ADVERTISEMENT

ಸರಣಿ ಕ್ಲೀನ್ ಸ್ವೀಪ್ ಭಾರತದ ಗುರಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2011, 19:30 IST
Last Updated 12 ಜೂನ್ 2011, 19:30 IST

ಆ್ಯಂಟಿಗುವಾ: ಸರಣಿ ಗೆಲುವಿನ ಗುರಿ ಈಡೇರಿದ ಕಾರಣ ಭಾರತ ಇದೀಗ `ಕ್ಲೀನ್ ಸ್ವೀಪ್~ ಮೇಲೆ ಕಣ್ಣಿಟ್ಟಿದೆ. ಸುರೇಶ್ ರೈನಾ ನೇತೃತ್ವದ ತಂಡ ಸೋಮವಾರ ಇಲ್ಲಿ ನಡೆಯಲಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.

ಐದು ಪಂದ್ಯಗಳ ಸರಣಿಯನ್ನು ಭಾರತ ಈಗಾಗಲೇ 3-0 ರಲ್ಲಿ ತನ್ನದಾಗಿಸಿಕೊಂಡಿದೆ. ಶನಿವಾರ ನಡೆದ ಪಂದ್ಯದಲ್ಲಿ ಪ್ರವಾಸಿ ತಂಡ ಮೂರು ವಿಕೆಟ್‌ಗಳ ಜಯ ಪಡೆದಿತ್ತು. ಇನ್ನುಳಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸುವುದು ಭಾರತದ ಲೆಕ್ಕಾಚಾರ.

ತವರು ನೆಲದಲ್ಲಿ ಸತತ ಮೂರು ಸೋಲು ಎದುರಾಗಿರುವ ಕಾರಣ ವಿಂಡೀಸ್ ತಂಡ ಆತ್ಮವಿಶ್ವಾಸ ಕಳೆದುಕೊಂಡಿದೆ. ಪುಟಿದೆದ್ದು ನಿಲ್ಲಲು ತಂಡಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಡೆರೆನ್ ಸಮಿ ಬಳಗ ತನ್ನ ಘನತೆಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ.

ADVERTISEMENT

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿರುವುದು ಭಾರತ ತಂಡದ ಕೋಚ್ ಡಂಕನ್ ಫ್ಲೆಚರ್ ಅವರ ಸಂತಸಕ್ಕೆ ಕಾರಣವಾಗಿದೆ. `ಭಾರತದಲ್ಲಿ ಸಾಕಷ್ಟು ಪ್ರತಿಭೆಗಳಿದ್ದಾರೆ. ಭಾರತದ ಕ್ರಿಕೆಟ್ ಪ್ರಸಕ್ತ ಉತ್ತಮ ಸ್ಥಿತಿಯಲ್ಲಿದೆ~ ಎಂದು ಶನಿವಾರದ ಪಂದ್ಯದ ಬಳಿಕ ಫ್ಲೆಚರ್ ಪ್ರತಿಕ್ರಿಯಿಸಿದ್ದರು.

ಇದುವರೆಗೆ ಅವಕಾಶ ಪಡೆಯದ ಕೆಲವು ಆಟಗಾರರು ಸೋಮವಾರ ಕಣಕ್ಕಿಳಿಯಲಿದ್ದಾರೆ ಎಂಬ ಸೂಚನೆಯನ್ನು ರೈನಾ ನೀಡಿದ್ದಾರೆ. ಮನೋಜ್ ತಿವಾರಿ ಅವರು ಅಂತಿಮ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅದೇ ರೀತಿ ಆರ್. ಅಶ್ವಿನ್‌ಗೂ ಅವಕಾಶ ಲಭಿಸಬಹುದು.

ಆಟಗಾರರಲ್ಲಿ `ಗೆಲುವಿನ ತುಡಿತ~ ಕಾಣದೇ ಇರುವುದು ವಿಂಡೀಸ್ ತಂಡದ ಸೋಲಿಗೆ ಕಾರಣ ಎಂದು ಸಮಿ ಹೇಳಿದ್ದಾರೆ. ಈಗಾಗಲೇ ಸರಣಿಯನ್ನು ಕಳೆದುಕೊಂಡಿರುವ ತಂಡ ಸೋಮವಾರ ಭಾರತಕ್ಕೆ ಯಾವ ರೀತಿಯಲ್ಲಿ ಪೈಪೋಟಿ ನೀಡಲಿದೆ ಎಂಬುದನ್ನು ನೋಡಬೇಕು.

ಪಂದ್ಯದ ಆರಂಭ (ಭಾರತೀಯ ಕಾಲಮಾನ): ಸಂಜೆ 6.30
ನೇರ ಪ್ರಸಾರ: ಟೆನ್ ಕ್ರಿಕೆಟ್ ಮತ್ತು ದೂರದರ್ಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.