ADVERTISEMENT

ಸೋತ ತಂಡಗಳಿಗೆ ಜಯದ ಹಂಬಲ

ಇಂದು ನ್ಯೂಜಿಲೆಂಡ್‌–ಬಾಂಗ್ಲಾ ನಡುವೆ ಪೈಪೋಟಿ; ಕೇನ್‌, ತಮೀಮ್‌ ಆಕರ್ಷಣೆ

ಪಿಟಿಐ
Published 8 ಜೂನ್ 2017, 19:30 IST
Last Updated 8 ಜೂನ್ 2017, 19:30 IST
ಕೇನ್ ವಿಲಿಯಮ್ಸನ್
ಕೇನ್ ವಿಲಿಯಮ್ಸನ್   

ಕಾರ್ಡಿಫ್‌: ನ್ಯೂಜಿಲೆಂಡ್‌ ಮತ್ತು ಬಾಂಗ್ಲಾದೇಶ ತಂಡಗಳು ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ‘ಎ’ ಗುಂಪಿನ ತಮ್ಮ ಕೊನೆಯ ಪಂದ್ಯದಲ್ಲಿ ಶುಕ್ರವಾರ ಮುಖಾಮುಖಿಯಾಗಲಿವೆ.

ಸೋಫಿಯಾ ಗಾರ್ಡನ್ಸ್‌ ಅಂಗಳದಲ್ಲಿ ನಡೆಯುವ ಈ ಪಂದ್ಯ ಉಭಯ ತಂಡ ಗಳ ಪಾಲಿಗೂ ಮಹತ್ವದ್ದೆನಿಸಿದೆ. ಈ ಹಣಾಹಣಿಯಲ್ಲಿ ಗೆದ್ದ ತಂಡದ ಸೆಮಿಫೈನಲ್‌ ಕನಸು ಜೀವಂತವಾಗಿರಲಿದೆ. ಸೋತ ತಂಡ ಟೂರ್ನಿಯಿಂದ ಹೊರ ಬೀಳಲಿದೆ.

‘ಎ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಇಂಗ್ಲೆಂಡ್‌ ಮೊದಲ ಸ್ಥಾನದಲ್ಲಿದ್ದು, ಎರಡು ಅಂಕ ಕಲೆಹಾಕಿರುವ ಆಸ್ಟ್ರೇಲಿಯಾ ನಂತರದ ಸ್ಥಾನ ಹೊಂದಿದೆ. ತಲಾ ಒಂದು ಪಾಯಿಂಟ್‌ ಸಂಗ್ರಹಿಸಿರುವ ಬಾಂಗ್ಲಾ ಮತ್ತು ನ್ಯೂಜಿಲೆಂಡ್‌ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿವೆ.

ADVERTISEMENT

ಇಂಗ್ಲೆಂಡ್‌ ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿದೆ. ಈ ತಂಡ ಅಂತಿಮ ಲೀಗ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಈ ಹೋರಾಟದಲ್ಲಿ ಆಸ್ಟ್ರೇಲಿಯಾ ಸೋತರೆ, ನ್ಯೂಜಿಲೆಂಡ್‌ ಇಲ್ಲವೇ ಬಾಂಗ್ಲಾ ದೇಶಕ್ಕೆ ನಾಲ್ಕರ ಘಟ್ಟಕ್ಕೆ ಲಗ್ಗೆ ಇಡುವ ಅದೃಷ್ಟ ಒಲಿಯಲಿದೆ. ಒಂದೊಮ್ಮೆ ಮಳೆ ಬಂದು ಪಂದ್ಯರದ್ದಾದರೆ ಉತ್ತಮ ರನ್‌ ಸರಾಸರಿ ಹೊಂದಿರುವ ಕಾಂಗರೂಗಳ ನಾಡಿನ ತಂಡ ಸೆಮಿಫೈನಲ್‌ ಪ್ರವೇಶಿಸಲಿದೆ.

ಲೀಗ್‌ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ಕನಸು ಕಂಡಿತ್ತು. ಆದರೆ ಮಳೆಯಿಂದಾಗಿ ಪಂದ್ಯ ರದ್ದಾಗಿತ್ತು. ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಕಿವೀಸ್‌ ನಾಡಿನ ತಂಡ 87ರನ್‌ಗಳಿಂದ ಸೋತಿತ್ತು. ನಾಯಕ ಕೇನ್‌ ವಿಲಿಯಮ್ಸನ್‌ ಅವರನ್ನು ಬಿಟ್ಟು ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಕಲೆಹಾಕಲು ವಿಫಲರಾಗಿದ್ದರು.

