ಪ್ಯಾರಿಸ್ (ರಾಯಿಟರ್ಸ್/ಎಎಫ್‌ಪಿ): ಅಗ್ರ ಶ್ರೇಯಾಂಕದ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಇಲ್ಲಿ ನಡೆಯು ತ್ತಿರುವ ಫ್ರೆಂಚ್ ಓಪನ್ ಗ್ರ್ಯಾಂಡ್‌ಸ್ಲಾಮ್ ಟೆನಿಸ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನಲ್ಲೇ ಆಘಾತಕ್ಕೆ ಒಳಗಾಗಿದ್ದಾರೆ.
ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಬುಧವಾರ ನಡೆದ ಮಹಿಳೆಯರ ವಿಭಾಗದ ಸಿಂಗಲ್ಸ್ ಪಂದ್ಯದಲ್ಲಿ ಸ್ಪೇನ್‌ನ ಗಾರ್ಬಿನ್ ಮುಗುರುಜಾ 6–2, 6–2ರಲ್ಲಿ ಹಾಲಿ ಚಾಂಪಿಯನ್ ಸೆರೆನಾ ಅವರನ್ನು ಮಣಿಸಿ ಮೂರನೇ ಸುತ್ತು ಪ್ರವೇಶಿಸಿದರು.
17 ಬಾರಿಯ ಗ್ರ್ಯಾಂಡ್‌ಸ್ಲಾಮ್ ಚಾಂಪಿಯನ್ ಸೆರೆನಾ ಅವರು ಈ ಪಂದ್ಯದಲ್ಲಿ ಯಾವುದೇ ಹಂತದಲ್ಲಿ 35ನೇ ರ್‍ಯಾಂಕ್‌ನ ಆಟಗಾರ್ತಿಗೆ ಸವಾಲಾಗಲಿಲ್ಲ. 20ರ ಹರೆಯದ ಆಟಗಾರ್ತಿ ಗಾರ್ಬಿನ್ ಎರಡೂ ಸೆಟ್‌ಗಳಲ್ಲಿ ಪಾರಮ್ಯ ಮೆರೆದರು.
ಮಂಗಳವಾರವಷ್ಟೇ ಎರಡನೇ ರ್‍ಯಾಂಕ್‌ನ ಆಟಗಾರ್ತಿ ಚೀನಾದ ಲೀ ನಾ ಸೋಲು ಕಂಡಿದ್ದರು. ಇದರೊಂದಿಗೆ ಮೊದಲ ಹಾಗೂ ಎರಡನೇ ರ್‍ಯಾಂಕ್ ಆಟಗಾರ್ತಿಯರು ಟೂರ್ನಿಯಿಂದ ಹೊರಬಿದ್ದಂತಾಗಿದೆ.
‘ಸರಿಯಾಗಿ ಸರ್ವ್ ಮಾಡಲು ಕೂಡ ನನಗೆ ಸಾಧ್ಯವಾಗಲಿಲ್ಲ. ಆದರೆ ಯಾವಾಗಲೂ ಅತ್ಯುತ್ತಮ ಫಾರ್ಮ್‌ನಲ್ಲಿರಲು ಸಾಧ್ಯವಿಲ್ಲ. ಈ ಸೋಲಿನೊಂದಿಗೆ ಎಲ್ಲವೂ ಮುಗಿದು ಹೋಯಿತು ಎಂದು ಭಾವಿಸಬೇಕಾಗಿಲ್ಲ’ ಎಂದು ಸೆರೆನಾ ಪ್ರತಿಕ್ರಿಯಿಸಿದ್ದಾರೆ.
‘ನನ್ನ ಟೆನಿಸ್ ಜೀವನದ ಅತಿ ದೊಡ್ಡ ಗೆಲುವು ಇದು’ ಎಂದು ಗಾರ್ಬಿನ್ ಪ್ರತಿಕ್ರಿಯಿಸಿದ್ದಾರೆ. ಗಾರ್ಬಿನ್ ಮೂರನೇ ಸುತ್ತಿನ ಪಂದ್ಯದಲ್ಲಿ ಸ್ಲೊವಾಕಿಯಾದ ಅನಾ ಕರೋಲಿನಾ ಶ್ಮಿಡ್ಲೊವಾ ಎದುರು ಆಡಲಿದ್ದಾರೆ. ಶ್ಮಿಡ್ಲೊವಾ 2–6, 6–3, 6–4ರಲ್ಲಿ ಸೆರೆನಾ ಸಹೋದರಿ ವೀನಸ್ ವಿಲಿಯಮ್ಸ್ ಎದುರು ಗೆಲುವು ಸಾಧಿಸಿದರು.
