ಇಪೋ, ಮಲೇಷ್ಯ (ಪಿಟಿಐ): ಐದು ಬಾರಿಯ ಚಾಂಪಿಯನ್ ಭಾರತ ತಂಡದವರು ಸುಲ್ತಾನ್ ಅಜ್ಲನ್ ಷಾ ಕಪ್ ಹಾಕಿ ಟೂರ್ನಿಯಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಅಚ್ಚರಿ ಪ್ರದರ್ಶನ ತೋರಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಭಾನುವಾರ ನಡೆದ ಈ ಪಂದ್ಯದಲ್ಲಿ ಉತ್ಕೃಷ್ಟ ಆಟವಾಡಿದ ಭಾರತ ತಂಡದವರು 3-1 ಗೋಲುಗಳಿಂದ ಇಂಗ್ಲೆಂಡ್‌ಗೆ ಆಘಾತ ನೀಡಿದರು. ಈ ಪಂದ್ಯದ ಮೇಲೆ ಬಹುತೇಕ ಹತೋಟಿ ಸಾಧಿಸಿದ್ದ ಭಾರತ ಉತ್ತರಾರ್ಧದಲ್ಲಿ ಮೂರು ಗೋಲು ದಾಖಲಿಸಿತು.
ಆದರೆ 35ನೇ ನಿಮಿಷದಲ್ಲಿ ಇಂಗ್ಲೆಂಡ್‌ನ ಆ್ಯಷ್ಲೆ ಜಾಕ್ಸನ್ ಗೋಲು ಗಳಿಸಿ ಆರಂಭದ ಮುನ್ನಡೆಗೆ ಕಾರಣವಾಗಿದ್ದರು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಅವರು ಗೋಲಾಗಿ ಪರಿವರ್ತಿಸಿದರು. ಹಾಗಾಗಿ ವಿರಾಮದ ವೇಳೆಗೆ ಇಂಗ್ಲೆಂಡ್ 1-0 ಮುನ್ನಡೆ ಹೊಂದಿತ್ತು. ಮೊದಲಾರ್ಧದಲ್ಲಿ ಭಾರತ ತಂಡದವರು ಗೋಲು ಗಳಿಸುವ ಹಲವು ಅವಕಾಶಗಳನ್ನು ತಪ್ಪಿಸಿಕೊಂಡರು. ಎಸ್.ವಿ.ಸುನಿಲ್ ನೀಡಿದ ಅತ್ಯುತ್ತಮ ಪಾಸ್‌ಗಳು ವ್ಯರ್ಥವಾದವು.
ವಿರಾಮದ ಬಳಿಕ ಮತ್ತಷ್ಟು ಚುರುಕಿನಿಂದ ಆಡಿದ ಭಾರತಕ್ಕೆ ಯಶಸ್ಸು ದೊರೆಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. 42ನೇ ನಿಮಿಷದಲ್ಲಿ ಎಸ್.ಕೆ.ಉತ್ತಪ್ಪ ನೀಡಿದ ಸ್ಕ್ವೇರ್ ಪಾಸ್‌ಅನ್ನು ನಿಖರವಾಗಿ ಗುರಿ ಮುಟ್ಟಿಸಿದ್ದು ಶಿವೇಂದ್ರ ಸಿಂಗ್. ಇದಕ್ಕೂ ಮುನ್ನ ಗೋಲು ಗಳಿಸುವ ಎರಡು ಅವಕಾಶಗಳನ್ನು ಹಾಳು ಮಾಡಿಕೊಂಡಿದ್ದ ಶಿವೇಂದ್ರ ಈ ಬಾರಿ ಎಡವಲಿಲ್ಲ. ಅದಾಗಿ 10 ನಿಮಿಷಗಳಲ್ಲಿ ಭಾರತಕ್ಕೆ 2-1 ಮುನ್ನಡೆ ದೊರೆಯಿತು. 52ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಡ್ರ್ಯಾಗ್ ಫ್ಲಿಕ್ ಪರಿಣತ ಸಂದೀಪ್ ಸಿಂಗ್ ಗೋಲಾಗಿ ಪರಿವರ್ತಿಸಿದರು.
