ADVERTISEMENT

ಸೂಪರ್ ಕಿಂಗ್ಸ್‌ಗೆ ಜಯದ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಡರ್ಬನ್ (ಪಿಟಿಐ): ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಮವಾರ ಇಲ್ಲಿ ನಡೆಯುವ ಯಾರ್ಕ್‌ಷೈರ್ ವಿರುದ್ಧದ ಪಂದ್ಯದಲ್ಲಿ  ಗೆಲುವಿನ ವಿಶ್ವಾಸ ಹೊಂದಿದೆ.

ಹಿಂದಿನ ಪಂದ್ಯದಲ್ಲಿ ಗೆಲುವು ಪಡೆದಿರುವ ಸೂಪರ್ ಕಿಂಗ್ಸ್ ಮತ್ತೊಂದು ಜಯದ ಮೂಲಕ ಟೂರ್ನಿಯಲ್ಲಿ ತನ್ನ ಹೋರಾಟ ಅಂತ್ಯಗೊಳಿಸುವ ಲೆಕ್ಕಾಚಾರದಲ್ಲಿದೆ. `ಬಿ~ ಗುಂಪಿನಿಂದ ಸಿಡ್ನಿ ಸಿಕ್ಸರ್ ಹಾಗೂ ಲಯನ್ಸ್ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಆದ್ದರಿಂದ ಇಂದಿನ ಪಂದ್ಯಕ್ಕೆ ಹೆಚ್ಚಿನ ಮಹತ್ವ ಇಲ್ಲ.

ಐಪಿಎಲ್ ತಂಡಗಳಾದ ಮುಂಬೈ ಇಂಡಿಯನ್ಸ್, ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ. ಸೂಪರ್ ಕಿಂಗ್ಸ್ ನಾಲ್ಕು ಪಾಯಿಂಟ್ಸ್ ಹೊಂದಿದೆ. ಯಾರ್ಕ್‌ಷೈರ್ ಎರಡು ಪಾಯಿಂಟ್ ಗಳಿಸಿ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ.ಆರಂಭದಿಂದಲೂ ಸೋಲಿನ ನಿರಾಸೆ ಅನುಭವಿಸಿದ್ದ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ಎದುರು ಗೆಲುವು ಸಾಧಿಸಿತ್ತು.

ಸತತ ವೈಫಲ್ಯ ಅನುಭವಿಸಿದ್ದ `ಮಹಿ~ ಪಡೆಯ ಬ್ಯಾಟ್ಸ್‌ಮನ್ ಹಾಗೂ ಬೌಲರ್‌ಗಳು ಈ ಪಂದ್ಯದಲ್ಲಿ ಮಿಂಚಿದ್ದರು. 2010 ಹಾಗೂ 2011ರ ಐಪಿಎಲ್ ಚಾಂಪಿಯನ್ ಹಾಗೂ ಎರಡು ವರ್ಷಗಳ ಹಿಂದೆ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದಿದ್ದ ಚೆನ್ನೈ ಈ ಸಲ `ಸೂಪರ್~ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.

ಪಾಯಿಂಟ್ ಹೆಚ್ಚಿಸಿಕೊಳ್ಳುವತ್ತ ಸಿಕ್ಸರ್ ಚಿತ್ತ: ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೋಮವಾರ ಹಣಾಹಣಿ ನಡೆಸಲಿವೆ. `ಬಿ~ ಗುಂಪಿನಿಂದ ನಾಲ್ಕರ ಘಟ್ಟ ಪ್ರವೇಶಿಸಿದ ಮೊದಲ ತಂಡವಾದ ಸಿಕ್ಸರ್ ಇನ್ನೊಂದು ಗೆಲುವು ಸಾಧಿಸಿ ಪಾಯಿಂಟ್ ಹೆಚ್ಚಿಸಿಕೊಳ್ಳವತ್ತ ಗಮನ ಹರಿಸಿದೆ.

ಶನಿವಾರದ ಪಂದ್ಯದಲ್ಲಿ ಸೂಪರ್ ಕಿಂಗ್ಸ್ ಎದುರು ಸೋಲು ಕಂಡಿದ್ದರೂ, ಮುಂಬೈ ಗೆಲುವಿನ ವಿಶ್ವಾಸ ಹೊಂದಿದೆ. ಡ್ವೇನ್ ಸ್ಮಿತ್, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮ ಅವರಂತಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳು ಮುಂಬೈ ತಂಡದಲ್ಲಿದ್ದಾರೆ. ಸೂಪರ್ ಕಿಂಗ್ಸ್ ವಿರುದ್ಧ ಅಬ್ಬರಿಸಿದ್ದ ದಿನೇಶ್ ಕಾರ್ತಿಕ್ (75) ಲಯ ಕಂಡುಕೊಂಡಿರುವುದು ಈ ತಂಡದ ಬಲ ಹೆಚ್ಚಿಸಿದೆ.

ಹರಭಜನ್ ಸಾರಥ್ಯದ ಮುಂಬೈ ಗೆಲುವು ಸಾಧಿಸಿದರೆ, ನಾಲ್ಕು ಪಾಯಿಂಟ್‌ಗಳು ತಂಡದ ಖಾತೆ ಸೇರಲಿವೆ. ಈ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲೂ ಗೆಲುವು ಸಾಧಿಸಿಲ್ಲ. ಕೊನೆಯ ಪಂದ್ಯದಲ್ಲಾದರೂ ಗೆಲುವು ಪಡೆಯುವ ಕನಸನ್ನು ತಂಡ ಹೊಂದಿದೆ.
 

ಇಂದಿನ ಪಂದ್ಯಗಳು

ಸೂಪರ್ ಕಿಂಗ್ಸ್-ಯಾರ್ಕ್‌ಷೈರ್

ಆರಂಭ: ಸಂಜೆ 5ಕ್ಕೆ

ಸಿಡ್ನಿ ಸಿಕ್ಸರ್-ಮುಂಬೈ ಇಂಡಿಯನ್ಸ್
ಆರಂಭ: ರಾತ್ರಿ: 9ಕ್ಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT