ADVERTISEMENT

ಸುನಿಲ್ ಚೆಟ್ರಿ ಕಾಲ್ಚಳಕ: ಭಾರತ ತಂಡಕ್ಕೆ ಗೆಲುವು

ಫುಟ್‌ಬಾಲ್‌: ಎಎಫ್‌ಸಿ ಕಪ್ ಅರ್ಹತಾ ಸುತ್ತು: ಕಿರ್ಗಿಸ್ತಾನ ತಂಡಕ್ಕೆ ನಿರಾಸೆ; ಉದ್ಯಾನನಗರಿಯಲ್ಲಿ ಮೆರೆದ ಆತಿಥೇಯ ತಂಡದ ಆಟಗಾರರು

ಗಿರೀಶದೊಡ್ಡಮನಿ
Published 13 ಜೂನ್ 2017, 19:33 IST
Last Updated 13 ಜೂನ್ 2017, 19:33 IST
ಭಾರತ ತಂಡದ ಆಟಗಾರ ಸುನಿಲ್‌ ಚೆಟ್ರಿ ಅವರು ಎದುರಾಳಿ ಆಟಗಾರರನ್ನು ವಂಚಿಸಿ ಚೆಂಡನ್ನು ಗುರಿ ಮುಟ್ಟಿಸಲು ಯತ್ನಿಸಿದರು ಪ್ರಜಾವಾಣಿ ಚಿತ್ರ/ಸತೀಶ್‌ ಬಡಿಗೇರ್‌
ಭಾರತ ತಂಡದ ಆಟಗಾರ ಸುನಿಲ್‌ ಚೆಟ್ರಿ ಅವರು ಎದುರಾಳಿ ಆಟಗಾರರನ್ನು ವಂಚಿಸಿ ಚೆಂಡನ್ನು ಗುರಿ ಮುಟ್ಟಿಸಲು ಯತ್ನಿಸಿದರು ಪ್ರಜಾವಾಣಿ ಚಿತ್ರ/ಸತೀಶ್‌ ಬಡಿಗೇರ್‌   

ಬೆಂಗಳೂರು:  ಕಂಠೀರವ ಕ್ರೀಡಾಂಗಣ ದಲ್ಲಿ ಮಂಗಳವಾರ ರಾತ್ರಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳನ್ನು ಸುನಿಲ್ ಚೆಟ್ರಿ ನಿರಾಸೆಗೊಳಿಸಲಿಲ್ಲ.
ಮಿಂಚಿನ ಬಳ್ಳಿಯಷ್ಟೇ ಚುರುಕಾಗಿ ಆಡಿದ ಚೆಟ್ರಿ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ತಂಡವು 1–0 ಗೋಲಿನಿಂದ ಎಎಫ್‌ಸಿ ಕಪ್ ಏಷ್ಯನ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕಿರ್ಗಿಸ್ತಾನ ಎದುರು ಜಯಿಸಿತು.

ಅದರೊಂದಿಗೆ ಒಟ್ಟು ಆರು ಪಾಯಿಂಟ್‌ಗಳನ್ನು ಗಳಿಸಿದ ಭಾರತ ತಂಡವು ‘ಎ’ ಗುಂಪಿನ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಮೊದಲ ಪಂದ್ಯದಲ್ಲಿ ಮ್ಯಾನ್ಮಾರ್ ಎದುರು ಭಾರತ ತಂಡವು ಜಯಿಸಿತ್ತು. ಇದು ಸತತ ಎರಡನೇ ಜಯ. ಆದರೆ ಕಿರ್ಗಿಸ್ತಾನ ತಂಡವು ಸುಲಭವಾಗಿ ಶರಣಾಗಲಿಲ್ಲ. ಪಂದ್ಯದ ಆರಂಭದಿಂದಲೂ ಕಠಿಣ ಪೈಪೋಟಿ ಒಡ್ಡಿತು. ಆದರೆ 69ನೇ ನಿಮಿಷದಲ್ಲಿ ಚೆಟ್ರಿ  ತಮ್ಮ ಕಾಲ್ಚಳಕ ತೋರಿಸಿದರು.

