ADVERTISEMENT

ಸ್ಪಾಟ್ ಫಿಕ್ಸಿಂಗ್: ಶ್ರೀಶಾಂತ್, ಚವ್ಹಾಣ್, ಚಾಂಡಿಲ ನಿರ್ದೋಷಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2015, 13:32 IST
Last Updated 25 ಜುಲೈ 2015, 13:32 IST

ನವದೆಹಲಿ (ಪಿಟಿಐ): 2013ರ ಐಪಿಎಲ್‌ ‘ಸ್ಪಾಟ್ ಫಿಕ್ಸಿಂಗ್' ಪ್ರಕರಣಕ್ಕೆ ಸಂಬಂಧಿಸಿದಂತೆ  ಅಮಾನತುಗೊಂಡಿದ್ದ ರಾಜಸ್ತಾನ್‌ ರಾಯಲ್ಸ್ ತಂಡದ ವೇಗಿ ಎಸ್. ಶ್ರೀಶಾಂತ್, ಸ್ಪಿನ್ನರ್‌ಗಳಾದ ಅಂಕಿತ್ ಚವ್ಹಾಣ್ ಮತ್ತು ಅಜಿತ್ ಚಾಂಡಿಲ ಅವರನ್ನು ದೋಷಮುಕ್ತಗೊಳಿಸಿ ದೆಹಲಿ ಕೋರ್ಟ್‌ ಶನಿವಾರ ತೀರ್ಪು ನೀಡಿದೆ.

ಈ ಪ್ರಕರಣದ ಎಲ್ಲ 36 ಆರೋಪಿಗಳನ್ನು ಕೋರ್ಟ್‌ ಖುಲಾಸೆಗೊಳಿಸಿದೆ. ಪೊಲೀಸರು  ಸಲ್ಲಿಸಿರುವ 6 ಸಾವಿರ ಪುಟಗಳ ಆರೋಪ ಪಟ್ಟಿಯಲ್ಲಿ ಇವರ ಮೇಲಿನ ಆರೋಪವನ್ನು ಸಾಬೀತುಪಡಿಸಲು ಬಲವಾದ ಸಾಕ್ಷ್ಯಗಳು ಇಲ್ಲ ಎಂದು ಕೋರ್ಟ್‌ ಹೇಳಿದೆ.

‘ಈ ತೀರ್ಪು ನಾನು ನಿರಾಪರಾಧಿ ಎನ್ನುವುದನ್ನು ಸಾಬೀತುಪಡಿಸಿದೆ.  ದೇವರು ನನ್ನ ಜತೆಗಿದ್ದಾನೆ. ಕೂಡಲೇ ತರಬೇತಿ ಪ್ರಾರಂಭಿಸುತ್ತೇನೆ. ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಲು ಪ್ರಯತ್ನಿಸುತ್ತೇನೆ’ ಎಂದು ಶ್ರೀಶಾಂತ್ ಕೋರ್ಟ್‌ ಹೊರಗೆ ಸುದ್ದಿಗಾರರಿಗೆ  ಭಾವುಕರಾಗಿ ಪ್ರತಿಕ್ರಿಯಿಸಿದರು.

ಅಂಕಿತ್ ಚವ್ಹಾಣ್ ಮತ್ತು ಅಜಿತ್ ಚಾಂಡಿಲ ಕೂಡ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ಆರೋಪದಿಂದ ನಮ್ಮ  ಕ್ರಿಕೆಟ್‌ ಜೀವನದ ಅತ್ಯಮೂಲ್ಯ ಎರಡು ವರ್ಷಗಳು ಹಾಳಾದವು. ಸ್ನೇಹಿತರು ಮತ್ತು  ಕುಟುಂಬ ಸದಸ್ಯರ ಸಹಕಾರದಿಂದ ಎಲ್ಲವನ್ನೂ ಸಹಿಸಿಕೊಂಡೆವು. ಈಗ ಮತ್ತೆ ಕ್ರಿಕೆಟ್‌ ಅಂಗಣಕ್ಕೆ ಇಳಿಯಬೇಕಿದೆ. ಮತ್ತೆ ಹಂತ ಹಂತವಾಗಿ ವೃತ್ತಿ ಬದುಕು ಕಟ್ಟಿಕೊಳ್ಳಬೇಕಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಹಿನ್ನೆಲೆ: 2013ರ `ಮೇ 5 ರಂದು ಜೈಪುರದಲ್ಲಿ ನಡೆದ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಚಾಂಡಿಲ ಮತ್ತು

9ರಂದು ಮೊಹಾಲಿಯಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರಿನ ಪಂದ್ಯದಲ್ಲಿ ಶ್ರೀಶಾಂತ್ ಮತ್ತು ಮೇ 15 ರಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚವ್ಹಾಣ್ `ಸ್ಪಾಟ್ ಫಿಕ್ಸಿಂಗ್' ನಡೆಸಿದ್ದರು' ಎಂದು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಶ್ರೀಶಾಂತ್ ಪ್ಯಾಂಟಿನಲ್ಲಿ ಟವಲ್ ಕಾಣದ ಹಾಗೆ ಬೌಲಿಂಗ್ ಮಾಡಿದ್ದರು. ಆದರೆ, ಎರಡನೇ ಓವರ್‌ನಲ್ಲಿ ಟವಲ್ ಕಾಣುವಂತೆ ಇಟ್ಟುಕೊಂಡು ಬುಕ್ಕಿಗಳಿಗೆ ಸಂಕೇತ ರವಾನಿಸುವ ಮೂಲಕ `ಸ್ಪಾಟ್ ಫಿಕ್ಸಿಂಗ್ ನಡೆಸಿದ್ದರು. `ವಾರಿಯರ್ಸ್ ಎದುರಿನ ಪಂದ್ಯದ ತಮ್ಮ ಎರಡನೇ ಓವರ್‌ನಲ್ಲಿ ಚಾಂಡಿಲ ಬುಕ್ಕಿಗಳ ಜೊತೆಗಿನ ಒಪ್ಪಂದದಂತೆ 14 ರನ್‌ಗಳನ್ನು ನೀಡಿದ್ದರು. ಇದಕ್ಕಾಗಿ ರೂ. 40 ಲಕ್ಷ   ಒಪ್ಪಂದ ಮಾಡಿಕೊಂಡಿದ್ದರು. ಒಪ್ಪಂದದಂತೆಯೇ ಚಾಂಡಿಲ 14 ರನ್ ನೀಡಿದರೂ, ಟೀ ಶರ್ಟ್ ಎತ್ತಿ ತೋರಿಸಿ ಬುಕ್ಕಿಗಳಿಗೆ ಸಂಕೇತ ರವಾನಿಸುವುದನ್ನು ಮರೆತ ಕಾರಣ ಈ ಒಪ್ಪಂದ ರದ್ದಾಯಿತು.  ಎಂದು ಪೊಲೀಸರು  ಆರೋಪ ಪಟ್ಟಿಯಲ್ಲಿ ತಿಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.