ADVERTISEMENT

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ: ವಿನಯ್ ಬಳಗಕ್ಕೆ ಬರೋಡಾ ಸವಾಲು

ಕರ್ನಾಟಕದ ಮೊದಲ ಪಂದ್ಯ ಇಂದು

ಗಿರೀಶದೊಡ್ಡಮನಿ
Published 6 ಫೆಬ್ರುವರಿ 2018, 20:06 IST
Last Updated 6 ಫೆಬ್ರುವರಿ 2018, 20:06 IST
ಕರ್ನಾಟಕ ತಂಡದ ಮಯಂಕ್ ಅಗರವಾಲ್ (ಬಲ) ಮತ್ತು ಪ್ರಸಿದ್ಧ ಕೃಷ್ಣ ಮಂಗಳವಾರ ಅಭ್ಯಾಸ ನಡೆಸಿದರು  ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್
ಕರ್ನಾಟಕ ತಂಡದ ಮಯಂಕ್ ಅಗರವಾಲ್ (ಬಲ) ಮತ್ತು ಪ್ರಸಿದ್ಧ ಕೃಷ್ಣ ಮಂಗಳವಾರ ಅಭ್ಯಾಸ ನಡೆಸಿದರು ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್   

ಬೆಂಗಳೂರು: ಈ ಬಾರಿಯ ರಣಜಿ ಟೂರ್ನಿಯುದ್ದಕ್ಕೂ ಅಮೋಘ ಆಟ ವಾಡಿ ಸೆಮಿಫೈನಲ್‌ನಲ್ಲಿ ಮುಗ್ಗರಿ ಸಿದ್ದ ಕರ್ನಾಟಕ ತಂಡ ಈಗ ತನ್ನ ತವರಿನಲ್ಲಿಯೇ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಬೇಟೆಯಾಡಲು ಸಜ್ಜಾಗಿದೆ.

ಬೆಂಗಳೂರು ಹೊರವಲಯ ದಲ್ಲಿರುವ ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಬರೋಡಾ ತಂಡವನ್ನು ವಿನಯಕುಮಾರ್ ನಾಯಕತ್ವದ ಕರ್ನಾಟಕ ತಂಡವು ಎದುರಿಸಲಿದೆ. ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಕಣಕ್ಕಿಳಿಯಲಿದ್ದಾರೆ.

ರಣಜಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಮಯಂಕ್ ಅಗರವಾಲ್, ಉತ್ತಮವಾಗಿ ಆಡಿದ್ದ ಆರ್. ಸಮರ್ಥ್, ಫಾರ್ಮ್‌ನಲ್ಲಿರುವ ಕರುಣ್ ನಾಯರ್‌ ಅವರು ತಂಡದ ಬ್ಯಾಟಿಂಗ್‌ನ ಶಕ್ತಿಯಾಗಿದ್ದಾರೆ. ನಾಯಕ ವಿನಯ್ ಸ್ವಿಂಗ್ ದಾಳಿಯ ಮೂಲಕ ಎದುರಾಳಿ ಪಡೆಯನ್ನು ಕಟ್ಟಿಹಾಕಲು ತಂತ್ರಗಾರಿಕೆ ರೂಪಿಸಿಕೊಂಡಿದ್ದಾರೆ. ಅವರಿಗೆ ಜೊತೆ ನೀಡಲು ಅಭಿಮನ್ಯು ಮಿಥುನ್, ಪ್ರಸಿದ್ಧ ಕೃಷ್ಣ ಕೂಡ ಇದ್ದಾರೆ. ಕರ್ನಾಟಕ ತಂಡವು 2013–14 ಮತ್ತು 2015–16ರಲ್ಲಿ ಸತತ ಎರಡು ಬಾರಿ ಚಾಂಪಿಯನ್ ಆಗಿತ್ತು. ಆಗ ಮಿಂಚಿದ್ದ ರಾಬಿನ್ ಉತ್ತಪ್ಪ ಈಗ ಸೌರಾಷ್ಟ್ರ ತಂಡ ವನ್ನು ಪ್ರತಿನಿಧಿಸುತ್ತಿದ್ದಾರೆ. ಮನೀಷ್ ಪಾಂಡೆ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಆಡುತ್ತಿರುವ ಭಾರತ ತಂಡ ದಲ್ಲಿದ್ದಾರೆ.

ADVERTISEMENT

ಐಪಿಎಲ್‌ನಲ್ಲಿ ಉತ್ತಮ ಮೌಲ್ಯ ಪಡೆದಿರುವ ಆಫ್‌ಸ್ಪಿನ್ನರ್ ಕೆ. ಗೌತಮ್ ಮತ್ತು ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಪಂದ್ಯ ಗೆಲ್ಲಿಸಿಕೊಡಬಲ್ಲ ಸಮರ್ಥರು.