ಮಹಿಳೆಯರ ವಿಭಾಗದ ಇನ್ನುಳಿದ ಪಂದ್ಯಗಳಲ್ಲಿ ಸ್ಪೇನ್‌ನ ಕಾರ್ಲಾ ಸಾರೆಜ್ ನವಾರೊ 7–5, 1–6, 6–4ರಲ್ಲಿ ಸ್ವಿಟ್ಜರ್‌ಲೆಂಡ್‌ನ ಟಿಮಿಯಾ ಬಾಸಿನ್‌ಸ್ಕಿ ಎದುರೂ, ಜರ್ಮನಿಯ ಆ್ಯಂಜಲಿಕ್ ಕರ್ಬರ್ 6–2, 7–5ರಲ್ಲಿ ಅಮೆರಿಕದ ವಾರ್ವರಾ ಲೆಪ್ಚೆಂಕೊ ವಿರುದ್ಧವೂ, ಸ್ವೀಡನ್ ಜೊಹಾನಾ ಲಾರ್ಸೊನ್ 5–7, 6–4, 6–2ರಲ್ಲಿ ಇಟಲಿಯ ಫ್ಲೆವಿಯಾ ಪೆನೆಟಾ ಮೇಲೂ, ಕೆನಡಾದ ಯುಜೆನಿ ಬಾಚರ್ಡ್ 2–6, 6–2, 6–1ರಲ್ಲಿ ಜರ್ಮನಿಯ ಜೂಲಿಯಾ ಜಾರ್ಜಸ್ ಎದುರೂ ಜಯ ಗಳಿಸಿ ಮೂರನೇ ಸುತ್ತು ಪ್ರವೇಶಿಸಿದರು.
ಪುರುಷರ ವಿಭಾಗದಲ್ಲಿ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಹಾಗೂ ಸರ್ಬಿಯಾದ ನೊವಾಕ್ ಜೊಕೊವಿಚ್ ಮೂರನೇ ಸುತ್ತು ತಲುಪಿದ್ದಾರೆ. ನಾಲ್ಕನೇ ಶ್ರೇಯಾಂಕದ ಫೆಡರರ್ 6–3, 6–4, 6–4ರಲ್ಲಿ ಅರ್ಜೆಂಟೀನಾದ ಡಿಯಾಗೊ ಶ್ವಾರ್ಟ್ಜ್‌ಮನ್ ಎದುರು ಗೆದ್ದರು. ಎರಡನೇ ಶ್ರೇಯಾಂಕದ ಜೊಕೊವಿಚ್ 6–1, 6–4, 6–2ರಲ್ಲಿ ಫ್ರಾನ್ಸ್‌ನ ಜೆರೋಮಿ ಚಾರ್ಡಿ ವಿರುದ್ಧ ಜಯ ಗಳಿಸಿದರು.
ಇನ್ನಿತರ ಪಂದ್ಯಗಳಲ್ಲಿ ಫ್ರಾನ್ಸ್‌ನ ಜೋ ವಿಲ್‌ಫ್ರೆಡ್ ಸೊಂಗಾ 6–2, 6–3, 6–4ರಲ್ಲಿ ಆಸ್ಟ್ರಿಯದ ಜುರ್ಗನ್ ಮೆಲ್ಜರ್ ಎದುರೂ, ಸ್ಪೇನ್ ಟಾಮಿ ರಾಬ್ರೆಡೊ 6–2, 6–3, 6–3ರಲ್ಲಿ ಫ್ರಾನ್ಸ್‌ನ ಕೆನಿ ಡಿ ಶೆಪ್ಪರ್ ವಿರುದ್ಧವೂ ಜಯ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.