ADVERTISEMENT

ಸೆಮಿಫೈನಲ್ ಕನಸಲ್ಲಿ ರಾಯಲ್ ಚಾಲೆಂಜರ್ಸ್

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 19:30 IST
Last Updated 4 ಅಕ್ಟೋಬರ್ 2011, 19:30 IST

ಬೆಂಗಳೂರು: ಸಾಮರ್ಸೆಟ್ ವಿರುದ್ಧ ಭರ್ಜರಿ ಗೆಲುವು ಪಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಸೌತ್ ಆಸ್ಟ್ರೇಲಿಯಾ ರೆಡ್‌ಬ್ಯಾಕ್ಸ್ ತಂಡವನ್ನು ಎದುರಿಸಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯುವ ಈ `ಕ್ವಾರ್ಟರ್ ಫೈನಲ್~ ಹೋರಾಟದಲ್ಲಿ ಜಯ ಸಾಧಿಸಿದರೆ, ಡೇನಿಯಲ್ ವೆಟೋರಿ ಬಳಗ ಸೆಮಿಫೈನಲ್ ಪ್ರವೇಶಿಸಲಿದೆ. ಸೋಲು ಎದುರಾದರೆ ಅಥವಾ ಪಂದ್ಯ ಮಳೆಯಿಂದ ರದ್ದುಗೊಂಡರೆ ಆರ್‌ಸಿಬಿಯ ಕನಸು ಅಸ್ತಮಿಸಲಿದೆ.

ಆರ್‌ಸಿಬಿ ಒಳಗೊಂಡಂತೆ `ಬಿ~ ಗುಂಪಿನಲ್ಲಿರುವ ಎಲ್ಲ ಐದು ತಂಡಗಳಿಗೆ ನಾಲ್ಕರಘಟ್ಟ ಪ್ರವೇಶಿಸುವ ಅವಕಾಶವಿದೆ. ಆದರೆ ಅದೃಷ್ಟ ಯಾವ ಎರಡು ತಂಡಗಳಿಗೆ ಒಲಿಯುತ್ತದೆ ಎಂಬುದನ್ನು ನೋಡಬೇಕು. ಬುಧವಾರ ಇದೇ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಸಾಮರ್ಸೆಟ್ ಹಾಗೂ ವಾರಿಯರ್ಸ್ ಎದುರಾಗಲಿವೆ.

ಮೂರು ಪಂದ್ಯಗಳಿಂದ ನಾಲ್ಕು ಪಾಯಿಂಟ್ ಹೊಂದಿರುವ ವಾರಿಯರ್ಸ್ `ಬಿ~ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಈ ತಂಡದ ರನ್‌ರೇಟ್ (+0.592) ಉತ್ತಮವಾಗಿದೆ. ಲೀಗ್ ವ್ಯವಹಾರ ಕೊನೆಗೊಳಿಸಿರುವ ಕೋಲ್ಕತ್ತ ನೈಟ್ ರೈಡರ್ಸ್ (ರನ್‌ರೇಟ್ +0.306) ಎರಡನೇ ಸ್ಥಾನದಲ್ಲಿದೆ. ಮೂರು ಪಂದ್ಯಗಳಿಂದ ತಲಾ ಮೂರು ಪಾಯಿಂಟ್ ಕಲೆಹಾಕಿರುವ ಸೌತ್ ಆಸ್ಟ್ರೇಲಿಯಾ (-0.775) ಮತ್ತು ಸಾಮರ್ಸೆಟ್ (-1.133) ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ.

ಆರ್‌ಸಿಬಿ ಮೂರು ಪಂದ್ಯಗಳಿಂದ ಎರಡು ಪಾಯಿಂಟ್ ಹೊಂದಿದ್ದು, ಕೊನೆಯ ಸ್ಥಾನದಲ್ಲಿದೆ. ಆದರೆ ರನ್‌ರೇಟ್ (+0.438) ಉತ್ತಮವಾಗಿದೆ. ಇದರಿಂದ ಆರ್‌ಸಿಬಿ ಸೆಮಿಫೈನಲ್ ಕನಸು ಜೀವಂತವಾಗಿದೆ. ಆದರೆ `ಅದೃಷ್ಟ~ವೂ ಜೊತೆಗಿರುವುದು ಅಗತ್ಯ. ಮೊದಲ ಪಂದ್ಯದಲ್ಲಿ ವಾರಿಯರ್ಸ್ ತಂಡ ಸಾಮರ್ಸೆಟ್ ವಿರುದ್ಧ ಜಯ ಪಡೆಯಬೇಕು. ಹಾಗಾದಲ್ಲಿ ಸೌತ್ ಆಸ್ಟ್ರೇಲಿಯಾ ತಂಡವನ್ನು ಮಣಿಸಿದರೆ ಆರ್‌ಸಿಬಿಗೆ ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತ.

ಇಂದಿನ ಪಂದ್ಯಗಳು

ಸಾಮರ್ಸೆಟ್- ವಾರಿಯರ್ಸ್ (ಆರಂಭ: ಸಂಜೆ: 4.00ಕ್ಕೆ)
ರಾಯಲ್ ಚಾಲೆಂಜರ್ಸ್ ಬೆಂಗಳೂರು- ಸೌತ್ ಆಸ್ಟ್ರೇಲಿಯಾ (ರಾತ್ರಿ 8.00ಕ್ಕೆ)
ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ನೇರ ಪ್ರಸಾರ: ಸ್ಟಾರ್ ಕ್ರಿಕೆಟ್
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.