ADVERTISEMENT

37 ಸಿಕ್ಸ್, 349 ರನ್: ಟಿ20 ಕ್ರಿಕೆಟ್‌ನ‌ಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ಬರೋಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2024, 5:55 IST
Last Updated 6 ಡಿಸೆಂಬರ್ 2024, 5:55 IST
   

ಇಂದೋರ್‌: ಸೈಯದ್‌ ಮುಷ್ತಾಕ್‌ ಅಲಿ ಕ್ರಿಕೆಟ್‌ ಟೂರ್ನಿಯ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ರನ್‌ ಹೊಳೆ ಹರಿಸಿದ ಬರೋಡ ತಂಡ, ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ದಾಖಲೆ ಬರೆಯಿತು.

ನಗರದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಕೃಣಾಲ್‌ ಪಾಂಡ್ಯ ಪಡೆ, ಸಿಕ್ಕಿಂ ಬೌಲರ್‌ಗಳ ಮೇಲೆ ಸವಾರಿ ಮಾಡಿತು. ಇನಿಂಗ್ಸ್‌ ಆರಂಭಿಸಿದ ಶಾಶ್ವತ್‌ ರಾವತ್ (16 ಎಸೆತ, 43 ರನ್) ಮತ್ತು ಅಭಿಮನ್ಯು ಸಿಂಗ್‌ (17 ಎಸೆತ, 53 ರನ್‌), ಮೊದಲ ಓವರ್‌ನಿಂದಲೇ ಬೀಸಾಟವಾಡಿದರು.

ಇವರಿಬ್ಬರು ಮೊದಲ ವಿಕೆಟ್‌ಗೆ ಕೇವಲ 5 ಓವರ್‌ಗಳಲ್ಲಿ 92 ರನ್‌ ಗಳಿಸಿದರು. 6ನೇ ಓವರ್‌ನ ಮೊದಲ ಎಸೆತದಲ್ಲಿ ಸಿಂಗ್‌ ಮತ್ತು ಕೊನೇ ಎಸೆತದಲ್ಲಿ ರಾವತ್ ಔಟಾದರು. ನಂತರ ಭಾನು ಪನಿಯಾ ಆಟ ರಂಗೇರಿತು. ಅವರ ಕೇವಲ 51 ಎಸೆತಗಳಲ್ಲಿ 15 ಸಿಕ್ಸ್‌ ಮತ್ತು 5 ಫೋರ್‌ ಸಹಿತ ಅಜೇಯ 134 ರನ್‌ ಚಚ್ಚಿದರು. ಅವರೊಂದಿಗೆ ಇನ್ನೊಂದು ತುದಿಯಲ್ಲಿ ಗುಡುಗಿದ ಶಿವಾಲಿಕ್‌ ಶರ್ಮಾ (17 ಎಸೆತ, 55 ರನ್) ಮತ್ತು ವಿಕ್ರಮ್‌ ಸೋಳಂಕಿ (16 ಎಸೆತ, 50 ರನ್) ಸಹ ವೇಗದ ಅರ್ಧಶತಕ ಗಳಿಸಿಕೊಂಡರು.

ADVERTISEMENT

ಇವರ ಆಟದ ಬಲದಿಂದ ಕೃಣಾಲ್‌ ಪಾಂಡ್ಯ ಬಳಗ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ ಬರೋಬ್ಬರಿ 349 ರನ್‌ ಕೆಲಹಾಕಿತು. ಇದರೊಂದಿಗೆ ಸೈಯದ್‌ ಮುಷ್ತಾಕ್‌ ಅಲಿ ಕ್ರಿಕೆಟ್‌ ಟೂರ್ನಿಯಲ್ಲಿ 300ಕ್ಕಿಂತ ಅಧಿಕ ರನ್‌ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಗೆ ಪಾತ್ರವಾಯಿತು. ಅಷ್ಟೇ ಅಲ್ಲ, ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಕಲೆಹಾಕಿದ ತಂಡ ಎಂಬ ದಾಖಲೆಯನ್ನೂ ನಿರ್ಮಿಸಿತು.

