ಬೆಂಗಳೂರು: `ಭಾರತದಲ್ಲಿ ಹಾಕಿ ತುಂಬಾ ಸಂಕಷ್ಟದಲ್ಲಿದೆ. ವಿವಾದಗಳಿಂದ ಜರ್ಜರಿತವಾಗಿದೆ. ಹೀಗಾದರೇ ರಾಷ್ಟ್ರೀಯ ಕ್ರೀಡೆ ಸುಧಾರಣೆ ಕಾಣುವುದಾದರೂ ಹೇಗೆ? ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂದು ದೂರುತ್ತಾರೆ. ಆದರೆ ದೊಡ್ಡ ಸಾಧನೆ ಮಾಡಿಬಂದರೂ ನಮ್ಮತ್ತ ಗಮನ ಹರಿಸುವುದಿಲ್ಲ~ ಎಂದು ಭಾರತ ಹಾಕಿ ತಂಡದ ನಾಯಕ ರಾಜ್ಪಾಲ್ ಸಿಂಗ್ ನಿರಾಶೆ ವ್ಯಕ್ತಪಡಿಸಿದ್ದಾರೆ.
`ಈಗ ನಾವು ಚೀನಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದೇವೆ. ಹಾಗಾಗಿ ಹಿಂದಿನ ವಿವಾದ ಹಾಗೂ ಸಮಸ್ಯೆಗಳನ್ನು ಮರೆತು ಮುಂದೆ ಸಾಗಬೇಕು. ಹೀಗೆ ಯಶಸ್ಸಿನ ಪಥದಲ್ಲಿ ಮುಂದುವರಿಯಲು ಹಾಕಿಗೆ ಎಲ್ಲರ ನೆರವು ಬೇಕು. ಆಗ ಅದು ನಮಗೂ ಸ್ಫೂರ್ತಿ ನೀಡಲಿದೆ~ ಎಂದು ರಾಜ್ಪಾಲ್ `ಪ್ರಜಾವಾಣಿ~ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಚೀನಾದ ಓರ್ಡೊಸ್‌ನಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ ಭಾರತ ಚಾಂಪಿಯನ್ ಆಗಿತ್ತು. ನಾಯಕ ರಾಜ್ಪಾಲ್ ಸಂದರ್ಶನದ ವಿವರ ಇಂತಿದೆ...
* ತುಂಬಾ ದಿನಗಳ ನಂತರ ಭಾರತ ಹಾಕಿ ತಂಡದಿಂದ ಉತ್ತಮ ಪ್ರದರ್ಶನ ಮೂಡಿಬಂದಿದೆ. ಪ್ರತಿಕ್ರಿಯೆ ಹೇಗಿದೆ?
ಅಂತಹ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ಬಂದಿಲ್ಲ. ಆದರೆ ಅತ್ಯುತ್ತಮ ಸಾಧನೆ ಮಾಡಿದ ಖುಷಿ ನಮಗಿದೆ. ಈ ರೀತಿ ಸಾಧನೆ ಮಾಡುತ್ತಾ ಹೋದರೆ ಉತ್ತಮ ಪ್ರತಿಕ್ರಿಯೆ ಖಂಡಿತ ಬರಲಿದೆ.
* ಟೂರ್ನಿಯಲ್ಲಿ ಪಾಲ್ಗೊಳ್ಳಲು ತೆರಳುವ ಮೊದಲು ಹಲವು ವಿವಾದಗಳು ಉದ್ಭವಿಸಿದ್ದವು. ಇದು ತಂಡದ ಮೇಲೆ ಪರಿಣಾಮ ಬೀರಿತೇ?
ಬೆಂಗಳೂರಿನಲ್ಲಿ ಅಭ್ಯಾಸ ನಡೆಸುವ ವೇಳೆ ಹಿರಿಯ ಆಟಗಾರರಾದ ಸಂದೀಪ್ ಸಿಂಗ್ ಹಾಗೂ ಸರ್ದಾರ್ ಸಿಂಗ್ ತಂಡದಿಂದ ಹೊರ ನಡೆದರು. ಅದೆಲ್ಲಾ ಈಗ ಇತಿಹಾಸ. ಅವರ ಅನುಪಸ್ಥಿತಿ ತಂಡದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಆಡಿದರು.
* ಟೂರ್ನಿ ವೇಳೆ ಕೆಲ ಆಟಗಾರರ ಬಳಿ ಹೆಚ್ಚುವರಿ ಶೂ ಇರಲಿಲ್ಲ ಎನ್ನುವ ಅಂಶ ಬಹಿರಂಗವಾಗಿತ್ತು. ಇದಕ್ಕೆ ಕಾರಣವೇನು?
