ADVERTISEMENT

ಸಿದ್ಧನಾಥ ಮಾನೆ ದಸರಾ ಕಂಠೀರವ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST
ಸಿದ್ಧನಾಥ ಮಾನೆ ದಸರಾ ಕಂಠೀರವ
ಸಿದ್ಧನಾಥ ಮಾನೆ ದಸರಾ ಕಂಠೀರವ   

ಮೈಸೂರು: ದಸರಾ ಸಂಭ್ರಮದಲ್ಲಿ ಝಗಮಗಿಸುತ್ತಿರುವ `ಅರಮನೆ ನಗರಿ~ಯ  ಕುಸ್ತಿ ಅಖಾಡದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳದ ಪೈಲ್ವಾನ ಸಿದ್ಧನಾಥ ಮಾನೆ `ದಸರಾ ಕಂಠೀರವ~ನಾಗಿ ವಿಜೃಂಭಿಸಿದರು.

ಭಾನುವಾರ ಸಂಜೆ ದೊಡ್ಡಕೆರೆ ಮೈದಾನದ ಮಣ್ಣಿನ ಅಖಾಡಾದ ಮೇಲೆ ನಡೆದ ದಸರಾ ಮಹೋತ್ಸವದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯ 74ಕೆಜಿ ಮೇಲ್ಪಟ್ಟವರ ವಿಭಾಗದ ಫೈನಲ್‌ನಲ್ಲಿ ತಮ್ಮದೇ ಊರಿನ ಪ್ರಕಾಶ್ ಯರಗಟ್ಟಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದರು. ಮೊದಲ 30 ನಿಮಿಷ ಮಾರ್ ಫಿಟ್ ಕುಸ್ತಿ ನಡೆಸಲಾಯಿತು.

ಆದರೆ, ಯಾವುದೇ ಫಲಿತಾಂಶ ಬರದ ಕಾರಣ ಅಂಕಗಳ ಆಧಾರದಲ್ಲಿ ಕುಸ್ತಿ ಆಡಿಸಿ ಫಲಿತಾಂಶ ನಿರ್ಧರಿಸಲಾಯಿತು. ಎರಡು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಕೇಕೆ, ಚಪ್ಪಾಳೆಗಳ ನಡುವೆ ನಡೆದ ತುರುಸಿನ ಕುಸ್ತಿಯಲ್ಲಿ ಗೆದ್ದ ಸಿದ್ಧನಾಥ ಮಾನೆ 1250 ಗ್ರಾಮ್ (ಒಂದೂಕಾಲು ಕೆಜಿ ) ತೂಕದ ಬೆಳ್ಳಿಗದೆ, 12,500 ರೂಪಾಯಿ ನಗದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಪಾಂಡುರಂಗ `ಕೇಸರಿ~, ನಾಗರಾಜ್ `ಕುಮಾರ~: ಬೆಳಗಾವಿ ಜಿಲ್ಲೆಯ ಅಥಣಿಯ ಪಾಂಡುರಂಗ ಕಂಬಾರ ಮತ್ತು ಧಾರವಾಡದ ಕ್ರೀಡಾ ವಸತಿ ನಿಲಯದ ಎಂ. ನಾಗರಾಜ್ ಕ್ರಮವಾಗಿ `ದಸರಾ ಕೇಸರಿ~ ಮತ್ತು `ದಸರಾ ಕುಮಾರ~ ಗೌರವ ಗಳಿಸಿದರು.

74 ಕೆಜಿಯೊಳಗಿನವರ ವಿಭಾಗದ ಫೈನಲ್‌ನಲ್ಲಿ ಮಾರ್ ಫಿಟ್ ಡ್ರಾ ಆದ ನಂತರ ಪಾಯಿಂಟ್ ಆಧಾರದಲ್ಲಿ ಪಾಂಡುರಂಗ ಕಂಬಾರ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ವೆಂಕಟೇಶ ಪಾಟೀಲ ವಿರುದ್ಧ ಗೆದ್ದರು. ಮಣ್ಣಿನಂಕಣದ ದೂಳು ಹಾರುವಂತೆ ಕಾದಾಡಿದ ಉಭಯ ಪೈಲ್ವಾನರು ರೋಚಕ ಗೆಲುವು ಸಾಧಿಸಿದರು.

ಮೊದಲ ಸೆಟ್‌ನಲ್ಲಿ ಪಾಂಡುರಂಗ ಕಂಬಾರ ಒಂದು ಪಾಯಿಂಟ್‌ನಿಂದ ಗೆದ್ದರು. ಎರಡನೇ ಸೆಟ್ ಸಮವಾಯಿತು. ಮೂರನೇ ಸೆಟ್‌ನಲ್ಲಿ ರಕ್ಷಣಾತ್ಮಕವಾಗಿ ಸೆಣಸಾಡುತ್ತಿದ್ದ ವೆಂಕಟೇಶ ಅವರಿಂದ ಪಾಯಿಂಟ್ ಕಸಿಯುವಲ್ಲಿ ಸಫಲರಾದ ಪಾಂಡುರಂಗ ಜಯದ ನಗೆ ಬೀರಿದರು.

