ADVERTISEMENT

ಸೋತು ಸುದ್ದಿ ಮಾಡಿದ್ದ ಇಂಗ್ಲೆಂಡ್!

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 18:40 IST
Last Updated 22 ಫೆಬ್ರುವರಿ 2011, 18:40 IST

1983ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಸೋತು ಸುದ್ದಿ ಮಾಡಿದರೆ, ಗೆದ್ದ ಭಾರತ, ಪ್ರಶಂಸೆಗೆ ಗಮನಕೊಡದೆ ಸಂಯಮದಿಂದ ವರ್ತಿಸಿ, ತನ್ನ ಮಾನಸಿಕ ಸ್ಥಿತಿಯನ್ನು ಬಲಪಡಿಸಿಕೊಂಡಿತು. ಕೋಟಿ, ಕೋಟಿ ಬ್ರಿಟಿಷರ ನಿರಾಸೆ, ಕೋಲಾಹಲಗಳಿಗೆ ಪ್ರತಿಯಾಗಿ ನಾಯಕ ಕಪಿಲ್ ದೇವ್ ದಿಟ್ಟತನ, ಆತ್ಮ ವಿಶ್ವಾಸ ಮತ್ತು ಮಾನಸಿಕ ಪಕ್ವತೆಯನ್ನು ಕಾಯ್ದುಕೊಂಡಿದ್ದರು.

1936ರ ಮ್ಯೂನಿಕ್ ಒಲಿಂಪಿಕ್ಸ್ ಹಾಕಿ ಫೈನಲ್ ಪಂದ್ಯ ನೋಡಲು ಬಹಳ ಉತ್ಸುಕತೆಯಿಂದ ಮೈದಾನಕ್ಕೆ ಬಂದಿದ್ದ ಅಡಾಲ್ಫ್ ಹಿಟ್ಲರ್, ‘ಅದು ಹೇಗೆ ಈ ಇಂಡಿಯಾ ಗೆಲ್ಲುತ್ತದೆ, ನೋಡಿಯೇ ಬಿಡ್ತೀನಿ’ ಎಂದು ಅಬ್ಬರಿಸಿದ್ದ. ಕೊನೆಯಲ್ಲಿ ಭಾರತ 8-1 ಗೋಲುಗಳಿಂದ ಜರ್ಮನಿಯನ್ನು ಸದೆ ಬಡಿದಾಗ ಅದೇ ಹಿಟ್ಲರ್ ತಾವಾಗಿಯೇ ಮುಂದಾಗಿ ಹಾಕಿ ಮಾಂತ್ರಿಕ ಧ್ಯಾನಚಂದ್‌ರ ‘ಕಪ್ಪು’ ಕೈಗಳನ್ನು ಕುಲುಕಿದ. ಅದು ಅವನಿಗೆ ಗೋಲ್ಡನ್ ಹ್ಯಾಂಡ್‌ಶೇಕ್ ಆಗಿರಬೇಕು.

‘ಜರ್ಮನಿಗೆ ಬಂದು ಬಿಡು. ನಿನ್ನನ್ನು ನನ್ನ ಸೇನೆಯ ಮೇಜರ್ ಮಾಡುತ್ತೇನೆ’ ಎಂದು ಪುಸಲಾಯಿಸಿದ. ಕೈಕುಲುಕುವಿಕೆಯಿಂದ ಅಷ್ಟೇನೂ ಸಂತೋಷಪಡದ ಧ್ಯಾನಚಂದ್, ‘ಒಬ್ಬ ಸಾಮಾನ್ಯ ಸೈನಿಕನಾಗಿಯೇ ಮಾತೃಭೂಮಿಯ ಸೇವೆ ಸಲ್ಲಿಸುತ್ತೇನೆ. ನಿಮ್ಮ ಮೇಜರ್‌ಗಿರಿಯನ್ನು ನೀವೇ ಇಟ್ಟುಕೊಳ್ಳಿರಿ’ ಎಂದು ಸರ್ವಾಧಿಕಾರಿಯ ಕೊಡುಗೆಯನ್ನು ತಿರಸ್ಕರಿಸಿಬಿಟ್ಟರು.

