ADVERTISEMENT

ಭಾರತ–ಬಾಂಗ್ಲಾದೇಶ ಮಹಿಳಾ ಟಿ20: ಸರಣಿ ಕೈವಶದತ್ತ ಹರ್ಮನ್ ಬಳಗದ ಚಿತ್ತ

ಪಿಟಿಐ
Published 10 ಜುಲೈ 2023, 13:36 IST
Last Updated 10 ಜುಲೈ 2023, 13:36 IST
ಸ್ಮೃತಿ ಮಂದಾನ ಮತ್ತು ಹರ್ಮನ್‌ಪ್ರೀತ್ ಕೌರ್  –ಪಿಟಿಐ ಚಿತ್ರ
ಸ್ಮೃತಿ ಮಂದಾನ ಮತ್ತು ಹರ್ಮನ್‌ಪ್ರೀತ್ ಕೌರ್  –ಪಿಟಿಐ ಚಿತ್ರ   

ಮೀರ್‌ಪುರ: ಉತ್ತಮ ಲಯದಲ್ಲಿರುವ ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಮಂಗಳವಾರ ಇಲ್ಲಿ ನಡೆಯಲಿರುವ ಬಾಂಗ್ಲಾದೇಶ ಎದುರಿನ ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿರುವ ಭಾರತ ತಂಡವು ಆತ್ಮವಿಶ್ವಾಸದಲ್ಲಿದೆ.  ಹರ್ಮನ್‌ಪ್ರೀತ್ ಕೌರ್ ಅವರು 35 ಎಸೆತಗಳಲ್ಲಿ 54 ರನ್‌ ಗಳಿಸಿದ್ದರು. ಅದರೊಂದಿಗೆ ಭಾರತ ತಂಡಕ್ಕೆ ಸುಲಭ ಜಯದ ಕಾಣಿಕೆ ನೀಡಿದ್ದರು.

ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ ಕೂಡ ಉತ್ತಮ ಲಯದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಬೌಲರ್‌ಗಳಾದ ಅನುಷಾ ಬರೆಡಡಿ ಮತ್ತು ಮಿನು ಮಣಿ ಕೂಡ ಭರವಸೆ ಮೂಡಿಸಿದ್ದಾರೆ. ಅನುಭವಿ ಆಫ್‌ಸ್ಪಿನ್ನರ್ ದೀಪ್ತಿ ಶರ್ಮಾ ಎದುರಾಳಿ ಬ್ಯಾಟರ್‌ಗಳಿಗೆ ಸವಾಲೊಡ್ಡುವ ಸಮರ್ಥರು. ಕೈಬೆರಳಿನ ಗಾಯದ ನೋವಿನಲ್ಲಿ ಆಡಿದ್ದ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ ಉತ್ತಮ ಲಯದಲ್ಲಿ ಇಲ್ಲ. ಅವರು ಕಳೆದ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದರು. ಮಧ್ಯಮವೇಗಿಗಳ ಮುಂದೆ ಅವರ ಪಾದಚಲನೆಯೂ ಉತ್ತಮವಾಗಿಲ್ಲ.

ADVERTISEMENT

57 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ 20 ವರ್ಷದ ಶಫಾಲಿ ಅವರು ಲಯಕ್ಕೆ ಮರಳುವ ಭರವಸೆ ಇದೆ.

ತಂಡದ ಬೌಲಿಂಗ್ ಮತ್ತು ಬ್ಯಾಟಿಂಗ್‌ ವಿಭಾಗಗಳಲ್ಲಿರುವ ಲೋಪಗಳನ್ನು  ಸರಿಪಡಿಸಲು ಮುಖ್ಯ ಕೋಚ್ ಅಮೋಲ್ ಮುಜುಂದಾರ್ ಮಾಡಿರುವ ಪ್ರಯತ್ನಗಳ ಫಲ ಕಳೆದ ಪಂದ್ಯದಲ್ಲಿ ಕಂಡಿದೆ.

ಆತಿಥೇಯ ಬಾಂಗ್ಲಾದೇಶ ತಂಡಕ್ಕೆ ಸರಣಿ ಜಯದ ಕನಸು ಜೀವಂತವಾಗುಳಿಯಬೇಕಾದರೆ ಈ ಪಂದ್ಯದಲ್ಲಿ ಜಯಿಸಲೇಬೇಕು. ನಾಯಕಿ ನಿಜಾರ್ ಸುಲ್ತಾನಾ, ಶೋಭನಾ ಮೊಸ್ತರಿ, ಸುಲ್ತಾನ ಖಾತೂನ್ ಮತ್ತು ಮರೂಫಾ ಅಕ್ತರ್ ಅವರು ಉತ್ತಮ ಲಯದಲ್ಲಿದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ನ 1.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.