ಆಟಗಾರರ ಬಳಿ ಹೆಚ್ಚುವರಿ ಶೂ ಇರಲಿಲ್ಲ ಎಂದು ಮಾಧ್ಯಮಗಳಲ್ಲಿ ವರದಿ ಆಗಿದ್ದು ನನ್ನ ಗಮನಕ್ಕೂ ಬಂದಿದೆ. ಆದರೆ ಅಂತಹ ಸಮಸ್ಯೆ ಇರಲಿಲ್ಲ. ಇವೆಲ್ಲಾ ಸುಳ್ಳು ವರದಿ ಅಷ್ಟೆ.
* ತಂಡದಲ್ಲಿ ಈಗ ಹೆಚ್ಚು ಮಂದಿ ಯುವ ಆಟಗಾರರಿದ್ದಾರೆ. ಅವರು ಯಾವ ರೀತಿ ತಮ್ಮ ಜವಾಬ್ದಾರಿ ನಿಭಾಯಿಸಿದರು?
ಯುವ ಆಟಗಾರರ ಪ್ರದರ್ಶನದ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಹಾಗಾಗಿ ಹಿರಿಯ ಆಟಗಾರರ ಅನುಪಸ್ಥಿತಿ ಕಾಡಲಿಲ್ಲ. ಅದರಲ್ಲೂ ಮಂಜಿತ್ ಕುಲ್ಲು ಭರವಸೆ ಮೂಡಿಸಿದ್ದಾರೆ.
* ಹಾಕಿಯಲ್ಲಿ ಇನ್ನಾದರೂ ಹೊಸ ಶಕೆ ಆರಂಭವಾಗುವುದೇ?
ಈಗ ಚಾಂಪಿಯನ್ ಆಗಿರುವುದು ಅಂತಹ ಒಂದು ಭರವಸೆ ನೀಡಿದೆ. ಎಲ್ಲರ ಬೆಂಬಲ ದೊರೆತರೆ ಹಾಕಿ ಮತ್ತೆ ಭಾರತ ಮಿಂಚಲಿದೆ.
* ನೂತನ ಕೋಚ್ ಮೈಕಲ್ ನಾಬ್ಸ್ ಜೊತೆಗಿನ ಮೊದಲ ಟೂರ್ನಿ ಇದೆ. ಅವರ ಯೋಜನೆ ಹೇಗಿತ್ತು?
ಆಕ್ರಮಣಕಾರಿ ಹಾಗೂ ವೇಗದ ಆಟಕ್ಕೆ ಅವರು ಹೆಚ್ಚು ಒತ್ತು ನೀಡುತ್ತಿದ್ದರು. ಅಭ್ಯಾಸದ ವೇಳೆಯೇ ಈ ಅಂಶದತ್ತ ಅವರು ಹೆಚ್ಚು ಗಮನ ಹರಿಸುತ್ತಿದ್ದರು. ಹಾಗಾಗಿಯೇ ಈ ಟೂರ್ನಿಯಲ್ಲಿ ನಾವು ಯಶಸ್ಸು ಗಳಿಸಲು ಸಾಧ್ಯವಾಯಿತು.
* ಚಾಂಪಿಯನ್ಸ್ ಟ್ರೋಫಿ ಭಾರತದ ಆತಿಥ್ಯದಿಂದ ಕೈತಪ್ಪಿದೆ. ಈ ಬಗ್ಗೆ?
ಇದು ಖಂಡಿತ ನಮಗೆ ನಿರಾಶೆ ಉಂಟು ಮಾಡಿದೆ. ತವರಿನ ಜನರ ಮುಂದೆ ಆಡುವ ಅವಕಾಶ ತಪ್ಪಿ ಹೋಗಿದೆ. ಜೊತೆಗೆ ನೇರ ಅವಕಾಶವನ್ನು ಕಳೆದುಕೊಂಡಿದ್ದೇವೆ. ಆದರೆ ಈ ಬಗ್ಗೆ ಯೋಚಿಸಿ ಪ್ರಯೋಜನವಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಚಾಲೆಂಜರ್ಸ್ ಟೂರ್ನಿಯಲ್ಲಿ ಗೆದ್ದು ಅರ್ಹತೆ ಪಡೆಯುವ ವಿಶ್ವಾಸವಿದೆ.
* ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ವಿಶ್ವಾಸವಿದೆಯೇ?
ತುಂಬಾ ಕಷ್ಟವಿದೆ, ಆದರೆ ಅಸಾಧ್ಯವಲ್ಲ. ಇದೇ ರೀತಿ ಶ್ರಮ ಹಾಕಿ ಅಭ್ಯಾಸ ನಡೆಸಬೇಕು ಅಷ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.