ADVERTISEMENT

ಕರ್ನಾಟಕಕ್ಕೆ ಪಂಜಾಬ್‌ ಸವಾಲು

ಪಿಟಿಐ
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST
ಕರ್ನಾಟಕಕ್ಕೆ ಪಂಜಾಬ್‌ ಸವಾಲು
ಕರ್ನಾಟಕಕ್ಕೆ ಪಂಜಾಬ್‌ ಸವಾಲು   

ಕೋಲ್ಕತ್ತ: ದಕ್ಷಿಣ ವಲಯದ ಟೂರ್ನಿಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ ಸೂಪರ್‌ ಲೀಗ್‌ಗೆ ಅರ್ಹತೆ ಗಳಿಸಿರುವ ಕರ್ನಾಟಕ ತಂಡ ಈಗ ಹೊಸ ಸವಾಲಿಗೆ ಎದೆಯೊಡ್ಡಲು ಸನ್ನದ್ಧವಾಗಿದೆ.

ಭಾನುವಾರ ನಡೆಯುವ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಸೂಪರ್‌ ಲೀಗ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಆರ್‌.ವಿನಯ್‌ ಕುಮಾರ್‌ ಪಡೆ ಬಲಿಷ್ಠ ಪಂಜಾಬ್‌ ವಿರುದ್ಧ ಸೆಣಸಲಿದೆ.

ದಕ್ಷಿಣ ವಲಯದ ಟೂರ್ನಿಯಲ್ಲಿ ಮಯಂಕ್‌ ಅಗರವಾಲ್‌ ಜೊತೆ ಇನಿಂಗ್ಸ್‌ ಆರಂಭಿಸಿ ಗಮನ ಸೆಳೆದಿದ್ದ ಕರುಣ್‌ ನಾಯರ್‌, ಈ ಪಂದ್ಯದಲ್ಲೂ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಕರುಣ್‌ ಟೂರ್ನಿಯಲ್ಲಿ 5 ಪಂದ್ಯಗಳಿಂದ 236ರನ್‌ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಕೂಡ ಸೇರಿದೆ.  ಈ ಬಾರಿಯ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಹೆಗ್ಗಳಿಕೆ ಹೊಂದಿರುವ ಮಯಂಕ್‌, ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ 5 ಪಂದ್ಯಗಳಿಂದ 166ರನ್ ಕಲೆಹಾಕಿದ್ದಾರೆ.

ADVERTISEMENT

ಸಮರ್ಥ್ ಕೂಡ ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದಾರೆ. ಸ್ಟುವರ್ಟ್‌ ಬಿನ್ನಿ, ಕೆ.ಗೌತಮ್‌ ಮತ್ತು ಶ್ರೇಯಸ್‌ ಗೋಪಾಲ್‌ ಮಧ್ಯಮ ಕ್ರಮಾಂಕದಲ್ಲಿ ತಂಡದ ಆಧಾರಸ್ತಂಭಗಳಾಗಿದ್ದಾರೆ. ಮನೀಷ್‌ ಪಾಂಡೆ ಅನುಪಸ್ಥಿತಿಯಲ್ಲಿ ಪವನ್‌ ದೇಶಪಾಂಡೆಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇದೆ. ನಾಯಕ ವಿನಯ್‌, ಮಿಥುನ್‌, ಎಸ್‌.ಅರವಿಂದ್‌ ತಂಡದ ವೇಗದ ಶಕ್ತಿಯಾಗಿದ್ದಾರೆ. ಯುವಿ, ಹರಭಜನ್‌ ಆಕರ್ಷಣೆ: ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಯುವರಾಜ್‌ ಸಿಂಗ್‌ ಮತ್ತು ಹರಭಜನ್‌ ಸಿಂಗ್‌ ಅವರು ಪಂಜಾಬ್‌ ಪಾಳಯದಲ್ಲಿದ್ದಾರೆ. ತಂಡ ಇಂತಿದೆ: ಕರ್ನಾಟಕ: ಆರ್‌.ವಿನಯ್‌ ಕುಮಾರ್‌ (ನಾಯಕ), ಮಯಂಕ್‌ ಅಗರವಾಲ್‌, ಕರುಣ್‌ ನಾಯರ್‌ (ಉಪ ನಾಯಕ), ಆರ್‌.ಸಮರ್ಥ್‌, ಸ್ಟುವರ್ಟ್ ಬಿನ್ನಿ, ಸಿ.ಎಂ.ಗೌತಮ್‌ (ವಿಕೆಟ್‌ ಕೀಪರ್‌), ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ಅಭಿಮನ್ಯು ಮಿಥುನ್‌, ಎಸ್‌.ಅರವಿಂದ್‌, ಪ್ರವೀಣ್‌ ದುಬೆ, ಜೆ.ಸುಚಿತ್‌, ಅನಿರುದ್ಧ್‌ ಜೋಷಿ, ಪ್ರಸಿದ್ಧ ಎಂ.ಕೃಷ್ಣ, ಬಿ.ಆರ್‌.ಶರತ್‌ (ವಿಕೆಟ್‌ ಕೀಪರ್‌) ಮತ್ತು ಪವನ್‌ ದೇಶಪಾಂಡೆ.ಆರಂಭ: ಬೆಳಿಗ್ಗೆ 8.45.

ಸ್ಥಳ: ಕೋಲ್ಕತ್ತ.

* ಯುವ ಮತ್ತು ಪ್ರತಿಭಾವಂತ ಆಟಗಾರರ ಜೊತೆ ಪೈಪೋಟಿ ನಡೆಸುವ ಸವಾಲು ನನ್ನ ಎದುರಿಗಿದೆ. ಈ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರಲು ಪ್ರಯತ್ನಿಸುವೆ

– ಹರಭಜನ್‌ ಸಿಂಗ್, ಪಂಜಾಬ್‌ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.