ADVERTISEMENT

ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಚಾಂಪಿಯನ್‌

ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಚಾಂಪಿಯನ್‌

ಡಿ.ಬಿ, ನಾಗರಾಜ
Published 12 ಜನವರಿ 2018, 18:32 IST
Last Updated 12 ಜನವರಿ 2018, 18:32 IST
63ನೇ ರಾಷ್ಟ್ರ ಮಟ್ಟದ ಶಾಲಾ ಬಾಲಕ–ಬಾಲಕಿಯರ 14 ವರ್ಷದೊಳಗಿನವರ ವಾಲಿಬಾಲ್ ಪಂದ್ಯಾವಳಿಯ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ಷಿಪ್‌ ಪಡೆದ ಪಶ್ಚಿಮ ಬಂಗಾಳ ತಂಡದ ಆಟಗಾರ್ತಿಯರ ವಿಜಯದ ಸಂಭ್ರಮ ಪ್ರಜಾವಾಣಿ ಚಿತ್ರ
63ನೇ ರಾಷ್ಟ್ರ ಮಟ್ಟದ ಶಾಲಾ ಬಾಲಕ–ಬಾಲಕಿಯರ 14 ವರ್ಷದೊಳಗಿನವರ ವಾಲಿಬಾಲ್ ಪಂದ್ಯಾವಳಿಯ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ಷಿಪ್‌ ಪಡೆದ ಪಶ್ಚಿಮ ಬಂಗಾಳ ತಂಡದ ಆಟಗಾರ್ತಿಯರ ವಿಜಯದ ಸಂಭ್ರಮ ಪ್ರಜಾವಾಣಿ ಚಿತ್ರ   

ವಿಜಯಪುರ: ಸಂಘಟಿತ ಆಟ ಆಡಿದ ಪಶ್ಚಿಮ ಬಂಗಾಳ ಬಾಲಕಿಯರ ತಂಡ ತಮಿಳುನಾಡು ತಂಡವನ್ನು ಮಣಿಸಿದರೆ, ಬಾಲಕರ ವಿಭಾಗದಲ್ಲಿ ಉತ್ತರ ಪ್ರದೇಶ ತಂಡ ತೆಲಂಗಾಣ ವಿರುದ್ಧ ಏಕಪಕ್ಷೀಯ ಗೆಲುವು ದಾಖಲಿಸಿತು. ಈ ಮೂಲಕ 14 ವರ್ಷದೊಳಗಿನವರ ಶಾಲಾ ವಿದ್ಯಾರ್ಥಿಗಳ ರಾಷ್ಟ್ರೀಯ ವಾಲಿಬಾಲ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಬಾಲಕಿಯರ ಫೈನಲ್‌ ಪಂದ್ಯದಲ್ಲಿ ಪಶ್ಚಿಮ ಬಂಗಾಳ ತಂಡದ ನಾಯಕಿ ಪೆರುನಾ ಪಾಲ್‌ ಮತ್ತು ಕುರುಬಾಂಕ್ಷಿ ತಿವಾರಿ ಅಮೋಘ ಸಾಮರ್ಥ್ಯ ತೋರಿದರು. ಹೀಗಾಗಿ ತಂಡ 25–14, 25–12, 25–16 ಅಂಕಗಳಿಂದ ಗೆಲುವು ದಾಖಲಿಸಿತು.

ತಮಿಳುನಾಡು ತಂಡದ ನಾಯಕಿ ಆನಂದಿ ಅವರೊಂದಿಗೆ ಜಿ.ಗೋಪಿಕಾ ಮತ್ತು ಕಾರ್ತಿಕಾ ಅವರು ಎದುರಾಳಿ ತಂಡದ ತಾಂತ್ರಿಕ ಕೌಶಲ ಭೇದಿಸುವಲ್ಲಿ ವಿಫಲರಾದರು. ಹೀಗಾಗಿ ಪಶ್ಚಿಮ ಬಂಗಾಳ ಸುಲಭ ಜಯ ಸಾಧಿಸಿತು.

ADVERTISEMENT

ಬಾಲಕರ ವಿಭಾಗದ ಫೈನಲ್‌ನಲ್ಲಿ ಉತ್ತರ ಪ್ರದೇಶ ತಂಡ ತೆಲಂಗಾಣ ತಂಡವನ್ನು 25–11, 25–12, 25–02ರಿಂದ ಸೋಲಿಸಿತು.

ಎರಡೂ ವಿಭಾಗಗಳಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಹರಿಯಾಣ ಜಯ ಸಾಧಿಸಿತು. ಬಾಲಕಿಯರ ವಿಭಾಗದಲ್ಲಿ ಉತ್ತರಪ್ರದೇಶ ತಂಡವನ್ನು ಸೋಲಿಸಿದರೆ ಬಾಲಕರ ವಿಭಾಗದಲ್ಲಿ ವಿದ್ಯಾಭಾರತಿ ತಂಡವನ್ನು ಮಣಿಸಿತು.

