ಕಾರ್ತಿಕ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಐಪಿಎಲ್‌ನಲ್ಲಿ ನಡೆದಿರುವ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) `ಕಂಪನ' ಉಂಟುಮಾಡಿದೆ. ಇಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇಂಗ್ಲೆಂಡ್‌ನಲ್ಲಿರುವ ಆಟಗಾರರ ಮನಸ್ಸಿನ ಮೇಲೂ ತನ್ನ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ತಮ್ಮ ಚಿತ್ತವನ್ನು ಆಟದ ಮೇಲೆ ಮಾತ್ರ ಹರಿಸುವ ಸವಾಲು ಕೂಡಾ ಭಾರತದ ಆಟಗಾರರ ಮೇಲಿದೆ.

ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಮಿಂಚಿದ್ದರು. ಆದರೆ ಆಸೀಸ್ ವಿರುದ್ಧ ಆಟಗಾರರಿಗೆ ನಿಜವಾದ ಅಗ್ನಿಪರೀಕ್ಷೆ ಎದುರಾಗಲಿದೆ. ಏಕೆಂದರೆ ಮೈಕಲ್ ಕ್ಲಾರ್ಕ್ ಬಳಗ ಪ್ರಮುಖ ವೇಗದ ಬೌಲರ್‌ಗಳನ್ನು ಒಳಗೊಂಡಿದೆ.

ಇಂಗ್ಲೆಂಡ್‌ನ ಎಲ್ಲ ಕ್ರೀಡಾಂಗಣಗಳ ಪಿಚ್‌ಗಳು ವೇಗದ ಬೌಲರ್‌ಗಳಿಗೆ ನೆರವು ನೀಡುವುದು ಸಾಮಾನ್ಯ. ಆದ್ದರಿಂದ ಮಿಷೆಲ್ ಸ್ಟಾರ್ಕ್ ಮತ್ತು ಮಿಷೆಲ್ ಜಾನ್ಸನ್ ಅವರಂತಹ ಬೌಲರ್‌ಗಳನ್ನು ಧೈರ್ಯದಿಂದ ಎದುರಿಸಿ ನಿಲ್ಲಬೇಕಾಗಿದೆ.
ಕೊಹ್ಲಿ ಮತ್ತು ಕಾರ್ತಿಕ್ ಅಲ್ಲದೆ, ಸುರೇಶ್ ರೈನಾ, ದೋನಿ, ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಅವರಿಂದ ತಂಡ ಶ್ರೇಷ್ಠ ಆಟವನ್ನು ನಿರೀಕ್ಷಿಸುತ್ತಿದೆ. ತಂಡ ಉತ್ತಮ ಮೊತ್ತ ಪೇರಿಸಬೇಕಾದರೆ ಧವನ್ ಮತ್ತು ವಿಜಯ್ ಉತ್ತಮ ಆರಂಭ ನೀಡುವುದು ಅಗತ್ಯ.

ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಬ್ಯಾಟ್ಸ್‌ಮನ್‌ಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಕಾರ್ತಿಕ್ ಈ ಪಂದ್ಯದಲ್ಲೂ ಮಿಂಚಿದರೆ, ಹನ್ನೊಂದರ ಬಳಗದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲಿದ್ದಾರೆ.

ಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತದ ಎಲ್ಲ ಬೌಲರ್‌ಗಳು ವಿಫಲರಾಗಿದ್ದರು. ಆದ್ದರಿಂದ ಈ ಪಂದ್ಯ ಬೌಲರ್‌ಗಳಿಗೆ ತಪ್ಪನ್ನು ಸರಿಪಡಿಸಿಕೊಳ್ಳಲು ಮತ್ತೊಂದು ಅವಕಾಶ ನೀಡಿದೆ. ಭುವನೇಶ್ವರ್ ಕುಮಾರ್ ಇಂಗ್ಲೆಂಡ್‌ನ ಪರಿಸ್ಥಿತಿಯಲ್ಲಿ ಚೆನ್ನಾಗಿ ಬೌಲ್ ಮಾಡುವರು ಎಂಬುದು ಎಲ್ಲರ ನಿರೀಕ್ಷೆ. ಆದರೆ ಲಂಕಾ ವಿರುದ್ಧ ಅವರು ಅಷ್ಟೊಂದು ಪ್ರಭಾವಿ ಎನಿಸಿರಲಿಲ್ಲ.

ಭಾರತ ತಂಡ ಜೂನ್ 6 ರಂದು ನಡೆಯುವ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ಆ ಬಳಿಕ ವೆಸ್ಟ್‌ಇಂಡೀಸ್ (ಜೂ. 11) ಮತ್ತು ಪಾಕಿಸ್ತಾನ (ಜೂನ್ 15) ತಂಡಗಳನ್ನು ಎದುರಿಸಲಿದೆ.

ತಂಡಗಳು ಇಂತಿವೆ
ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಶಿಖರ್ ಧವನ್, ಮುರಳಿ   ವಿಜಯ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಇರ್ಫಾನ್ ಪಠಾಣ್, ಆರ್. ವಿನಯ್ ಕುಮಾರ್, ಭುವನೇಶ್ವರ್ ಕುಮಾರ್, ಅಮಿತ್ ಮಿಶ್ರಾ, ಇಶಾಂತ್ ಶರ್ಮ, ಉಮೇಶ್ ಯಾದವ್

ಆಸ್ಟ್ರೇಲಿಯಾ: ಮೈಕಲ್ ಕ್ಲಾರ್ಕ್ (ನಾಯಕ), ಜಾರ್ಜ್ ಬೈಲಿ, ಡೇವಿಡ್ ವಾರ್ನರ್, ಶೇನ್ ವಾಟ್ಸನ್, ಫಿಲ್ ಹ್ಯೂಸ್, ಆ್ಯಡಮ್ ವೋಗ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ವೇಡ್, ಮಿಷೆಲ್ ಸ್ಟಾರ್ಕ್, ಮಿಷೆಲ್ ಮಾರ್ಷ್, ಮಿಷೆಲ್ ಜಾನ್ಸನ್, ಕ್ಸೇವಿಯರ್ ಡೋಹರ್ತಿ, ನಥಾನ್ ಕೌಲ್ಟಿಯೆರ್- ನೀಲ್, ಕ್ಲಿಂಟ್ ಮೆಕೇ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.