ಬಲಗೈ ಬ್ಯಾಟ್ಸ್‌ಮನ್‌ ವಿಲಿಯಮ್ಸನ್‌, ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ್ದರೆ, ಇಂಗ್ಲೆಂ ಡ್‌ ವಿರುದ್ಧ 87ರನ್‌ ಗಳಿಸಿ ಗಮನ ಸೆಳೆದಿದ್ದರು. ಅಮೋಘ ಲಯದಲ್ಲಿರುವ ಅವರು ಬಾಂಗ್ಲಾ ಎದುರೂ ರನ್‌ ಮಳೆ ಸುರಿಸುವ ವಿಶ್ವಾಸ ಹೊಂದಿದ್ದಾರೆ.

ಅವರಿಗೆ ಮಾರ್ಟಿನ್‌ ಗಪ್ಟಿಲ್‌, ರಾಸ್‌ ಟೇಲರ್‌, ನಿಯೆಲ್‌ ಬ್ರೂಮ್‌, ಲೂಕ್‌ ರೊಂಚಿ, ಜೇಮ್ಸ್‌ ನೀಶಮ್‌ ಮತ್ತು ಕೋರಿ ಆ್ಯಂಡರ್‌ಸನ್‌ ಅವರಿಂದ ಸೂಕ್ತ ಬೆಂಬಲ ಸಿಗುವುದು ಅಗತ್ಯವಾಗಿದೆ. ವೇಗಿ ಟಿಮ್‌ ಸೌಥಿ ಮತ್ತು ಆ್ಯಡಮ್‌ ಮಿಲ್ನೆ ಅವರು ಬೌಲಿಂಗ್‌ನಲ್ಲಿ ತಂಡದ ಶಕ್ತಿಯಾಗಿದ್ದಾರೆ.

ಬಾಂಗ್ಲಾಗೆ ಗೆಲುವಿನ ತವಕ: ಬಾಂಗ್ಲಾದೇಶ ಕೂಡ ಗೆಲುವಿನ ತವಕದಲ್ಲಿದೆ. ಡಬ್ಲಿನ್‌ನಲ್ಲಿ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಮಷ್ರಫೆ ಮೊರ್ತಜಾ ಪಡೆ ಕಿವೀಸ್‌ ನಾಡಿನ ತಂಡವನ್ನು ಮಣಿಸಿತ್ತು. ಹಿಂದಿನ ಈ ಗೆಲುವು ತಂಡದ ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ. ಆರಂಭಿಕ ಆಟಗಾರ ತಮೀಮ್‌ ಇಕ್ಬಾಲ್‌, ಬ್ಯಾಟಿಂಗ್‌ನಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಶತಕ ಗಳಿಸಿ ಸಂಭ್ರಮಿಸಿದ್ದ ಅವರು ಆಸ್ಟ್ರೇಲಿಯಾ ವಿರುದ್ಧ 95ರನ್‌ ಬಾರಿಸಿದ್ದರು. ಸ್ವತಃ ನಾಯಕ ಮಷ್ರಫೆ ಸೇರಿದಂತೆ ಇತರ ಪ್ರಮುಖ ಬ್ಯಾಟ್ಸ್‌ ಮನ್‌ಗಳು ವೈಫಲ್ಯ ಅನುಭವಿಸುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.

ಸೌಮ್ಯ ಸರ್ಕಾರ್‌, ಇಮ್ರುಲ್‌ ಕಯಾಸ್‌, ಮುಷ್ಫಿಕರ್‌ ರಹೀ ಮ್‌, ಶಕೀಬ್ ಅಲ್‌ ಹಸನ್‌, ಶಬ್ಬೀರ್‌ ರಹ ಮಾನ್‌ ಮತ್ತು ಮಹಮೂದುಲ್ಲಾ ಅವರು ಜವಾಬ್ದಾರಿ ಅರಿತು ಆಡಬೇಕಿದೆ. ಬೌಲಿಂಗ್‌ನಲ್ಲಿ ಮುಸ್ತಾಫಿಜುರ್‌ ರಹಮಾನ್‌, ರುಬೇಲ್‌ ಹೊಸೇನ್‌ ಮತ್ತು ಮೆಹದಿ ಹಸನ್‌ ಮಿರಾಜ್‌ ಅವರು ಮಿಂಚುವುದು ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.