ತೆಲಂಗಾಣ ತಕರಾರು

ಬಾಲಕರ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ಏಕಪಕ್ಷೀಯವಾಗಿ ಎರಡು ಸೆಟ್‌ ಗೆದ್ದ ಬಳಿಕ ತೆಲಂಗಾಣ ಆಟಗಾರರು ತಕರಾರು ತೆಗೆದು, ಮೈದಾನದಲ್ಲೇ ಪ್ರತಿಭಟನೆ ನಡೆಸಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರು ತೆಲಂಗಾಣ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಒಂದು ಗಂಟೆಗೂ ಹೆಚ್ಚಿನ ಅವಧಿ ಆಟ ಸ್ಥಗಿತಗೊಂಡಿತು. ವೀಕ್ಷಕರ ಗ್ಯಾಲರಿಯಿಂದ ‘ಯುಪಿ ಚೀಟರ್‌... ಯುಪಿ ಚೀಟರ್...’ ಧ್ವನಿ ಮೊಳಗಿತು. ಬಹುತೇಕ ಕ್ರೀಡಾಸಕ್ತರು ಉತ್ತರ ಪ್ರದೇಶ ತಂಡವನ್ನು ಟೂರ್ನಿಯಿಂದ ಅಮಾನತುಗೊಳಿಸಬೇಕು ಎಂಬ ತೆಲಂಗಾಣ ತಂಡದ ಬೇಡಿಕೆಗೆ ಬೆಂಬಲ ನೀಡಿದರು.

ಕೆಲವರು ಮೈದಾನದೊಳಗೆ ನುಗ್ಗಿ ಆಕ್ಷೇಪ ವ್ಯಕ್ತಪಡಿಸಿದರೆ, ಗ್ಯಾಲರಿಯಲ್ಲಿ ಕುಳಿತಿದ್ದವರು ಕರಪತ್ರಗಳಲ್ಲಿ ಕಾಗದದ ಉಂಡೆ ಮಾಡಿ, ಉತ್ತರ ಪ್ರದೇಶ ಆಟಗಾರರ ಮೇಲೆ ತೂರಿ ಆಕ್ರೋಶ ವ್ಯಕ್ತಪಡಿಸಿದರು.

‘ಉತ್ತರ ಪ್ರದೇಶ ತಂಡದ ಆಟಗಾರರು 14 ವರ್ಷದೊಳಗಿನ ವಯೋಮಿತಿಯವರಲ್ಲ. ತಂಡವನ್ನು ಟೂರ್ನಿಯಿಂದಲೇ ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿ ತೆಲಂಗಾಣ ತಂಡದ ವ್ಯವಸ್ಥಾಪಕ ಬಿ.ವೆಂಕಟೇಶ್ವರಲು ಎಸ್‌ಜಿಎಫ್‌ಐ ವೀಕ್ಷಕ ಆರ್‌.ಕೆ.ಪರಿಹಾರ್‌ ಅವರಿಗೆ ಅಧಿಕೃತ ಪ್ರತಿಭಟನೆ ಸಲ್ಲಿಸಿ, ಎದುರಾಳಿ ತಂಡದ ಆಟಗಾರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ತೆಲಂಗಾಣ ತಂಡ ಅಧಿಕೃತವಾಗಿ ಪ್ರತಿಭಟನೆ ದಾಖಲಿಸುತ್ತಿದ್ದಂತೆ, ಎಸ್‌ಜಿಎಫ್‌ಐನ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ ವೀಕ್ಷಕ ಆರ್‌.ಕೆ.ಪರಿಹಾರ್‌ ನಡೆದ ವಿದ್ಯಮಾನದ ಕುರಿತು ಚರ್ಚಿಸಿದರು.

‘ಪಂದ್ಯದ ಮಧ್ಯದಲ್ಲಿ ನಡೆದ ಪ್ರತಿಭಟನೆ ಪರಿಗಣಿಸಲು ಬರುವುದಿಲ್ಲ. ಆಟ ಮುಂದುವರೆಸದಿದ್ದರೆ ತಂಡವನ್ನು ನಿಯಮಾವಳಿಯಂತೆ ಅಮಾನತುಗೊಳಿಸಲಾಗುವುದು’ ಎಂಬ ಕಠಿಣ ಎಚ್ಚರಿಕೆಯನ್ನು ವೀಕ್ಷಕರು ನೀಡಿದ ಬಳಿಕ ತೆಲಂಗಾಣ ಆಟಗಾರರು ಪಂದ್ಯದಲ್ಲಿ ಭಾಗಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.