ನವದೆಹಲಿ (ಪಿಟಿಐ): ಸೈನಾ ನೆಹ್ವಾಲ್ ಸಾಧನೆಯ ಕಿರೀಟವನ್ನು ಮತ್ತೊಂದು ಗರಿ ಅಲಂಕರಿಸಿದೆ. ಬಿಡಬ್ಲ್ಯುಎಫ್ ವಿಶ್ವ ಸೂಪರ್ ಸರಣಿ ಬ್ಯಾಡ್ಮಿಂಟನ್‌ನಲ್ಲಿ ಸಿಂಗಲ್ಸ್ ಫೈನಲ್ ತಲುಪಿದ ಭಾರತದ ಮೊಟ್ಟ ಮೊದಲ ಆಟಗಾರ್ತಿ ಎನ್ನುವ ಶ್ರೇಯ ಈಗ ಹೈದರಾಬಾದ್ ಬೆಡಗಿಯದ್ದಾಗಿದೆ.
ಚೀನಾದ ಲಿಯುಜೊವುದಲ್ಲಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೈನಾ ವಿಶ್ವಾಸಪೂರ್ಣ ಆಟವಾಡಿ 21-17, 21-18ರಲ್ಲಿ ಡೆನ್ಮಾರ್ಕ್‌ನ ಟೈನ್ ಬೆಯುನ್ ವಿರುದ್ಧ ವಿಜಯ ಸಾಧಿಸಿ ಅಂತಿಮ ಹಣಾಹಣಿಗೆ ಸಜ್ಜಾದರು.
ಈ ಟೂರ್ನಿಯ ಲೀಗ್ ಹಂತದ ಪೈಪೋಟಿಯಲ್ಲಿ ಯಶಸ್ವಿಯಾಗಿ ಮುನ್ನುಗ್ಗಿ `ಬಿ~ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದ ಭಾರತದ ಪ್ರತಿಭಾವಂತ ಆಟಗಾರ್ತಿಯು ಆನಂತರವೂ ಯಶಸ್ಸಿನ ಹಾದಿಯಲ್ಲಿಯೇ ನಡೆದಿದ್ದಾರೆ. ಸತತ ನಾಲ್ಕು ಗೆಲುವಿನೊಂದಿಗೆ ಈಗ ಫೈನಲ್ ತಲುಪಿದ್ದಾರೆ.
ಬೆಯುನ್ ಎದುರು ಕೂಡ ಜಯ ಕಷ್ಟದ್ದಾಗಲಿಲ್ಲ. ನೇರ ಗೇಮ್‌ಗಳಲ್ಲಿ ಸೈನಾ ಎದುರಾಳಿಯನ್ನು ಸುಲಭವಾಗಿ ಮಣಿಸಿದರು. ಎರಡನೇ ಗೇಮ್‌ನಲ್ಲಿ ಒಂದು ಪಾಯಿಂಟ್ ಹೆಚ್ಚು ಬಿಟ್ಟುಕೊಟ್ಟರೂ, ಪಂದ್ಯದ ಮೇಲಿನ ಹಿಡಿತವನ್ನು ಒಂದಿಷ್ಟೂ ಸಡಿಲಗೊಳಿಸಲಿಲ್ಲ.
ವಿಶ್ವ ರ‌್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿರುವ ಡೆನ್ಮಾರ್ಕ್‌ನ ಆಟಗಾರ್ತಿಯನ್ನು ಕೇವಲ 35 ನಿಮಿಷಗಳಲ್ಲಿಯೇ ಮಣಿಸಿದ್ದು ವಿಶೇಷ. ಈ ಹಿಂದೆ ಇದೇ ಆಟಗಾರ್ತಿಯ ವಿರುದ್ಧ ಸೈನಾ ಮೂರು ಬಾರಿ ನಿರಾಸೆ ಹೊಂದಿದ್ದರು. ಈಗ ಒಂದು ಗೆಲುವಿನ ಸಂತಸ ಸಿಕ್ಕಿದೆ. ಅದಕ್ಕಿಂತ ಮುಖ್ಯವಾಗಿ ಟೂರ್ನಿಯ ಮಹತ್ವದ ಘಟ್ಟದಲ್ಲಿ ವಿಜಯ ಸಿಕ್ಕಿದೆ ಎನ್ನುವುದು ದೊಡ್ಡ ಸಂಭ್ರಮ.
2009ರಲ್ಲಿ ನಡೆದಿದ್ದ ಸೂಪರ್ ಸರಣಿ ಭಾರತದ ಜ್ವಾಲಾ ಗುಟ್ಟಾ ಹಾಗೂ ವಿ.ಡಿಜು ಅವರು ಡಬಲ್ಸ್‌ನಲ್ಲಿ ಫೈನಲ್ ತಲುಪಿದ್ದರು. ಆದರೆ ಸಿಂಗಲ್ಸ್‌ನಲ್ಲಿ ಭಾರತದವರು ಯಾರೂ ಇಲ್ಲಿಯವರೆಗೆ ಅಂತಿಮ ಘಟ್ಟ ತಲುಪಿರಲಿಲ್ಲ. ಸೈನಾ ಅವರು ಫೈನಲ್‌ನಲ್ಲಿ ವಿಶ್ವ ಮೊದಲ ಕ್ರಮಾಂಕ ಆಟಗಾರ್ತಿ ಚೀನಾದ ಯಿಹಾನ್ ವಾಂಗ್ ಅವರನ್ನು ಎದುರಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.