ಕಿರ್ಗಿಸ್ತಾನದ ರಕ್ಷಣಾ ಕೋಟೆಯನ್ನು ವಂಚಿಸಿದ ಜೆಜೆ ಲಾಲ್‌ಪೆಕ್ಲುವಾಗ ಚೆಂಡನ್ನು ಗೋಲು ವೃತ್ತದೊಳಗೆ ತರುವಲ್ಲಿ ಯಶ ಸಾಧಿಸಿದರು. ಗೋಲುಪೆಟ್ಟಿಗೆಯ ಬಲ ಮೂಲೆಯಿಂದ ನಾಲ್ಕು ಅಡಿಗಳಷ್ಟು ದೂರದಲ್ಲಿದ್ದ ಚೆಟ್ರಿ ಅವರಿಗೆ ಜೆಜೆ ಪಾಸ್ ನೀಡಿದ್ದರು. ಕೆಲವೇ ಕ್ಷಣಗಳಲ್ಲಿ ನಡೆದ ಚುಟುಕು ಪಾಸ್‌ ಕಿರ್ಗಿಸ್ತಾನ ರಕ್ಷಣಾ ಪಡೆಯ ಅಂದಾಜಿಗೆ ಸಿಗಲಿಲ್ಲ. ಗೋಲ್‌ಕೀಪರ್ ಪಾವೆಲ್ ಮಥಾಯಿಶ್ ಅವರು ಬಲಕ್ಕೆ ಹೊರಳಿ ಡೈವ್‌ ಮಾಡುವಷ್ಟರಲ್ಲಿ ಚೆಟ್ರಿ ತಮ್ಮ ಕೆಲಸ ಮುಗಿಸಿದ್ದರು. ಚೆಂಡು ಗೋಲುಪೆಟ್ಟಿಗೆಯ ಒಳಗಿನ ಪರದೆಗೆ ಮುತ್ತಿಕ್ಕಿತ್ತು.

ADVERTISEMENT

ಕ್ರೀಡಾಂಗಣದಲ್ಲಿ ಗ್ಯಾಲರಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರು ಕೇಕೆ ಹಾಕಿದರು. ಚೆಟ್ರಿ ಕುರಿತ ಜಯಘೋಷಗಳು ಮುಳುಗಿದವು. ತ್ರಿವರ್ಣ ಧ್ವಜಗಳು ನಲಿದವು.  ಅಂಗಳದ ಗಡಿಯ ಹೊರಗೆ ಠಳಾಯಿಸುತ್ತಿದ್ದ ನೀಲಿ ಸೂಟುಧಾರಿ, ಕೋಚ್ ಸ್ಟೀಫನ್ ಕಾನ್ಸಟೆಂಟೈನ್ ಕೂಡ ಸಂಭ್ರಮಿಸಿದರು.

ಹೋದ ವಾರ ನೇಪಾಳದ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಆಡಿದ್ದ ಮೊಹಮ್ಮದ್ ರಫೀಕ್ ಮತ್ತು ರಾಬಿನ್ ಸಿಂಗ್ ಅವರು ಇಲ್ಲಿ ಕಣಕ್ಕಿಳಿಯಲಿಲ್ಲ.  ಅವರ ಬದಲಿಗೆ ಯುಜೆನ್ಸನ್ ಲಿಂಗ್ಡೊ ಮತ್ತು ನಾಯಕ ಚೆಟ್ರಿ ಆಡಿದರು. ಗಾಯದಿಂದ ಚೇತರಿಸಿಕೊಂಡು ಬಂದ ಮೇಲೆ ಚೆಟ್ರಿಗೆ ಇದು ಮೊದಲ ಅಂತರರಾಷ್ಟ್ರೀಯ ಪಂದ್ಯ.

ನಾರಾಯಣ ದಾಸ್, ಅನಾಸ್ ಎಡತೊಡ್ಕಾ, ಸಂದೇಶ್ ಜಿಂಗಾನ್ ಮತ್ತು ಪ್ರೀತಂ ಕೋಟಾಲಾ ಅವರ ರಕ್ಷಣಾಪಡೆ ಯನ್ನು ಕೋಚ್ ಕಾನ್ಸ್‌ಟೆಂಟೈನ್ ಅವರು ಕಣಕ್ಕಿಳಿಸಿದ್ದರು.  ಮಿಡ್‌ಫೀಲ್ಡ್‌ನಲ್ಲಿ ಯುಜೇನ್ಸನ್ ಲಿಂಗ್ಡೋ ಮತ್ತು ರಾವಲಿನ್ ಬೊರ್ಜಸ್, ಜಾಕಿಚಾಂದ್ ಸಿಂಗ್ ಮತ್ತು ಹಾಲಿಚರಣ್ ನಾರ್ಜರಿ   ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸ್ಟ್ರೈಕರ್  ಜೆಜೆ ಲಾಲ್‌ಪೆಕ್ಲುವಾ ಅವರು ಚೆಟ್ರಿಗೆ ಉತ್ತಮ ಜೊತೆ ನೀಡಿದರು.