ಅದೇ ಪ್ರಕಾರದ ಇನ್ನೊಂದು ಘಟನೆಯಲ್ಲಿ ಭಾರತ-ಇಂಗ್ಲೆಂಡ್ ವಿಶ್ವಕಪ್ ಸೆಮಿಫೈನಲ್ ವೀಕ್ಷಿಸಲು ಸ್ವತಃ ಬ್ರಿಟಿಷ್ ಪ್ರಧಾನಮಂತ್ರಿ ಬಂದು ಹೋದರು. ತಮ್ಮ ಆಟಗಾರರನ್ನು ಹುರಿದುಂಬಿಸಿದರು. ಮೇಲಿಂದ ಮೇಲೆ ತಮ್ಮ ಕಚೇರಿಗೆ ವಿವರಗಳನ್ನು ತರಿಸಿಕೊಳ್ಳುತ್ತಿದ್ದರು. 200 ವರ್ಷಗಳ ಕಾಲ ತಮ್ಮ ದೇಶದ ಗುಲಾಮರಾಗಿದ್ದ ಭಾರತೀಯರಿಗೆ ಈ ಧಾಷ್ಠ್ಯವೇ ಎಂದು ಹಲುಬಿದರು.

22ನೇ ಜೂನ್ ಬ್ರಿಟನ್ನಿಗೆ ಶೋಕ ಆಚರಣೆಯ ದಿನವಾಗಿತ್ತು. ಕ್ರೀಡಾಂಗಣದಲ್ಲಿಯೇ ಬ್ರಿಟಿಷ್ ಪ್ರಜೆಗಳು ಭಾರತೀಯ ಪ್ರೇಕ್ಷಕರ ಮೇಲೆ ಕೈಮಾಡಿದರು. ‘ಹೆಡಿಂಗ್ಲೆಯಲ್ಲಿ ಆಡಿದ್ದರೆ ನಾವು ಗೆಲ್ಲುತ್ತಿದ್ದೆವೇನೋ’ ಎಂದು ಇಂಗ್ಲೆಂಡ್ ನಾಯಕ ಬಾಬ್ ವಿಲ್ಲಿಸ್ ಅಪಸ್ವರ ಎತ್ತಿದರು. ಭಾರತೀಯರೆಂದರೆ ಗೆಲ್ಲುವವರೇ ಅಲ್ಲ. ಅದರ ಸೆಮಿಫೈನಲ್ ಪ್ರವೇಶ ಅದೃಷ್ಟದ ಆಟ, ಒಂದು ಆಕಸ್ಮಿಕ ಎಂದು ಬ್ರಿಟಿಷ್ ಪತ್ರಿಕೆಗಳು ಬರೆದವು. ಓಲ್ಡ್ ಟ್ರಾಫರ್ಡ್‌ನ ಕೆಂಪು ಮಣ್ಣಿನಲ್ಲಿ ಹುಗಿದು ಬಿಡುವ ಹುಮ್ಮಸ್ಸು ಅವರದಾಗಿತ್ತು. ಕೊನೆಗೆ ಇಂಗ್ಲೆಂಡ್ ತಂಡಕ್ಕೆ ಉಗಿದವರೂ ಅವರೇ! 

ಅಲೆನ್ ಲ್ಯಾಂಬ್, ಟ್ಯಾವರೆ, ಗ್ರೀಮ್ ಫೌಲರ್, ಡೆವಿಡ್ ಗಾವರ್ ಅವರಂಥ ಪ್ರಚಂಡ ಬ್ಯಾಟ್ಸ್‌ಮನ್‌ಗಳು ವಿಲ್ಲಿಸ್, ಡಿಲ್ಲಿ, ಅಲಾಟ್‌ರಂಥ ವೇಗದ ಬೌಲರ್‌ಗಳು, ಬಾತಮ್ ಅವರಂಥ ಪರಿಣಾಮಕಾರಿ ಆಲ್ ರೌಂಡರ್ ಭಾರತೀಯ ತಂಡದಲ್ಲಿ ಇರಲಿಲ್ಲ. ಈ ಬಲ ಕಂಡು ವೆಸ್ಟ್ ಇಂಡಿಯನ್ನರಿಗೂ ಭಯ. ಮೊಹಿಂದರ್ ಅಮರನಾಥ್, ಯಶಪಾಲ್ ಶರ್ಮಾ, ಮದನಲಾಲ್, ರೋಜರ್ ಬಿನ್ನಿ ಅವರಂಥ ಸ್ವಲ್ಪ ಕಡಿಮೆ ದರ್ಜೆಯ (ಕಪಿಲ್ ಒಬ್ಬರನ್ನು ಬಿಟ್ಟು) ಆಟಗಾರರು, ನಾಯಕನ ಸಂಯೋಜಿತ ತಂತ್ರ ಕೌಶಲ್ಯದಿಂದ ತಮಗಿಂತ ಶಕ್ತರಾದವರನ್ನು ಕಟ್ಟಿ ಹಾಕಿದರು.

