ADVERTISEMENT

ಹೈದರಾಬಾದ್ ಇಲೆವೆನ್ ವಿರುದ್ಧ ಇಂದು ಕೊನೆಯ ಅಭ್ಯಾಸ ಪಂದ್ಯ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಹೈದರಾಬಾದ್ (ಪಿಟಿಐ): ಕೊನೆಯ ಅಭ್ಯಾಸ ಪಂದ್ಯದಲ್ಲಿ ಗೆಲುವು ಪಡೆದು ಭಾರತ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗಬೇಕು. ತವರು ನೆಲದಲ್ಲಿಯೇ ಆತಿಥೇಯರಿಗೆ ಮತ್ತೊಮ್ಮೆ ಸೋಲಿನ ರುಚಿ ತೋರಿಸಬೇಕು. ಇದು ಅಲಸ್ಟರ್ ಕುಕ್ ನೇತೃತ್ವದ ಇಂಗ್ಲೆಂಡ್ ಪಡೆಯ ಲೆಕ್ಕಾಚಾರ.

ಮೊದಲ ಅಭ್ಯಾಸ ಪಂದ್ಯದಲ್ಲಿ ಗೆಲುವು ಪಡೆದು ವಿಶ್ವಾಸದಿಂದ ಬೀಗುತ್ತಿರುವ ಇಂಗ್ಲೆಂಡ್ ಮಂಗಳವಾರ ಹೈದರಾಬಾದ್ ಇಲೆವೆನ್ ವಿರುದ್ಧ ಎರಡನೆ ಹಾಗೂ ಕೊನೆಯ ಅಭ್ಯಾಸ ಪಂದ್ಯವನ್ನಾಡಲಿದೆ. ಇಲ್ಲಿನ ಉಪ್ಪಳದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.

ಮೊದಲ ಪಂದ್ಯದಲ್ಲಿ ಕುಕ್ ಪಡೆ 56 ರನ್‌ಗಳ ಗೆಲುವು ಪಡೆದಿತ್ತು. ಒಟ್ಟು 219 ರನ್ ಗಳಿಸಿತ್ತು. ಆದರೆ ಜೊನಾಥನ್ ಟ್ರಾಟ್, ಕುಕ್ ಹಾಗೂ ಇಯಾನ್ ಬೆಲ್ ಅವರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. 
`ಮೊದಲ ಪಂದ್ಯದಲ್ಲಿ ಇನ್ನೂ ಹೆಚ್ಚು ಮೊತ್ತ ಗಳಿಸಬಹುದಿತ್ತು. ಆರಂಭಿಕಆಟಗಾರರು ವಿಫಲರಾದ್ದರಿಂದ ಅದು ಸಾಧ್ಯವಾಗಲಿಲ್ಲ. ಇದು ಏಕದಿನ ಸರಣಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಕ್ಷೇತ್ರ ರಕ್ಷಣೆ ಹಾಗೂ ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದ್ದೇವೆ. ರವಿ ಬೋಪಾರ ಉತ್ತಮ ಫಾರ್ಮ್‌ನಲ್ಲಿದ್ದಾರೆ. ~ ಎಂದು ಕುಕ್ ಹೇಳಿದ್ದಾರೆ.
ಮೊದಲ ಅಭ್ಯಾಸ ಪಂದ್ಯದಲ್ಲಿ ಸ್ಟೀವನ್ ಫಿನ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಇದರಿಂದ ಪ್ರವಾಸಿ ತಂಡಕ್ಕೆ ಗೆಲ್ಲಲು ಸಾಧ್ಯವಾಗಿತ್ತು.

ADVERTISEMENT

ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ಇಂಗ್ಲೆಂಡ್ ಅಕ್ಟೋಬರ್ 14ರಂದು ಭಾರತ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಈ ಸರಣಿಯಲ್ಲಿ ಒಟ್ಟು ಐದು ಪಂದ್ಯಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.