ADVERTISEMENT

ಅಗ್ರಸ್ಥಾನದ ಮೇಲೆ ಚೆನ್ನೈಯಿನ್ ಕಣ್ಣು

ಇಂಡಿಯನ್ ಸೂಪರ್ ಲೀಗ್‌ ಟೆನಿಸ್ ಟೂರ್ನಿ

ಪಿಟಿಐ
Published 12 ಜನವರಿ 2018, 18:36 IST
Last Updated 12 ಜನವರಿ 2018, 18:36 IST
ಚೆನ್ನೈಯಿನ್ ತಂಡ ಜಯದ ವಿಶ್ವಾಸದಲ್ಲಿದೆ
ಚೆನ್ನೈಯಿನ್ ತಂಡ ಜಯದ ವಿಶ್ವಾಸದಲ್ಲಿದೆ   

ಚೆನ್ನೈ : ಚೆನ್ನೈಯಿನ್ ಎಫ್‌ಸಿ ಹಾಗೂ ಎಫ್‌ಸಿ ಪುಣೆ ಸಿಟಿ ತಂಡಗಳು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಾಯಿಂಟ್ಸ್‌ ಪಟ್ಟಿಯ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿವೆ. ಶನಿವಾರ ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಗೆದ್ದವರು ಅಗ್ರಸ್ಥಾನದತ್ತ ದಾಪುಗಾಲಿಡಲಿದ್ದಾರೆ.

ತವರಿನಲ್ಲಿ ಆಡುವ ಚೆನ್ನೈಯಿನ್ ತಂಡ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಪುಣೆ ಮೂರನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಆಡಿದ ಒಂಬತ್ತು ಪಂದ್ಯಗಳಲ್ಲಿ ಐದರಲ್ಲಿ ಗೆದ್ದಿವೆ. ತಲಾ ಒಂದೊಂದು ಪಂದ್ಯ ಡ್ರಾ ಮಾಡಿಕೊಂಡಿವೆ. ಆದರೆ ಚೆನ್ನೈಯಿನ್ ಒಂದು ಪಾಯಿಂಟ್‌ (17) ಹೆಚ್ಚು ಪಡೆದು ಪುಣೆಗಿಂತ ಮೇಲಿನ ಸ್ಥಾನದಲ್ಲಿದೆ.

ಮರಿನಾ ಅರೆನಾ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಚೆನ್ನೈಯಿನ್ ಜಯಿಸುವ ನೆಚ್ಚಿನ ತಂಡವಾಗಿದೆ. ತವರಿನ ಅಭಿಮಾನಿಗಳ ಬೆಂಬಲ ಈ ತಂಡಕ್ಕಿದೆ. ಹಿಂದಿನ ಪಂದ್ಯದಲ್ಲಿ ಚೆನ್ನೈಯಿನ್ 2–2 ಗೋಲುಗಳಲ್ಲಿ ಡೆಲ್ಲಿ ಡೈನಮೋಸ್‌ ಎದುರು ಡ್ರಾ ಮಾಡಿಕೊಂಡಿತ್ತು. ಡಿಸೆಂಬರ್‌ನಲ್ಲಿ ನಡೆದ ಪಂದ್ಯದಲ್ಲಿ 1–0 ಗೋಲಿನಿಂದ ಜೆಮ್‌ಷೆಡ್‌ಪುರ ಎಫ್‌ಸಿಗೆ ಸೋಲುಣಿಸಿತ್ತು. ಎರಡೂ ತಂಡಗಳ ಈ ಹಿಂದಿನ ಮುಖಾಮುಖಿಯಲ್ಲಿ ಚೆನ್ನೈ ಮೇಲುಗೈ ಸಾಧಿಸಿತ್ತು. ಈ ತಂಡ 1–0ಗೋಲಿನಿಂದ ಪುಣೆಗೆ ಸೋಲುಣಿಸಿತ್ತು.

ADVERTISEMENT

ಪುಣೆ ತಂಡ ತನ್ನ ಹಿಂದಿನ ಪಂದ್ಯವನ್ನು 1–1 ಗೋಲಿನಿಂದ ಕೇರಳ ಬ್ಲಾಸ್ಟರ್ಸ್ ಎದುರು ಡ್ರಾ ಮಾಡಿಕೊಂಡಿತ್ತು. ನಾರ್ತ್ ಈಸ್ಟ್ ಯುನೈಟೆಡ್ ತಂಡದ ಎದುರು 5–0 ಗೋಲಿನಿಂದ ಗೆದ್ದಿತ್ತು.

‘ನಮ್ಮ ತಂಡ ಹಿಂದಿನ ಸೋಲನ್ನು ಮರೆತು ಆಡಲಿದೆ. ರಕ್ಷಣಾ ವಿಭಾಗದಲ್ಲಿ ನಾವು ಪ್ರಬಲವಾಗಿದ್ದೇವೆ. ಗೆಲುವು ದಾಖಲಿಸುವ ನಿಟ್ಟಿನಲ್ಲಿ ಪೂರ್ಣ ಸಿದ್ಧತೆ ನಡೆಸಿದ್ದೇವೆ’ ಎಂದು ಪುಣೆ ತಂಡದ ಕೋಚ್‌ ಸೈಯದ್ ಸಬೀರ್ ಪಾಷಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.