1983ರ ಜೂನ್ 22ರಂದು, ಭಾರತ ತನ್ನ ಮೊದಲ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಹಣಿದ ಸ್ಥಳ, ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಈ ಸೆಮಿಫೈನಲ್ ಪಂದ್ಯ ನಡೆಯಿತು. ಇಂಗ್ಲೆಂಡಿಗೆ ಮೊದಲು ಬ್ಯಾಟಿಂಗ್ ಅವಕಾಶ ಸಿಗದರಿಲಿ ಎಂದು ಕಪಿಲ್ ದೇವ್ ಪ್ರಾರ್ಥಿಸಿದ್ದರೂ ಅವರ ಇಚ್ಛೆ ಈಡೇರಲಿಲ್ಲ. ಕಪಿಲ್ ಕ್ಷೇತ್ರರಕ್ಷಣೆಗೆ ಒತ್ತುಕೊಟ್ಟು ದೊಡ್ಡ ಹೊಡೆತಗಳಿಗೆ ಎದುರಾಳಿಗಳು ಯತ್ನಿಸದ ಹಾಗೆ ತಂತ್ರ ರೂಪಿಸಿದರು. ಹೆಚ್ಚು ಕಡಿಮೆ ಎಲ್ಲ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳೇ ಹೆಚ್ಚು ಪ್ರಭಾವ ಬೀರಿದ್ದರೆ, ಈ ಪಂದ್ಯದಲ್ಲಿ ಬೌಲರ್‌ಗಳು ಮಹತ್ವದ ಪಾತ್ರ ನಿರ್ವಹಿಸಿದರು.

ಬ್ರಿಟಿಷ್ ಪತ್ರಿಕೆಗಳ ಧ್ವನಿ ಏಕಾಏಕಿ ಬದಲಾಗಿತ್ತು. ‘ಅದೃಷ್ಟದ ಆಟ’ ಎಂದು ಭಾರತದ ಮೊದಲಿನ ಗೆಲುವುಗಳನ್ನು ಹಂಗಿಸಿದ ಜಾನ್ ಥಿಕನ್ಸ್ ತಮ್ಮ ಟೀಕಾಸ್ತ್ರವನ್ನು ಉಸಿರುಬಿಡದೆ ನುಂಗಿ ಸೋಲನ್ನು ಒಪ್ಪಿಕೊಂಡರು. ಇದೇ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಮ್ಮ ಬಿ.ಎಸ್. ಚಂದ್ರಶೇಖರ ಇಂಗ್ಲೆಂಡನ್ನು ಹೂತು ಹಾಕಿದ್ದನ್ನು ಆಗ ಯಾರೂ ಸ್ಮರಿಸಲಿಲ್ಲ. ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಹಣಿದ ವೆಸ್ಟ್ ಇಂಡೀಸ್‌ನ ನಾಯಕ ಕ್ಲೈವ್ ಲಾಯ್ಡ್ ಅವರನ್ನು ಭಾರತೀಯರ ವಿಜಯದ ಬಗ್ಗೆ ಪ್ರಶ್ನಿಸಿದಾಗ ‘ಅವರು ಚೆನ್ನಾಗಿ ಆಡುತ್ತಿದ್ದಾರೆ. ಒಳ್ಳೆಯ  ತಂಡಗಳನ್ನು ಸೋಲಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ’ ಎಂದು ಹಾರೈಸಿದ್ದರು.

ಲಾಯ್ಡೆ ಅವರ ಹಾರೈಕೆ ಸುಳ್ಳಾಗಲಿಲ್ಲ. ಭಾರತದ ವಿಶ್ವಕಪ್ ವಿಜಯ ಸಾಧ್ಯವಾಯಿತು. ಈ ಬಾರಿ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಪಡೆಯು ಚಾಂಪಿಯನ್ ಆಗಬೇಕೆನ್ನುವ ನಮ್ಮ ಹಾರೈಕೆಯೂ ಸುಳ್ಳಾಗದಿರಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.