ADVERTISEMENT

ಹಾಕಿ ಅಂಗಳದಲ್ಲಿ ಕರ್ನಾಟಕದ ಪಾರುಪತ್ಯ!

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ನವದೆಹಲಿ: ಚಳಿಯ ದಾಳಿಗೆ ನಡುಗುತ್ತಿರುವ ರಾಜಧಾನಿ ನವದೆಹಲಿಯ ಮೇಜರ್ ಧ್ಯಾನಚಂದ್ ಹಾಕಿ ಕ್ರೀಡಾಂಗಣದಲ್ಲಿ ಈಗ ಕರ್ನಾಟಕದ ಆಟಗಾರರದ್ದೇ ಪಾರುಪತ್ಯ!

ಫೆಬ್ರುವರಿ 18ರಿಂದ 26ರವರೆಗೆ ನಡೆಯಲಿರುವ ಹೀರೊ ಹೊಂಡಾ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಭಾರತ ಪುರುಷರ ತಂಡದಲ್ಲಿ ಕರ್ನಾಟಕ ಆಟಗಾರರದ್ದೇ ಸಿಂಹಪಾಲು. ತಂಡದಲ್ಲಿ ಒಟ್ಟು ಆರು ಮಂದಿ ಆಟಗಾರರು ಮತ್ತು ತರಬೇತಿ ವಿಭಾಗದಲ್ಲಿ ಮೂವರು ಸೇರಿದಂತೆ ಒಟ್ಟು ಒಂಬತ್ತು ಮಂದಿ ಕರ್ನಾಟಕದವರಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ರಾಜ್ಯದವರು ಇರುವುದು ಇದೇ ಪ್ರಥಮ.

1908ರಲ್ಲಿ ಪ್ರಥಮ ಬಾರಿ ಒಲಿಂಪಿಕ್ಸ್ ಪ್ರವೇಶಿಸಿದ ಭಾರತ ತಂಡದಲ್ಲಿ ಇದುವರೆಗೆ ಇಷ್ಟು ಸಂಖ್ಯೆಯಲ್ಲಿ ಕನ್ನಡಿಗರಿಗೆ ಸ್ಥಾನ ಸಿಕ್ಕಿರಲಿಲ್ಲ. ಪಂಜಾಬ್, ಹರಿಯಾಣ ಮತ್ತು ಮಧ್ಯಪ್ರದೇಶದ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು. ಅದರಲ್ಲೂ ಪಂಜಾಬಿನ ಸರ್ದಾರ್ಜಿಗಳದ್ದೇ ಪ್ರಾಬಲ್ಯ ಇರುತ್ತಿತ್ತು. 

ಆದರೆ ಈಗ ಕರ್ನಾಟಕದ ಪ್ರತಿಭೆಗಳು ಆ ಸ್ಥಾನಕ್ಕೇರಿದ್ದಾರೆ. ತಂಡದ ನಾಯಕ ಭರತ್ ಛೆಟ್ರಿ ಮೂಲತಃ ಹಿಮಾಚಲ ಪ್ರದೇಶದವರಾದರೂ ಕರ್ನಾಟಕ ತಂಡಕ್ಕೆ ಆಡುವ ಮೂಲಕ ಇಲ್ಲಿಯವರೇ ಆಗಿದ್ದಾರೆ. ಪ್ರತಿಭಾವಂತ ಗೋಲ್‌ಕೀಪರ್ ಆಗಿರುವ ಭರತ್ ಬೆಂಗಳೂರಿನ ಕೆನರಾ ಬ್ಯಾಂಕ್ ಉದ್ಯೋಗಿ.

ಕರ್ನಾಟಕದ ಹಾಕಿ ಕಣಜ ಕೊಡಗಿನ ಎಸ್.ಕೆ. ಉತ್ತಪ್ಪ, ರಘುನಾಥ್, ಎಸ್.ವಿ. ಸುನಿಲ್, ಬೆಂಗಳೂರಿನ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನ ಇಗ್ನೇಸ್ ಟಿರ್ಕಿ, ಕಾಯ್ದಿಟ್ಟ ಆಟಗಾರರ ಪಟ್ಟಿಯಲ್ಲಿರುವ ವಿನಯ್ ಈಗ ತಂಡದಲ್ಲಿದ್ದಾರೆ. ಇದೇ ಪಟ್ಟಿಯಲ್ಲಿ ಇದ್ದ  ಅರ್ಜುನ್ ಹಾಲಪ್ಪ ಕೂಡ ಕರ್ನಾಟಕದವರು. ಆದರೆ ಈಗ ತಂಡದಿಂದ ಮರಳಿ ಹೋಗಿದ್ದಾರೆ.

