ADVERTISEMENT

22ನೇ ಸ್ಥಾನಕ್ಕೇರಿದ ಭುವನೇಶ್ವರ್‌

ಪಿಟಿಐ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST
22ನೇ ಸ್ಥಾನಕ್ಕೇರಿದ ಭುವನೇಶ್ವರ್‌
22ನೇ ಸ್ಥಾನಕ್ಕೇರಿದ ಭುವನೇಶ್ವರ್‌   

ಕೇಪ್‌ ಟೌನ್‌ : ಭಾರತದ ಬೌಲರ್‌ ಭುವನೇಶ್ವರ್ ಕುಮಾರ್ ಅವರು ವೃತ್ತಿ ಜೀವನದ ಶ್ರೇಷ್ಠ ರ‍್ಯಾಂಕಿಂಗ್ ಸ್ಥಾನ ಪಡೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮಿಂಚಿದ್ದ ಭುವನೇಶ್ವರ್‌ ಮಂಗಳವಾರ ಬಿಡುಗಡೆಯಾದ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಎಂಟು ಸ್ಥಾನಗಳಲ್ಲಿ ಏರಿಕೆ ಕಂಡು 22ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಎರಡು ಇನಿಂಗ್ಸ್‌ಗಳಲ್ಲಿ ಭುವನೇಶ್ವರ್‌ ಆರು ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 72 ರನ್‌ಗಳಿಂದ ಸೋತಿದೆ.

ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತದ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಕುಸಿತ ಕಂಡಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. 947 ಪಾಯಿಂಟ್ಸ್‌ಗಳು ಅವರ ಬಳಿ ಇವೆ.

ADVERTISEMENT

ಕೊಹ್ಲಿ ಅವರನ್ನು ಇಂಗ್ಲೆಂಡ್‌ ಬ್ಯಾಟ್ಸ್‌ಮನ್ ಜೋ ರೂಟ್ ಹಿಂದಿಕ್ಕಿದ್ದಾರೆ. ರೂಟ್ ಎರಡನೇ ಸ್ಥಾನದಲ್ಲಿದ್ದರೆ,  ಕೊಹ್ಲಿ 13 ಪಾಯಿಂಟ್ಸ್ ಕಳೆದುಕೊಂಡು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ನ್ಯೂಜಿಲೆಂಡ್ ತಂಡದ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್‌ ನಾಲ್ಕನೇ ಸ್ಥಾನದಲ್ಲಿ ಇದ್ದಾರೆ.

ವಿರಾಟ್ ಮೊದಲ ಪಂದ್ಯದ ಎರಡೂ ಇನಿಂಗ್ಸ್‌ ಸೇರಿ ಕೇವಲ 33ರನ್ ಗಳಿಸಿದ್ದರು. ಒಟ್ಟು 30 ರನ್‌ ಕಲೆಹಾಕಿದ್ದ ಪೂಜಾರ 25 ಪಾಯಿಂಟ್ಸ್ ಕಳೆದುಕೊಂಡಿದ್ದಾರೆ.

ಐದನೇ ಆ್ಯಷಸ್ ಟೆಸ್ಟ್‌ ಪಂದ್ಯದಲ್ಲಿ 141 ರನ್ ದಾಖಲಿಸಿದ್ದ ರೂಟ್ 26 ಪಾಯಿಂಟ್ಸ್ ಗಿಟ್ಟಿಸಿದ್ದಾರೆ. ದಕ್ಷಿಣ ಆಫ್ರಿಕಾದ ಹಾಶಿಮ್‌ ಆಮ್ಲಾ ಮತ್ತು ಡೀನ್ ಎಲ್ಗರ್ ಕೂಡ ಮೂರು ಸ್ಥಾನಗಳಲ್ಲಿ ಕುಸಿತ ಕಂಡು ಕ್ರಮವಾಗಿ 10 ಮತ್ತು 16ನೇ ಸ್ಥಾನದಲ್ಲಿದ್ದಾರೆ.

ಎ.ಬಿ ಡಿವಿಲಿಯರ್ಸ್‌ ಐದು ಸ್ಥಾನಗಳಲ್ಲಿ ಏರಿಕೆ ಕಂಡು 13ನೇ ಸ್ಥಾನ ಪಡೆದಿದ್ದಾರೆ.

ಪಾಂಡ್ಯಗೆ 49ನೇ ಸ್ಥಾನ: ಭಾರತದ ಆಲ್‌ರೌಂಡ್ ಆಟಗಾರ ಹಾರ್ದಿಕ್ ಪಾಂಡ್ಯ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ ನಲ್ಲಿ 49ನೇ ಸ್ಥಾನಕ್ಕೆ ಏರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.