
ಮಡಿಕೇರಿ: ಲಂಡನ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಾರತ ಹಾಕಿ ತಂಡ ಪ್ರವೇಶಿಸಲು ಶ್ರಮಿಸಿದ ಕೊಡಗು ಜಿಲ್ಲೆಯ ಆಟಗಾರರಾದ ಎಸ್.ವಿ. ಸುನೀಲ್, ಎಸ್.ಕೆ. ಉತ್ತಪ್ಪ ಹಾಗೂ ವಿ.ಆರ್. ರಘುನಾಥ ಅವರನ್ನು ನಗರದಲ್ಲಿ ವಿವಿಧ ಸಂಘ-ಸಂಸ್ಥೆಗಳು ಸನ್ಮಾಸಿದವು.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ನಗರಸಭೆ ಅಧ್ಯಕ್ಷ ಎಚ್.ಎಂ. ನಂದಕುಮಾರ್, 1975ರಲ್ಲಿ ವಿಶ್ವ ಹಾಕಿ ಚಾಂಪಿಯನ್‌ಷಿಪ್ ಪಡೆದ ಭಾರತ ತಂಡದ ಆಟಗಾರ ಪೈಕೇರಾ ಕಾಳಯ್ಯ, ಹಿರಿಯ ಕ್ರೀಡಾ ತರಬೇತುದಾರ ಸಿ.ವಿ. ಶಂಕರ ಸ್ವಾಮಿ, ಹಾಕಿ ಕೊಡಗು ಸಂಸ್ಥೆಯ ಕಾರ್ಯದರ್ಶಿ ಪಾರ್ಥಚಂಗಪ್ಪ ಕ್ರೀಡಾಪಟುಗಳನ್ನು ಸನ್ಮಾನಿಸಿದರು.
ಸನ್ಮಾನಿತರ ಪರವಾಗಿ ಮಾತನಾಡಿದ ವಿ.ಆರ್. ರಘುನಾಥ, ನಮ್ಮ ಸ್ವಂತ ಜಿಲ್ಲೆಯಲ್ಲಿ ಸನ್ಮಾನ ಪಡೆಯುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಪ್ರೋತ್ಸಾಹ ದೊರೆಯಲಿ ಎಂದರು.
1975ರಲ್ಲಿ ವಿಶ್ವ ಹಾಕಿ ಚಾಂಪಿಯನ್‌ಷಿಪ್ ಪಡೆದ ಭಾರತ ತಂಡದ ಆಟಗಾರ ಪೈಕೇರಾ ಕಾಳಯ್ಯ ಆಟಗಾರರಿಗೆ ಶುಭಕೋರಿದರು. ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ ಮಾತನಾಡಿ, ದೇಶದ ಗಡಿ ಕಾಯುವುದರ ಜೊತೆಗೆ ಹಾಕಿಯಲ್ಲೂ ಕೊಡಗಿನವರು ಖ್ಯಾತಿ ಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ಜಿ.ಪಂ.ವತಿಯಿಂದಲೂ ಕೂಡ ಶಿಕ್ಷಣ, ಆರೋಗ್ಯ ಹಾಗೂ ಕ್ರೀಡೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ ಎಂದರು.
ನಗರಸಭೆ ಅಧ್ಯಕ್ಷ ಎಚ್.ಎಂ. ನಂದಕುಮಾರ್ ಮಾತನಾಡಿ, ಸಿಂಥೆಟಿಕ್ ಮೈದಾನ ಸೇರಿದಂತೆ ಹಲವು ರೀತಿಯ ಸೌಲಭ್ಯಗಳನ್ನು ಕ್ರೀಡಾಪಟುಗಳಿಗೆ ಜಿಲ್ಲೆಯಲ್ಲಿ ನೀಡಲಾಗುತ್ತಿದೆ. ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಕ್ರೀಡಾಪಟುಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದರು.
ನಗರಸಭೆ ಸದಸ್ಯ ಚುಮ್ಮಿ ದೇವಯ್ಯ ಸ್ವಾಗತಿಸಿದರು. ಆರ್.ಬಿ. ಶಿವಕುಮಾರ ನಿರೂಪಿಸಿದರು ಹಾಗೂ ದಾಮೋದರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.