ADVERTISEMENT

‘ವಿರಾಟ’ ಆಟಕ್ಕೆ ಅಖ್ತರ್‌ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 19:30 IST
Last Updated 2 ಫೆಬ್ರುವರಿ 2018, 19:30 IST
‘ವಿರಾಟ’ ಆಟಕ್ಕೆ  ಅಖ್ತರ್‌ ಮೆಚ್ಚುಗೆ
‘ವಿರಾಟ’ ಆಟಕ್ಕೆ ಅಖ್ತರ್‌ ಮೆಚ್ಚುಗೆ   

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಆಡಿದ ರೀತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಪಾಕಿಸ್ತಾನ ತಂಡದ ಹಿರಿಯ ಆಟಗಾರ ಶೋಯಬ್‌ ಅಖ್ತರ್‌ ಕೂಡ ‘ವಿರಾಟ’ ಆಟವನ್ನು ಕೊಂಡಾಡಿದ್ದಾರೆ.

‘ಗುರಿ ಬೆನ್ನಟ್ಟುವ ಹಾದಿಯಲ್ಲಿ ನೀವು ಮತ್ತೊಮ್ಮೆ ಅಮೋಘ ಆಟ ಆಡಿದ್ದೀರಿ. ಗುರಿ ಬೆನ್ನಟ್ಟುವ ವಿಷಯ ಬಂದಾಗ ನನ್ನ ಕಣ್ಣೆದುರು ಬರುವುದು ಕೊಹ್ಲಿ ಮತ್ತು ಚೀತಾ ಮಾತ್ರ. ಶಹಬ್ಬಾಸ್‌ ವಿರಾಟ್‌’ ಎಂದು ಅಖ್ತರ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಕೊಹ್ಲಿಯ ಗರ್ಜನೆ ಮುಂದು ವರಿದಿದೆ. ಗುರಿ ಬೆನ್ನಟ್ಟುವಾಗ ಅವರು ಆಡುವ ರೀತಿ ಮನ ಸೆಳೆಯುವಂತಿರುತ್ತದೆ. ಅವರ ಆಟಕ್ಕೆ ಮಾರು ಹೋಗದವರಿಲ್ಲ’ ಎಂದು ಇಂಗ್ಲೆಂಡ್‌ನ ಹಿರಿಯ ಕ್ರಿಕೆಟಿಗ ಮೈಕಲ್‌ ವಾನ್‌ ಟ್ವೀಟ್‌ ಮಾಡಿದ್ದಾರೆ.

ಕಿಂಗ್ಸ್‌ಮೇಡ್‌ ಅಂಗಳದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳಿಂದ ಗೆದ್ದು 6 ಪಂದ್ಯಗಳ ಸರಣಿಯಲ್ಲಿ 1–0ರ ಮುನ್ನಡೆ ಗಳಿಸಿತ್ತು.

ಕೊಹ್ಲಿ 119 ಎಸೆತಗಳಲ್ಲಿ 112ರನ್‌ ಕಲೆಹಾಕಿದ್ದರು. ಇದರಲ್ಲಿ 10 ಬೌಂಡರಿಗಳು ಸೇರಿದ್ದವು. ವಿರಾಟ್‌ಗೆ ಅಜಿಂಕ್ಯ ರಹಾನೆ (79; 86ಎ, 5ಬೌಂ, 2ಸಿ) ಸೂಕ್ತ ಬೆಂಬಲ ನೀಡಿದ್ದರು. ಈ ಜೋಡಿ ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 189ರನ್‌ ಸೇರಿಸಿ ಅಭಿಮಾನಿಗಳ ಮನ ಗೆದ್ದಿತ್ತು.

ಭಾರತ ತಂಡ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಗೆದ್ದಿದ್ದು ಇದೇ ಮೊದಲು. 1992–93ರ ನಂತರ ಭಾರತಕ್ಕೆ ಸಿಕ್ಕ ಒಟ್ಟಾರೆ ಆರನೇ ಜಯ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.