ಕೊಲಂಬೊ (ಪಿಟಿಐ/ಐಎಎನ್‌ಎಸ್): ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ `ಐಸಿಸಿ ಚಾಂಪಿಯನ್ಸ್ ಟ್ರೋಫಿ'ಯ ಉದ್ಘಾಟನಾ ಸಮಾರಂಭದ ವೇಳೆ ಶ್ರೀಲಂಕಾ ರಾಷ್ಟ್ರಗೀತೆಯ ಬದಲಾಗಿ ಹಿಂದಿ ಗೀತೆ ನುಡಿಸಿದಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕ್ಷಮೆಯಾಚಿಸಿದೆ.
ಉದ್ಘಾಟನಾ ಸಮಾರಂಭದಲ್ಲಿ ನಡೆದ ಅಚಾತುರ್ಯವನ್ನು ಖಂಡಿಸಿ, ಇಲ್ಲಿನ `ರಾವಣ ಬಲ' ಸಂಘಟನೆಯ ಕಾರ್ಯಕರ್ತರು, ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಪ್ರಧಾನ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.
`ಇದು ದೇಶಕ್ಕೆ ಮಾಡಿದ ನಂಬಿಕೆ ನಂಬಿಕೆದ್ರೋಹ. ರಾಷ್ಟ್ರ ಗೀತೆಯ ಬದಲಾಗಿ ಹಿಂದಿ ಗೀತೆ ಏಕೆ ನುಡಿಸಲಾಯಿತು ಎಂಬುದನ್ನು ಎಸ್‌ಎಲ್‌ಸಿ ವಿವರಣೆ ನೀಡಲೇಬೇಕು' ಎಂದು ಆಗ್ರಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಐಸಿಸಿ, ಶ್ರೀಲಂಕಾದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗೆ ಪತ್ರವೊಂದನ್ನು ನೀಡಿದ್ದಾರೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.
`ಸಮಾರಂಭದಲ್ಲಿ ಹಾಜರಿದ್ದ ಲಂಕಾ ಕ್ರಿಕೆಟ್‌ನ ಅಧಿಕಾರಿಗಳು ಯಾವುದೇ ಅಧಿಕೃತ ಪ್ರತಿರೋಧ ತೋರಿಲ್ಲ' ಎಂದೂ ರಾವಣ ಬಲ ಸಂಘಟನೆಯು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ.
ಆದರೆ, `ಈ ಘಟನೆಗೆ ಸಂಬಂಧಿಸಿದಂತೆ ಐಸಿಸಿ ಕ್ಷಮೆಯಾಚಿಸಿದೆ' ಎಂದು ಸಮಜಾಯಿಷಿ ನೀಡಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟಣೆ ನೀಡಿದೆ.
ಅಚಾತುರ್ಯ: ಜೂನ್ ಆರರಂದು ಕಾರ್ಡಿಫ್‌ನಲ್ಲಿ ನಡೆದ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಶ್ರೀಲಂಕಾ ಆಟಗಾರರ ಪಥಸಂಚಲನದ ವೇಳೆ ಅವರ ರಾಷ್ಟ್ರಗೀತೆಯ ಬದಲು ಹಿಂದಿ ಗೀತೆಯೊಂದನ್ನು ನುಡಿಸಲಾಗಿತ್ತು. ಆದರೆ ಉಳಿದ ತಂಡಗಳಿಗೆ ಅವರವರ ರಾಷ್ಟ್ರಗಳ ರಾಷ್ಟ್ರಗೀತೆಯನ್ನು ನುಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.