60 ಕೆಜಿ ವಿಭಾಗದ ಕುತೂಹಲಕಾರಿ ಫೈನಲ್‌ನಲ್ಲಿ ಎಂ. ನಾಗರಾಜ್ ತಮ್ಮ ಎದುರಾಳಿ ಎಂಇಜಿಯ ವಿಠಲ್ ಅಮ್ಮನಗೋಳ ಅವರಿಗೆ ಮುಗಿಲು ತೋರಿಸಿದರು.

ಮೊದಲ ಮೂವತ್ತು ನಿಮಿಷದ ಮಾರ್‌ಫಿಟ್‌ನಲ್ಲಿ ಯಾವುದೇ ಫಲಿತಾಂಶ ಹೊರಹೊಮ್ಮದಿದ್ದಾಗ ಫಿಲಾ ನಿಯಮಾವಳಿಗೆ ಮೊರೆ ಹೋಗಲಾಯಿತು. ಅಂಕಗಳ ಆಧಾರದಲ್ಲಿ ನಡೆದ ಕುಸ್ತಿಯ ಮೊದಲ ಸೆಟ್‌ನಲ್ಲಿ 1 ಅಂಕದ ಅಂತರದಿಂದ ಮೊದಲ ಸುತ್ತು ಗೆದ್ದ ನಾಗರಾಜ್, ಎರಡನೇ ಸೆಟ್‌ನಲ್ಲಿ ಎದುರಾಳಿಯನ್ನು ಚಿತ್ ಮಾಡಿ ಜಯಶಾಲಿಯಾದರು. ಅಖಾಡಾದ ಮೇಲೆ ಲಾಗಾ ಹೊಡೆದು, ಜಿಗಿದಾಡಿ ಸಂಭ್ರಮ ವ್ಯಕ್ತಪಡಿಸಿದರು. 

ದಸರಾ ಕೇಸರಿ ಪ್ರಶಸ್ತಿ ಪಡೆದ ಪಾಂಡುರಂಗ ಕಂಬಾರ ಅವರಿಗೆ ಒಂದು ಕೆಜಿ ಬೆಳ್ಳಿಯ ಗದೆ, 10 ಸಾವಿರ ರೂಪಾಯಿ ನಗದು, ದಸರಾ ಕುಮಾರ ಪ್ರಶಸ್ತಿ ಪಡೆದ ಎಂ. ನಾಗರಾಜ್ ಅವರಿಗೆ ಮುಕ್ಕಾಲು ಕೆಜಿ ಬೆಳ್ಳಿಗದೆ ಮತ್ತು 5 ಸಾವಿರ ರೂಪಾಯಿ ನಗದು ನೀಡಲಾಯಿತು. ದಸರಾ ಕಿಶೋರ ಗಳಿಸಿದ ಬೆಳಗಾವಿಯ ಕ್ರೀಡಾ ವಸತಿ ನಿಲಯದ ಲಕ್ಷ್ಮಣ ಮುನವಳ್ಳಿ ಅರ್ಧ ಕೆಜಿ ಬೆಳ್ಳಿಗದೆ ಮತ್ತು 2 ಸಾವಿರ ರೂಪಾಯಿ ನಗದು ಬಹುಮಾನ ಪಡೆದರು. ಹರಿಯಾಣದ ಕುಸ್ತಿಪಟು ಯುಧಿಷ್ಠಿರ್ ಉತ್ತಮ ಕುಸ್ತಿಪಟು ಗೌರವ ಗಳಿಸಿದರು.

ಪ್ರೇಮಾಗೆ ಚಾಮುಂಡೇಶ್ವರಿ ಪ್ರಶಸ್ತಿ: 44 ಕೆಜಿ ಬಾಲಕಿಯರ ವಿಭಾಗದಲ್ಲಿ ಕಳೆದ ಗುರುವಾರ      ಚಿನ್ನದ ಪದಕ ಗಳಿಸಿದ್ದ ಅಂತರರಾಷ್ಟ್ರೀಯ    ಕುಸ್ತಿಪಟು, ಗದುಗಿನ ಪ್ರೇಮಾ             ಹುಚ್ಚಣ್ಣವರಗೆ `ಚಾಮುಂಡೇಶ್ವರಿ ಪ್ರಶಸ್ತಿ~ ನೀಡಿ ಗೌರವಿಸಲಾಯಿತು.

ಅಖಿಲ ಭಾರತ ಆಹ್ವಾನಿತ ಕುಸ್ತಿ ಪಂದ್ಯಾವಳಿಯ ಮಹಿಳೆಯರ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಕುರುಕ್ಷೇತ್ರದ ಏಕತಾ ಅವರಿಗೆ `ಝಾನ್ಸಿರಾಣಿ ಲಕ್ಷ್ಮೀಬಾಯಿ~ ಪ್ರಶಸ್ತಿ ನೀಡಲಾಯಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.