ತಂಡದ ಬ್ಯಾಟಿಂಗ್ ಬಲವು ಹತ್ತನೇ ವಿಕೆಟ್‌ವರೆಗೂ ಇದೆ.

ಆದರೆ ಬರೋಡಾ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಅನುಭವಿ ಆಲ್‌ರೌಂಡರ್ ಯೂಸುಫ್ ಪಠಾಣ್, ಐಪಿಎಲ್ ಟೂರ್ನಿಯ ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಆ ತಂಡದಲ್ಲಿದ್ದಾರೆ. ಆರಂಭಿಕ ಜೋಡಿ ಊರ್ವಿಲ್ ಪಟೇಲ್ ಮತ್ತು ಕೇದಾರ್ ದೇವಧರ್ ಈಚೆಗೆ ಮುಕ್ತಾಯವಾದ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದರು.

(ಕೆ.ಎಲ್. ರಾಹುಲ್)

ಮರಳಿದ ರಾಹುಲ್: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದ ಕೆ.ಎಲ್. ರಾಹುಲ್ ಕರ್ನಾಟಕ ತಂಡಕ್ಕೆ ಮರಳಿದ್ದಾರೆ. ಮಂಗಳ ವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸದಲ್ಲಿ ಅವರು ಹಾಜರಿದ್ದರು.

ಅವರು ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲಿ ಆಡುವ ಭಾರತ ತಂಡಕ್ಕೆ ಆಯ್ಕೆ ಆಗಿರಲಿಲ್ಲ.

*

ತಂಡಗಳು

ಕರ್ನಾಟಕ: ಆರ್. ವಿನಯಕುಮಾರ್ (ನಾಯಕ), ಆರ್. ಸಮರ್ಥ್, ಮಯಂಕ್ ಅಗರವಾಲ್, ಕರುಣ್ ನಾಯರ್, ಪವನ್ ದೇಶಪಾಂಡೆ, ಸಿ.ಎಂ. ಗೌತಮ್(ವಿಕೆಟ್ ಕೀಪರ್). ಅನಿರುದ್ಧ ಜೋಶಿ, ಸಿ.ಎಂ. ಗೌತಮ್, ಜೆ. ಸುಚಿತ್, ಕೆ. ಗೌತಮ್, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಪ್ರಸಿದ್ಧ್ ಕೃಷ್ಣ, ರಿತೇಶ್ ಭಟ್ಕಳ, ಟಿ. ಪ್ರದೀಪ್, ಪ್ರವೀಣ್ ದುಬೆ,  ಮುಖ್ಯ ಕೋಚ್: ಪಿ.ವಿ. ಶಶಿಕಾಂತ್, ಬೌಲಿಂಗ್ ಕೋಚ್:ಜಿ.ಕೆ. ಅನಿಲಕುಮಾರ್.

ಬರೋಡಾ: ದೀಪಕ್ ಹೂಡಾ (ನಾಯಕ), ಕೃಣಾಲ್ ಪಾಂಡ್ಯ, ಯೂಸುಫ್ ಪಠಾಣ್, ಕೇದಾರ್ ದೇವಧರ್, ಧ್ರುವ ಪಟೇಲ್, ಊರ್ವಿಲ್ ಪಟೇಲ್, ವಿಷ್ಣು ಸೋಳಂಕಿ, ವಿರಾಜ್ ಭೋಸ್ಲೆ(ವಿಕೆಟ್‌ಕೀಪರ್), ಅತೀಥ್ ಶೇಟ್, ರಿಷಿ ಅರೋತೆ, ಲುಕ್ಮನ್ ಮೆರಿವಾಲಾ,  ನಿನಾದ್ ರಾಥ್ವಾ, ಸ್ವಪ್ನಿಲ್ ಸಿಂಗ್, ಶೋಯಬ್ ತೈ, ಆದಿತ್ಯ ವಾಘಮೊಡೆ.

ಪಂದ್ಯ ರೆಫರಿ: ನಿತಿನ್ ಗೋಯಲ್,  ಅಂಪೈರ್: ನಿತಿನ್ ಪಂಡಿತ್, ಉಲ್ಲಾಸ ವಿಠಲ್ ರಾವ್ ಗಂಧೆ.

ಪಂದ್ಯ ಆರಂಭ: ಬೆಳಿಗ್ಗೆ 9.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.