ಗುರುಪ್ರೀತ್ ಸಿಂಗ್ ಮಿಂಚು : ಪಂದ್ಯದ ಮೊದಲ 15 ನಿಮಿಷಗಳಲ್ಲಿ ಪ್ರವಾಸಿ ತಂಡವು ಆಕ್ರಮಣಕಾರಿ ಆಟವಾಡಿತು.  ಆದರೆ ಈ ಹಂತದಲ್ಲಿ ಆತಿಥೇಯ ತಂಡದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರು ತಡೆಗೋಡೆಯಾದರು. ಕಿರ್ಗಿಸ್ತಾನದ ಸ್ಟ್ರೈಕರ್ ಮುರ್ಜೆವ್ ಮತ್ತು ವಿಟಾಲ್ ಲಕ್ಷ್ ಅವರ ಆಕ್ರಮಣವನ್ನು ಮೆಟ್ಟಿ ನಿಂತರು.  ತಮ್ಮ ತಂಡವನ್ನು ಅಪಾಯದಿಂದ ಪಾರು ಮಾಡಿದರು.

17ನೇ ನಿಮಿಷದಲ್ಲಿ ಭಾರತ ತಂಡವೂ ಪ್ರತಿದಾಳಿ ನಡೆಸಿತು. ಜಾಕಿಚಾಂದ್ ಸಿಂಗ್ ಅವರ ಚುರುಕಿನ ಆಟದಿಂದ ಚೆಂಡು ಗೋಲುಪೆಟ್ಟಿಗೆಯನ್ನು ಸಮೀಪಿಸಿತ್ತು. ಪಾಸ್ ಪಡೆದ ಜೆಜೆ ಲಾಲ್‌ಪೆಕ್ಲುವಾ ಅವರು ಗೋಲು ಹೊಡೆಯುವ ಪ್ರಯತ್ನ ಮಾಡಿದರು. ಆದರೆ ಕಿರ್ಗಿಸ್ತಾನ್ ಗೋಲ್‌ಕೀಪರ್ ಪಾವೆಲ್ ಅವರು ಡೈವ್ ಮಾಡಿ ಚೆಂಡನ್ನು ತಮ್ಮ ಹಿಡಿತಕ್ಕೆ ಪಡೆದರು.

31ನೇ ನಿಮಿಷ ಮತ್ತು 44ನೇ ನಿಮಿಷಗಳಲ್ಲಿಯೂ ಭಾರತದ ಪ್ರಯತ್ನಗಳನ್ನು ಪಾವೆಲ್ ವಿಫಲಗೊಳಿಸಿದರು. ಇಂಜುರಿ ಅವಧಿಯಲ್ಲಿಯೂ ಉಭಯ ತಂಡಗಳು ತುರುಸಿನ ಪೈಪೋಟಿ ನಡೆಸಿದವು. ಅದರೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ವಿರಾಮದ ನಂತರ ಆಟ ಮತ್ತಷ್ಟು ಬಿಸಿಯೇರಿತು. ಪ್ರೇಕ್ಷಕರ ಅಬ್ಬರವೂ ಮುಗಿಲುಮುಟ್ಟಿತು.  ‘ಚೆಟ್ರಿ..ಚೆಟ್ರಿ.. ಗೋಲು..ಬೇಕು..’ ಎಂಬ ಕೂಗುಗಳು ಪ್ರತಿಧ್ವನಿಸಿದವು.   32 ವರ್ಷ ವಯಸ್ಸಿನ ಸುನಿಲ್ ಚೆಟ್ರಿ ತಮ್ಮ ಅಭಿಮಾನಿಗಳಿಗೆ ಗೆಲುವಿನ ಕಾಣಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.