ಕೆಲವೇ ನಿಮಿಷದಲ್ಲಿ ಭಾರತಕ್ಕೆ ಮತ್ತೊಂದು ಅದ್ಭುತ ಅವಕಾಶ ದೊರೆತಿತ್ತು. ಆದರೆ ಇಂಗ್ಲೆಂಡ್‌ನ ಗೋಲ್ ಕೀಪರ್ ಜೇಮ್ಸ ಫೇರ್ ಈ ಬಾರಿ ಯಾವುದೇ ಎಡವಟ್ಟು ಮಾಡಲಿಲ್ಲ. ಈ ಹಂತದಲ್ಲಿ ಇಂಗ್ಲೆಂಡ್ ಆಟಗಾರರು ಸಮಬಲ ಸಾಧಿಸಲು ಸಾಕಷ್ಟು ಪ್ರಯತ್ನ ನಡೆಸಿದರು. ಕೋಚ್ ಕೂಡ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿ ನೋಡಿದರು. ಆದರೆ ಯಾವುದೇ ಯೋಜನೆ ಫಲ ನೀಡಲಿಲ್ಲ. ಬದಲಾಗಿ ಪಂದ್ಯ ಮುಗಿಯಲು ಇನ್ನೊಂದು ನಿಮಿಷ ಇದ್ದಾಗ ಇಂಗ್ಲೆಂಡ್‌ಗೆ ಮತ್ತೊಂದು ಆಘಾತ ಎದುರಾಯಿತು.
69ನೇ ನಿಮಿಷದಲ್ಲಿ ತುಷಾರ್ ಖಾಂಡೇಕರ್ ಗಳಿಸಿದ ಗೋಲು ಭಾರತದ ಮುನ್ನಡೆಯನ್ನು 3-1ಕ್ಕೆ ಹೆಚ್ಚಿಸಿತು. ಸಂದೀಪ್ ನೀಡಿದ ಪಾಸ್‌ಅನ್ನು ತುಷಾರ್ ಅಷ್ಟೇ ನಿಖರವಾಗಿ ಗುರಿ ಮುಟ್ಟಿಸಿದರು. ಜೊತೆಗೆ ಭಾರತ ಮೂರನೇ ಸ್ಥಾನ ಗಳಿಸಲು ಸಾಧ್ಯವಾಯಿತು.
ನಾಲ್ಕನೇ ರ‌್ಯಾಂಕ್‌ನ ಇಂಗ್ಲೆಂಡ್ ಇದಕ್ಕೂ ಮುನ್ನ ಭಾರತ ವಿರುದ್ಧ 3-2 ಗೋಲುಗಳ ಗೆಲುವು ಸಾಧಿಸಿತ್ತು. ಜೊತೆಗೆ ಟೂರ್ನಿಯ ಫೇವರಿಟ್ ತಂಡ ಎನಿಸಿತ್ತು. ಆದರೆ ಭಾರತ ತಂಡದವರು ಆ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಪಾಕ್‌ಗೆ ಕೊನೆಯ ಸ್ಥಾನ: ಈ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡದವರು ಕೊನೆಯ ಸ್ಥಾನ ಗಳಿಸಿದರು. ಈ ತಂಡದವರು ಏಳನೇ ಸ್ಥಾನ ಪಡೆಯಬೇಕಾಯಿತು. ಮಲೇಷ್ಯಾ ತಂಡವನ್ನು ಸೋಲಿಸಿದ ದಕ್ಷಿಣ ಕೊರಿಯಾ ಐದನೇ ಸ್ಥಾನ ಪಡೆಯಿತು.
ನ್ಯೂಜಿಲೆಂಡ್‌ಗೆ ಪ್ರಶಸ್ತಿ |
ಇಪೋ, ಮಲೇಷ್ಯ (ಪಿಟಿಐ): ನ್ಯೂಜಿಲೆಂಡ್ ತಂಡ ಸುಲ್ತಾನ್ ಅಜ್ಲನ್ ಷಾ ಕಪ್ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆಯಿತು. ಭಾನುವಾರ ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ಏಕೈಕ ಗೋಲಿನಿಂದ ಅರ್ಜೆಂಟೀನಾ ತಂಡವನ್ನು ಮಣಿಸಿ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿತು. ಆ್ಯಂಡಿ ಹೇವಾರ್ಡ್ 18ನೇ ನಿಮಿಷದಲ್ಲಿ ಗೋಲು ಗಳಿಸಿ ಕಿವೀಸ್ ತಂಡದ ಗೆಲುವಿನ ರೂವಾರಿ ಎನಿಸಿದರು.ಈ ಹಿಂದಿನ ಟೂರ್ನಿಗಳಲ್ಲೂ ನ್ಯೂಜಿಲೆಂಡ್ ಗಮನಾರ್ಹ ಪ್ರದರ್ಶನ ನೀಡಿತ್ತು. 2008 ಹಾಗೂ 2009ರ ಟೂರ್ನಿಗಳಲ್ಲಿ ಕಂಚಿನ ಪದಕವನ್ನು ಜಯಿಸಿತ್ತು. ಈ ತಂಡ ವಿಶ್ವ ರ್‍ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿದೆ. |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.