ಫೋರ್ಟಲೆಜಾ, ಬ್ರೆಜಿಲ್ (ಎಎಫ್‌ಪಿ): ನೈಜೀರಿಯಾ ತಂಡವನ್ನು 3-0 ಗೋಲುಗಳಿಂದ ಮಣಿಸಿದ ಸ್ಪೇನ್ ಕಾನ್ಫೆಡರೇಷನ್ ಕಪ್ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು. ಗುರುವಾರ ನಡೆಯುವ ನಾಲ್ಕರಘಟ್ಟದ ಪಂದ್ಯದಲ್ಲಿ ಸ್ಪೇನ್ ತಂಡ ಇಟಲಿಯ ಸವಾಲನ್ನು ಎದುರಿಸಲಿದೆ.
ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆದ ಸ್ಪೇನ್ ಒಟ್ಟು ಒಂಬತ್ತು ಪಾಯಿಂಟ್‌ಗಳೊಂದಿಗೆ `ಬಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಮತ್ತೊಂದು ಪಂದ್ಯದಲ್ಲಿ ತಾಹಿತಿ ತಂಡವನ್ನು ಮಣಿಸಿದ ಉರುಗ್ವೆ ಆರು ಪಾಯಿಂಟ್ ಕಲೆಹಾಕಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ನಾಲ್ಕರಘಟ್ಟ ಪ್ರವೇಶಿಸಿತು. ಬುಧವಾರ ನಡೆಯುವ ಸೆಮಿಫೈನಲ್‌ನಲ್ಲಿ ಉರುಗ್ವೆ ಹಾಗೂ ಬ್ರೆಜಿಲ್ ಪೈಪೋಟಿ ನಡೆಸಲಿವೆ.
ಸ್ಪೇನ್ ತಂಡ ಸೆಮಿಫೈನಲ್ ಪ್ರವೇಶಿಸಲು ಕೊನೆಯ ಲೀಗ್ ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಳ್ಳಬೇಕಿತ್ತು. ಆದರೆ ವಿಶ್ವ ಹಾಗೂ ಯೂರೋಪಿಯನ್ ಚಾಂಪಿಯನ್ನರು ಸೊಗಸಾದ ಪ್ರದರ್ಶನ ನೀಡಿ ಪೂರ್ಣ ಪಾಯಿಂಟ್ ಕಲೆಹಾಕಿದರು.
ಎರಡು ಗೋಲುಗಳನ್ನು ತಂದತ್ತ ಜೊರ್ಡಿ ಅಲ್ಬಾ ಅವರು ಸ್ಪೇನ್ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಬಾರ್ಸಿಲೋನಾ ಕ್ಲಬ್‌ನ ಸ್ಟ್ರೈಕರ್ ಪಂದ್ಯದ ಮೂರು ಹಾಗೂ 88ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ಮತ್ತೊಂದು ಗೋಲನ್ನು ಫೆರ್ನಾಂಡೊ ಟೊರೆಸ್ 62ನೇ ನಿಮಿಷದಲ್ಲಿ ತಂದಿತ್ತರು.
ಸ್ಪೇನ್ ಹಾಗೂ ಇಟಲಿ ನಡುವಿನ ಸೆಮಿಫೈನಲ್ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. 2012ರ ಯೂರೋ ಕಪ್ ಫೈನಲ್‌ನಲ್ಲಿ ಇಟಲಿ ತಂಡವನ್ನು 4-0 ರಲ್ಲಿ ಮಣಿಸಿದ್ದ ಸ್ಪೇನ್ ಕಿರೀಟ ಮುಡಿಗೇರಿಸಿಕೊಂಡಿತ್ತು. ಅಂದು ಎದುರಾದ ಸೋಲಿಗೆ ಮುಯ್ಯಿ ತೀರಿಸುವ ಅವಕಾಶ ಇಟಲಿಗೆ ಲಭಿಸಿದೆ.
ಕ್ಸಾವಿ ನೇತೃತ್ವದ ಸ್ಪೇನ್ ತಂಡ ನೈಜೀರಿಯಾ ವಿರುದ್ಧ ಹೊಂದಾಣಿಕೆಯ ಆಟವಾಡಿತು. ಆಟಗಾರರು ಇನ್ನೂ ಅಂಗಳದ ಪರಿಸ್ಥಿತಿಗೆ ಹೊಂದಿಕೊಳ್ಳುವ ಮುನ್ನವೇ ಗೋಲಿನ ಖಾತೆ ತೆರೆಯಿತು.
