ADVERTISEMENT

ಸೋಮ್, ಸಾನಿಯಾ ಮೇಲೆ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 19:30 IST
Last Updated 19 ಜೂನ್ 2011, 19:30 IST
ಸೋಮ್, ಸಾನಿಯಾ ಮೇಲೆ ಭರವಸೆ
ಸೋಮ್, ಸಾನಿಯಾ ಮೇಲೆ ಭರವಸೆ   

ವಿಂಬಲ್ಡನ್, ಲಂಡನ್ (ಪಿಟಿಐ): ವರ್ಷದ ಮೂರನೇ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿ ಎನಿಸಿರುವ ವಿಂಬಲ್ಡನ್ ಚಾಂಪಿಯನ್‌ಷಿಪ್‌ಗೆ ಸೋಮವಾರ ಚಾಲನೆ ಲಭಿಸಲಿದ್ದು, ಸೋಮ್‌ದೇವ್ ದೇವ್‌ವರ್ಮನ್ ಮತ್ತು ಸಾನಿಯಾ ಮಿರ್ಜಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದಾರೆ.

ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಹಲವು ವರ್ಷಗಳ ಬಿಡುವಿನ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಜೊತೆಯಾಗಿ ಆಡುತ್ತಿದ್ದು, ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿದ್ದಾರೆ.

ಸಾನಿಯಾ ಹಾಗೂ ಸೋಮ್ ಅವರು ಪ್ರಸಕ್ತ ವರ್ಷ ಸುಧಾರಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇಬ್ಬರೂ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಲ್ಲಿ ತಮ್ಮ ದಾಖಲೆಯನ್ನು ಇನ್ನಷ್ಟು ಉತ್ತಮಪಡಿಸುವ ಪ್ರಯತ್ನದಲ್ಲಿದ್ದಾರೆ. ಈ ವರ್ಷದ ಆರಂಭದಲ್ಲಿ ರ‌್ಯಾಂಕಿಂಗ್‌ನಲ್ಲಿ 108ನೇ ಸ್ಥಾನದಲ್ಲಿದ್ದ ಸೋಮ್ ಇದೀಗ 68ನೇ ಸ್ಥಾನದಲ್ಲಿದ್ದಾರೆ.

ಸಾನಿಯಾ ಅವರೂ ರ‌್ಯಾಂಕಿಂಗ್‌ನಲ್ಲಿ ಮೇಲೇರಿದ್ದಾರೆ. ಋತುವಿನ ಆರಂಭದಲ್ಲಿ 166 ನೇ ಸ್ಥಾನದಲ್ಲಿದ್ದ ಅವರ ಈಗಿನ ರ‌್ಯಾಂಕಿಂಗ್ 60. ಹೈದರಾಬಾದ್‌ನ ಆಟಗಾರ್ತಿ ಮೊದಲ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ವರ್ಜೀನಿಯಾ ರೆಜಾನೊ ಅವರ ಸವಾಲನ್ನು ಎದುರಿಸುವರು.

2008ರ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದ ಸಾನಿಯಾ ಆ ಬಳಿಕ ಯಾವುದೇ ಗ್ರ್ಯಾಂಡ್ ಸ್ಲಾಮ್‌ನಲ್ಲಿ ಎರಡನೇ ಸುತ್ತನ್ನು ದಾಟಿಲ್ಲ. ಈ ಬಾರಿಯೂ ಅವರು ಎರಡನೇ ಸುತ್ತು ದಾಟಲು ಕಠಿಣ ಪರಿಶ್ರಮ ನಡೆಸುವುದು ಅನಿವಾರ್ಯ. ಏಕೆಂದರೆ ಮೊದಲ ಸುತ್ತಿನಲ್ಲಿ ಗೆಲುವು ಪಡೆದರೆ ಅವರಿಗೆ ವಿಶ್ವದ ಅಗ್ರ ರ‌್ಯಾಂಕಿಂಗ್‌ನ ಆಟಗಾರ್ತಿ ಡೆನ್ಮಾಕ್‌ನ ಕೆರೊಲಿನ್ ವೊಜ್‌ನಿಯಾಕಿ ಎದುರಾಗುವ ಸಾಧ್ಯತೆಯಿದೆ.

ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮತ್ತು ರಷ್ಯಾದ ಎಲೆನಾ ವೆಸ್ನಿನಾ ಜೋಡಿ ಮೊದಲ ಸುತ್ತಿನಲ್ಲಿ ಅಮೆರಿದ ಮೆಲಾನಿ ಆಡಿನ್ ಹಾಗೂ ರಷ್ಯಾದ ಅನ್ನಾ ಚಕ್ವೆತಾಜೆ ಅವರ ಸವಾಲನ್ನು ಎದುರಿಸಲಿದೆ.

ಸೋಮ್‌ದೇವ್ ಮೊದಲ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಡೆನಿಸ್ ಗ್ರೆಮೆಲ್‌ಮಯರ್ ವಿರುದ್ಧ ಹಣಾಹಣಿ ನಡೆಸುವರು. ಡೆನಿಸ್ ಅವರು ಪ್ರಸಕ್ತ ವಿಶ್ವ ರ‌್ಯಾಂಕಿಂಗ್‌ನಲ್ಲಿ 110ನೇ ಸ್ಥಾನದಲ್ಲಿದ್ದಾರೆ. ಭಾರತದ ಆಟಗಾರ ವಿಂಬಲ್ಡನ್‌ನ ಸಿಂಗಲ್ಸ್‌ನಲ್ಲಿ ಪ್ರಧಾನ ಹಂತದಲ್ಲಿ ಆಡುವುದು ಇದೇ ಮೊದಲು. 

ಭಾರತಕ್ಕೆ ಪ್ರಶಸ್ತಿ ಗೆಲ್ಲುವ ಹೆಚ್ಚಿನ ಸಾಧ್ಯತೆಯಿರುವುದು ಪುರುಷರ ಡಬಲ್ಸ್‌ನಲ್ಲಿ ಮಾತ್ರ. ಈ ವರ್ಷದ ಆರಂಭದಲ್ಲಿ ಜೊತೆಯಾದ ಬಳಿಕ ಪೇಸ್ ಮತ್ತು ಭೂಪತಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಇವರು ರನ್ನರ್ ಅಪ್ ಸ್ಥಾನ ಪಡೆದಿದ್ದರು.

 ರೋಹನ್ ಬೋಪಣ್ಣ ಮತ್ತು ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಷಿ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ ಕೊಲಂಬಿಯದ ಜುವಾನ್ ಸೆಬಾಸ್ಟಿಯನ್ ಕ್ಯಾಬಲ್ ಮತ್ತು ರಾಬರ್ಟ್ ಫರಾ ಅವರನ್ನು ಎದುರಿಸಲಿದೆ. 

ನಡಾಲ್, ವೊಜ್‌ನಿಯಾಕಿಗೆ ಅಗ್ರಶ್ರೇಯಾಂಕ: ಸ್ಪೇನ್‌ನ ರಫೆಲ್ ನಡಾಲ್ ಮತ್ತು ಡೆನ್ಮಾರ್ಕ್‌ನ ಕೆರೊಲಿನ್ ವೊಜ್‌ನಿಯಾಕಿ ಅವರು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಗ್ರಶ್ರೇಯಾಂಕ ಪಡೆದಿದ್ದಾರೆ.

ನಡಾಲ್ ಅಲ್ಲದೆ, ಸರ್ಬಿಯದ ನೊವಾಕ್ ಜೊಕೊವಿಚ್, ಸಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಮತ್ತು ಆತಿಥೇಯ ದೇಶದ ಭರವಸೆ ಎನಿಸಿರುವ ಆ್ಯಂಡಿ ಮರ‌್ರೆ ಅವರು ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರೆನಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ವೆರಾ ಜೊನರೇನಾ, ನಾ ಲೀ, ಸೆರೆನಾ ವಿಲಿಯಮ್ಸ ಮತ್ತು ವೀನಸ್ ವಿಲಿಯಮ್ಸ ಅವರು ಚಾಂಪಿಯನ್‌ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.