ADVERTISEMENT

ಸೌಹಾರ್ದ ಪಂದ್ಯಕ್ಕೆ ಬಳಸಿದ್ದು ಜಲಂಧರ್ ಚೆಂಡು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2011, 19:30 IST
Last Updated 2 ಸೆಪ್ಟೆಂಬರ್ 2011, 19:30 IST

ಚಂಡೀಗಡ (ಪಿಟಿಐ): ಕ್ರೀಡಾ ಪ್ರೇಮಿಗಳ ಗಮನ ಸೆಳೆದ ಅರ್ಜೆಂಟೀನಾ ಹಾಗೂ ವೆನಿಜುವೆಲಾ ನಡುವಿನ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್ ಪಂದ್ಯಕ್ಕೆ ಬಳಸಿದ್ದು ಜಲಂಧರ್‌ನ ಚೆಂಡು. ಹಾಗಾಗಿಯೇ ಜಲಂಧರ್‌ನ ಫುಟ್‌ಬಾಲ್ ತಯಾರಕರಿಗೆ ಇದೊಂದು ಹೆಮ್ಮೆಯ ಕ್ಷಣ.

`ಖಂಡಿತ ಇದೊಂದು ನಮಗೆ ಹೆಮ್ಮೆ ಕ್ಷಣ. ಏಕೆಂದರೆ ಭಾರತದಲ್ಲಿ ನಡೆದ ಅತಿ ದೊಡ್ಡ ಪಂದ್ಯವಿದು~ ಎಂದು ಫ್ರೀವಿಲ್ ಸ್ಪೋರ್ಟ್ಸ್‌ನ ಎಂಡಿ ರಾಜೇಶ್ ಖಾರ್ಬಂಡ ತಿಳಿಸಿದ್ದಾರೆ. ನಿವಿಯಾ ಸಿಂಬೊಲೊ ಫುಟ್‌ಬಾಲ್ ಎಂಬ ಹೆಸರಿನ ಚೆಂಡುಗಳನ್ನು ಇಲ್ಲಿ ತಯಾರಿಸಲಾಗುತ್ತದೆ.

ಎರಡು ತಂಡಗಳ ಅನುಮತಿಯೊಂದಿಗೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಜಲಂಧರ್ ಚೆಂಡುಗಳನ್ನು ಬಳಸಲು ತೀರ್ಮಾನಿಸಿತ್ತು.

`ಇಲ್ಲಿ ತಯಾರಾಗುವ ಚೆಂಡುಗಳಿಗೆ ಫಿಫಾ ಮಾನ್ಯತೆ ಇದೆ. ಇದಕ್ಕೆ ಪಂದ್ಯ ಆಯೋಜಕರು ಹಾಗೂ ತಂಡಗಳ ಅನುಮತಿ ದೊರೆತಿದೆ~ ಎಂದು ಖಾರ್ಬಂಡ ನುಡಿದಿದ್ದಾರೆ.

ಅರ್ಜೆಂಟೀನಾ ಹಾಗೂ ವೆನಿಜುವೆಲಾ ತಂಡಗಳಿಗೆ ತಲಾ 50 ಚೆಂಡುಗಳನ್ನು ನೀಡಿದೆ. ಅಷ್ಟು ಮಾತ್ರವಲ್ಲದೇ, ಕ್ರೀಡಾಂಗಣಕ್ಕೆ ಆಗಮಿಸಿದ ಫುಟ್‌ಬಾಲ್ ಪ್ರೇಮಿಗಳಿಗೆ ಸಾವಿರ ಚೆಂಡುಗಳನ್ನು ಹಂಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.