ADVERTISEMENT

ಹಾಕಿ: ಭಾರತ ತಂಡಕ್ಕೆ ಮಿಶ್ರಫಲ

ಸರ್ದಾರ್‌ ಸಿಂಗ್‌ ಪಡೆಗೆ ಗೆಲುವು, ವನಿತೆಯರಿಗೆ ಸೋಲು

​ಪ್ರಜಾವಾಣಿ ವಾರ್ತೆ
Published 17 ಜೂನ್ 2015, 19:30 IST
Last Updated 17 ಜೂನ್ 2015, 19:30 IST
ಎಫ್‌ಐಎಚ್‌ ವಿಶ್ವ ಲೀಗ್‌ ಸೆಮಿಫೈನಲ್‌ ಅಭ್ಯಾಸ ಪಂದ್ಯದಲ್ಲಿ ಗೆಲುವು ದಾಖಲಿಸಿದ ಭಾರತ ಪುರುಷರ ತಂಡದ ಆಟಗಾರರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪೈಪೋಟಿ ನಡೆಸಿದ ಕ್ಷಣ
ಎಫ್‌ಐಎಚ್‌ ವಿಶ್ವ ಲೀಗ್‌ ಸೆಮಿಫೈನಲ್‌ ಅಭ್ಯಾಸ ಪಂದ್ಯದಲ್ಲಿ ಗೆಲುವು ದಾಖಲಿಸಿದ ಭಾರತ ಪುರುಷರ ತಂಡದ ಆಟಗಾರರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪೈಪೋಟಿ ನಡೆಸಿದ ಕ್ಷಣ   

ಆ್ಯಂಟ್‌ವರ್ಪ್‌, ಬೆಲ್ಜಿಯಂ (ಪಿಟಿಐ): ಎಫ್‌ಐಎಚ್‌ ವಿಶ್ವ ಲೀಗ್ ಸೆಮಿಫೈನಲ್‌ ಹಾಕಿ ಟೂರ್ನಿಯ ಅಭ್ಯಾಸ ಪಂದ್ಯಗಳಲ್ಲಿ ಭಾರತಕ್ಕೆ ಮಿಶ್ರಫಲ ಲಭಿಸಿದೆ. ಸರ್ದಾರ್‌ ಸಿಂಗ್‌ ನಾಯಕತ್ವದ ಪುರುಷರ ತಂಡ ಗೆಲುವು ಪಡೆದರೆ, ಭಾರತ ಮಹಿಳಾ ತಂಡ ನಿರಾಸೆ ಕಂಡಿದೆ.

ಮಂಗಳವಾರ ನಡೆದ ಪುರುಷರ ವಿಭಾಗದ ಮೂರನೇ ಪಂದ್ಯದಲ್ಲಿ ಸರ್ದಾರ್‌ ಪಡೆ 4–0 ಗೋಲುಗಳಿಂದ ಅಮೆರಿಕ ತಂಡವನ್ನು ಸುಲಭವಾಗಿ ಮಣಿಸಿತು. ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ತಂಡಕ್ಕೆ ಉತ್ತಮ ಆರಂಭವೇ ಲಭಿಸಿತು.

ಡಿಫೆಂಡರ್‌ ರೂಪಿಂದರ್‌ ಪಾಲ್‌ ಸಿಂಗ್‌ 20ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಅವಕಾಶ ಬಳಸಿಕೊಂಡು ಮುನ್ನಡೆ ತಂದುಕೊಟ್ಟರು. ನಂತರದ 29 ನಿಮಿಷಗಳಲ್ಲಿ ಭಾರತಕ್ಕೆ ಮತ್ತೆ ಮುನ್ನಡೆ ಸಿಕ್ಕಿತು. ಇದಕ್ಕೆ ಕಾರಣವಾಗಿದ್ದು ಮಿಡ್‌ಫೀಲ್ಡರ್‌್ ಲಲಿತ್‌ ಉಪಾಧ್ಯ. 49ನೇ ನಿಮಿಷದಲ್ಲಿ ಚೆಂಡನ್ನು ಸೊಗಸಾಗಿ ಗುರಿ ಸೇರಿಸಿದ ಲಲಿತ್ ಮುನ್ನಡೆಯನ್ನು 2–0ರಲ್ಲಿ ಹೆಚ್ಚಿಸಿದರು.

52ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ರೂಪಿಂದರ್ ಪಾಲ್‌ ಸಿಂಗ್ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು. ಪಂದ್ಯದ ಕೊನೆಯ ನಿಮಿಷದಲ್ಲಿ ಯುವರಾಜ್‌ ವಾಲ್ಮೀಕಿ ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.  ಇದಕ್ಕೂ ಮೊದಲು ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತ್ತು. ಜಸ್ಜೀತ್‌ ಸಿಂಗ್‌ ಖುಲ್ಲಾರ್‌ ಗೋಲು ಗಳಿಸುವ ಯತ್ನಕ್ಕೆ ಅಮೆರಿಕದ ಗೋಲ್‌ಕೀಪರ್‌ ಅಡ್ಡಿಯಾದರು.

ಮೊದಲ ಅಭ್ಯಾಸ ಪಂದ್ಯದಲ್ಲಿ ಸರ್ದಾರ್‌ ಬಳಗ ಆತಿಥೇಯ ಬೆಲ್ಜಿಯಂ ಎದುರು ಸೋತಿತ್ತು. ಮತ್ತೊಂದು ಹೋರಾಟದಲ್ಲಿ ಫ್ರಾನ್ಸ್ ತಂಡವನ್ನು 1–0 ಗೋಲಿನಿಂದ ಮಣಿಸಿತ್ತು. ಜೂನ್‌ 20ರಿಂದ ವಿಶ್ವ ಹಾಕಿ ಸೆಮಿಫೈನಲ್‌ ಲೀಗ್ ಟೂರ್ನಿ ಆರಂಭವಾಗಲಿದ್ದು ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಫ್ರಾನ್ಸ್‌ ಎದುರು ಪೈಪೋಟಿ ನಡೆಸಲಿದೆ.

ಭಾರತ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಆಸ್ಟ್ರೇಲಿಯಾ, ಪಾಕಿಸ್ತಾನ, ಪೋಲ್ಯಾಂಡ್‌ ಮತ್ತು ಫ್ರಾನ್ಸ್‌ ಇದೇ ಗುಂಪಿನಲ್ಲಿವೆ. ನೂತನ ಕೋಚ್‌ ಪಾಲ್‌ ಆನ್‌ ವಾಸ್‌ ಗರಡಿಯಲ್ಲಿ ತರಬೇತುಗೊಂಡಿರುವ ಭಾರತ ತಂಡ ನಾಲ್ಕನೇ ಅಭ್ಯಾಸ ಪಂದ್ಯವನ್ನು ಬ್ರಿಟನ್‌ ಎದುರು ಆಡಲಿದೆ.

ಮಹಿಳೆಯರಿಗೆ ನಿರಾಸೆ: ಹಿಂದಿನ ಪಂದ್ಯದಲ್ಲಿ ಜಪಾನ್‌ ಎದುರು ಅನುಭವಿಸಿದ್ದ ಸೋಲಿನಿಂದ ಹೊರಬರದ ಮಹಿಳಾ ತಂಡ ಎರಡನೇ ಅಭ್ಯಾಸ ಪಂದ್ಯದಲ್ಲಿ 1–2 ಗೋಲುಗಳಿಂದ ಇಟಲಿ ಎದುರು ಮುಗ್ಗರಿಸಿತು.

ವಿಜಯೀ ತಂಡ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಬಳಸಿಕೊಂಡು ಗೋಲುಗಳನ್ನು ಕಲೆ ಹಾಕಿತು. ಭಾರತದ ಪರ ರಿತು ರಾಣಿ ಮಾತ್ರ ಗೋಲು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.