ಈ ಪಂದ್ಯದಲ್ಲಿ ಬರೋಡ ಬ್ಯಾಟರ್‌ಗಳು ಒಟ್ಟು 37 ಸಿಕ್ಸರ್‌ ಸಿಡಿಸಿದರು. ಟಿ20 ಕ್ರಿಕೆಟ್‌ನ ಪಂದ್ಯವೊಂದರಲ್ಲಿ ಯಾವುದೇ ತಂಡ ಈವರೆಗೆ ಇಷ್ಟು ಸಿಕ್ಸರ್‌ ಬಾರಿಸಿಲ್ಲ. ಹಾಗಾಗಿ, ಇದೂ ದಾಖಲೆಯಾಯಿತು.

ಜಿಂಬಾಬ್ವೆ ತಂಡ ಇದೇ ವರ್ಷ ಅಕ್ಟೋಬರ್‌ನಲ್ಲಿ ಜಾಂಬಿಯಾ ವಿರುದ್ಧ 344 ರನ್‌ ಗಳಿಸಿದ್ದದ್ದು ಈವರೆಗೆ ಗರಿಷ್ಠ ಮೊತ್ತ ಎನಿಸಿತ್ತು.

ಗರಿಷ್ಠ ರನ್‌ ಅಂತರದ ಜಯ

ಬರೋಡ ನೀಡಿದ ಬೆಟ್ಟದಂತಹ ಗುರಿ ಬೆನ್ನತ್ತಿದ ಸಿಕ್ಕಿಂ ಪಡೆ, 86 ರನ್ ಗಳಿಸುವಷ್ಟರಲ್ಲೇ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರೊಂದಿಗೆ, ಬರೋಬ್ಬರಿ 263 ರನ್‌ಗಳ ಭಾರಿ ಅಂತರದ ಸೋಲೊಪ್ಪಿಕೊಂಡಿತು.

ಬರೋಡ ಪಡೆ ಸಾಧಿಸಿದ ಈ ಜಯ, ಟಿ20 ಕ್ರಿಕೆಟ್‌ನಲ್ಲಿ ರನ್‌ ಅಂತರದಲ್ಲಿ 4ನೇ ಅತಿದೊಡ್ಡ ಗೆಲುವಾಗಿದೆ.

ಅತಿಹೆಚ್ಚು ರನ್ ಕಲೆಹಾಕಿದ ತಂಡಗಳು

  • ಸಿಕ್ಕಿಂ ವಿರುದ್ಧ ಬರೋಡ 349/5 – 2024

  • ಜಾಂಬಿಯಾ ವಿರುದ್ಧ ಜಿಂಬಾಬ್ವೆ 344/4 – 2024

  • ಮಂಗೋಲಿಯಾ ವಿರುದ್ಧ ನೇಪಾಳ 314/3 – 2023

  • ಬಾಂಗ್ಲಾದೇಶ ವಿರುದ್ಧ ಭಾರತ 297/6– 2024

ರನ್‌ ಅಂತರದಲ್ಲಿ ದೊಡ್ಡ ಜಯ

  • ಜಾಂಬಿಯಾ ಎದುರು ಜಿಂಬಾಬ್ವೆಗೆ 290 ರನ್‌ ಜಯ – 2024

  • ಮಂಗೋಲಿಯಾ ಎದುರು ನೇಪಾಳಕ್ಕೆ 273 ರನ್‌ ಜಯ – 2023

  • ಐವರಿ ಕೋಸ್ಟ್‌ ಎದುರು ನೈಜೀರಿಯಾಕ್ಕೆ 264 ರನ್ ಜಯ – 2024

  • ಟರ್ಕಿ ವಿರುದ್ಧ ಜೆಕ್‌ ಗಣರಾಜ್ಯಕ್ಕೆ 257 ರನ್‌ ಜಯ – 2019

ಅತಿಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳು

  • ಸಿಕ್ಕಿಂ ಎದುರು ಬರೋಡ 37 ಸಿಕ್ಸ್ – 2024

  • ಜಾಂಬಿಯಾ ಎದುರು ಜಿಂಬಾಬ್ವೆ 27 ಸಿಕ್ಸ್‌ – 2024

  • ಮಂಗೋಲಿಯಾ ಎದುರು ನೇಪಾಳ 26 ಸಿಕ್ಸ್‌ – 2023

  • ಕೋಲ್ಕತ್ತ ನೈಟ್‌ರೈಡರ್ಸ್‌ ಎದುರು ಪಂಜಾಬ್‌ ಕಿಂಗ್ಸ್‌ 24 ಸಿಕ್ಸ್‌ – 2024

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.