ಮುಖ್ಯ ಕೋಚ್ ಮೈಕೆಲ್ ನಾಬ್ಸ್ ಅವರೊಂದಿಗೆ ತರಬೇತುದಾರರಾಗಿರುವ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಕೋಚ್ ಗಂಗಾಧರ್ ಎನ್. ತಪಶೆಟ್ಟಿ, ಸರ್ವಿಸಸ್‌ನ ಬಿ.ಜೆ. ಕಾರ್ಯಪ್ಪ  ಅವರಿದ್ದಾರೆ. ಗೋಲ್‌ಕೀಪಿಂಗ್ ಕೋಚ್ ಆಗಿ ಒಲಿಂಪಿಯನ್ ಎ.ಬಿ. ಸುಬ್ಬಯ್ಯ ಕೂಡ ನೇಮಕವಾಗಿದ್ದರು.

`ಇದೇ ಮೊದಲ ಬಾರಿ ಕರ್ನಾಟಕದ ಇಷ್ಟು ಆಟಗಾರರು ತಂಡದಲ್ಲಿದ್ದಾರೆ. 1992ರಲ್ಲಿ ಆಶೀಶ್ ಬಲ್ಲಾಳ್, ಸುಬ್ಬಯ್ಯ, ಪೂಣಚ್ಚ, ರವಿ ನಾಯ್ಕರ್ ಅವರಿದ್ದದ್ದೇ ಹೆಚ್ಚು. ಪ್ರತಿ ಬಾರಿಯೂ ಇಬ್ಬರು, ಮೂವರು ಇರುತ್ತಿದ್ದರು.

2008ರಲ್ಲಿ ನಮ್ಮ ತಂಡ ಅರ್ಹತೆ ಗಿಟ್ಟಿಸಿರಲಿಲ್ಲ. ಈ ಬಾರಿ ಗೆಲ್ಲುವ ಅವಕಾಶಗಳು ಇದ್ದು, ಕರ್ನಾಟಕದ ಹುಡುಗರೂ ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಜೊತೆಗೆ ಚುರುಕಾಗಿ ಅಭ್ಯಾಸ ನಡೆಸಿದ್ದಾರೆ. ಇಡೀ ತಂಡವನ್ನು ನೋಡಿದರೆ ಸಂದೀಪ್ ಸಿಂಗ್, ಸರದಾರ್ ಸಿಂಗ್ ಅವರಂತಹ ಉತ್ತಮ ಆಟಗಾರರು ಇರುವುದು ತಂಡದ ಬಲ ಹೆಚ್ಚಿಸಿದೆ. ಉಳಿದ ತಂಡಗಳು ವಿಶ್ವ ರ‌್ಯಾಂಕಿಂಗ್‌ನಲ್ಲಿ ನಮಗಿಂತ ಕೆಳಗೆ ಇವೆ.

ಇದರಿಂದ ಗೆಲುವಿನ ಅವಕಾಶ ನಮಗೇ ಹೆಚ್ಚು~ ಎಂದು ಕೋಚ್ ಕಾರ್ಯಪ್ಪ ವಿಶ್ವಾಸ ವ್ಯಕ್ತಪಡಿಸುತ್ತಾರೆ. 
ಎಂ.ಎನ್. ಸೋಮಯ್ಯ, ಎಂ.ಪಿ. ಗಣೇಶ್, ಸಾಬು ವರ್ಕಿ, ಟಿ.ಎಸ್. ಪೂಣಚ್ಚ, ರವಿ   ನಾಯ್ಕರ್, ಎ.ಬಿ. ಸುಬ್ಬಯ್ಯ, ಆಶೀಷ್ ಬಲ್ಲಾಳ್, ಬಿ.ಕೆ. ಸುಬ್ರಮಣಿ ಅಂತಹ ಅಪ್ರತಿಮ ಹಾಕಿಪಟುಗಳನ್ನು ಕರ್ನಾಟಕ ಭಾರತಕ್ಕೆ ನೀಡಿದೆ.

ಇದೀಗ ಭಾರತಕ್ಕೆ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವಂತೆ ಆಡುವ ಜವಾಬ್ದಾರಿಯೂ ಕರ್ನಾಟಕದ ಹುಡುಗರ ಹೆಗಲ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.