ಪಂದ್ಯದ ಮೂರನೇ ನಿಮಿಷದಲ್ಲಿ ಆ್ಯಂಡ್ರೆಸ್ ಇನಿಯೆಸ್ತಾ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಅಲ್ಬಾ ಆಕರ್ಷಕ `ಡ್ರಿಬ್ಲಿಂಗ್' ಮೂಲಕ ಎದುರಾಳಿ ತಂಡದ ಮೂವರು ಆಟಗಾರರು ಹಾಗೂ ಗೋಲ್‌ಕೀಪರ್ ವಿನ್ಸೆಂಟ್ ಎನ್ಯೆಮಾ ಅವರನ್ನು ತಪ್ಪಿಸಿ ಗುರಿ ಸೇರಿಸಿದರು.
ಎರಡನೇ ಗೋಲು ಗಳಿಸಲು ತಂಡಕ್ಕೆ 62ನೇ ನಿಮಿ ಷದವರೆಗೆ ಕಾಯಬೇಕಾಯಿತು. ಕೋಚ್ ವಿನ್ಸೆಂಟ್ ಡೆಲ್ ಬಾಸ್ಕ್ 60ನೇ ನಿಮಿಷದಲ್ಲಿ ಬದಲಿ ಆಟಗಾರ ನಾಗಿ ಫೆರ್ನಾಂಡೊ ಟೊರೆಸ್ ಅವರನ್ನು ಕಣಕ್ಕಿಳಿಸಿ ದರು. ಚೆಲ್ಸೀ ಕ್ಲಬ್‌ನ ಸ್ಟ್ರೈಕರ್ ಅಂಗಳಕ್ಕಿಳಿದ ಎರಡನೇ ನಿಮಿಷದಲ್ಲೇ ಗೋಲು ಗಳಿಸಿದರು. ಪೆಡ್ರೊ ರಾಡ್ರಿಗಸ್ ಅವರ ನಿಖರ ಪಾಸ್‌ನಲ್ಲಿ ಟೊರೆಸ್ ಆಕರ್ಷಕ `ಹೆಡರ್' ಮೂಲಕ ಚೆಂಡನ್ನು ಗುರಿ ಸೇರಿಸಿದರು.
ಪಂದ್ಯ ಕೊನೆಗೊಳ್ಳಲು ಕೆಲವು ನಿಮಿಷಗಳಿರುವಾಗ ಅಲ್ಬಾ ತಮ್ಮ ಎರಡನೇ ಗೋಲು ಗಳಿಸಿದರಲ್ಲದೆ, ಸ್ಪೇನ್ ಗೆಲುವನ್ನು ಖಚಿತಪಡಿಸಿಕೊಂಡರು. ನೈಜೀರಿಯಾ ತಂಡ ಗೋಲು ಗಳಿಸಲು ಸಾಕಷ್ಟು ಪ್ರಯತ್ನ ನಡೆಸಿತಾದರೂ, ಸ್ಪೇನ್ ಗೋಲ್‌ಕೀಪರ್ ವಿಕ್ಟರ್ ವಾಲ್ಡೆಸ್ ಹಾಗೂ ರಕ್ಷಣಾ ಆಟಗಾರರು ತಡೆಯಾಗಿ ಪರಿಣಮಿಸಿದರು.
ಉರುಗ್ವೆಗೆ ಜಯ: ಭಾನುವಾರ ರಾತ್ರಿ ರಿಸೈಫ್‌ನಲ್ಲಿ ನಡೆದ ಪಂದ್ಯದಲ್ಲಿ ಉರುಗ್ವೆ 8-0 ಗೋಲುಗಳಿಂದ ತಾಹಿತಿ ತಂಡವನ್ನು ಸುಲಭವಾಗಿ ಮಣಿಸಿತು. ನಾಲ್ಕು ಗೋಲುಗಳನ್ನು ತಂದಿತ್ತ ಅಬೆಲ್ ಹೆರ್ನಾಂಡೆಸ್ (2, 24, 45+1 ಮತ್ತು 67ನೇ ನಿಮಿಷ) ಉರುಗ್ವೆ ತಂಡದ ಸುಲಭ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.