
ನ್ಯೂಜಿಲೆಂಡ್ ತಂಡ (ಸಂಗ್ರಹ ಚಿತ್ರ)
ಕ್ರೈಸ್ಟ್‌ಚರ್ಚ್: ಎಡ ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ನ್ಯೂಜಿಲೆಂಡ್ ವೇಗಿ ಆಡಮ್ ಮಿಲ್ನೆ ಅವರು ಮುಂಬರುವ ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದು, ಅವರ ಜಾಗಕ್ಕೆ ಕೈಲ್ ಜೇಮಿಸನ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಳೆದ ಭಾನುವಾರ ನಡೆದ SA20 ಟೂರ್ನಿಯ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಮತ್ತು ಎಂಐ ಕೇಪ್ ಟೌನ್ ತಂಡಗಳ ನಡುವಿನ ಪಂದ್ಯದ ಮೊದಲ ಓವರ್‌ನಲ್ಲೆ ಮಿಲ್ನೆ ಗಾಯಗೊಂಡಿದ್ದರು. ಸ್ಕಾನಿಂಗ್ ಒಳಗಾದ ಬಳಿಕ ಅವರಿಗೆ ಹೆಚ್ಚುವರಿ ವಿಶ್ರಾಂತಿಯ ಅಗತ್ಯವಿದೆ ಎಂಬುದು ತಿಳಿದುಬಂದಿದೆ.
ಸದ್ಯ ನಡೆಯುತ್ತಿರುವ ಭಾರತ ವಿರುದ್ಧದ ಬಿಳಿ ಚೆಂಡಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ತಂಡದ ಭಾಗವಾಗಿರುವ ಕೈಲ್ ಜೇಮೀಸನ್ ಅವರನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಲಾಗಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಭಾರತ ವಿರುದ್ಧ ನಡೆಯುತ್ತಿರುವ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಕಿವೀಸ್ ವೇಗದ ದಾಳಿಯನ್ನು ಮುನ್ನಡೆಸಿರುವ ಜೇಮೀಸನ್ ಅವರು ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ನ್ಯೂಜಿಲೆಂಡ್ ತಂಡದ ಮುಖ್ಯ ಕೋಚ್ ರಾಬ್ ವಾಲ್ಟರ್ ತಿಳಿಸಿದ್ದಾರೆ.
‘ಕೈಲ್ ಭಾರತದಲ್ಲಿ ನಮ್ಮೊಂದಿಗಿರುವುದು ತುಂಬಾ ಸಂತೋಷದ ವಿಚಾರ. ಅವರು ನಮ್ಮ ವೇಗದ ಬೌಲಿಂಗ್ ವಿಭಾಗದ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ಈ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ’ ಎಂದು ಮುಖ್ಯ ತರಬೇತುದಾರರು ಹೇಳಿದ್ದಾರೆ.
‘ಅವರು ಉತ್ತಮ ಕೌಶಲ್ಯ ಮತ್ತು ಅನುಭವ ಹೊಂದಿರುವ ಆಟಗಾರ, ಕಠಿಣ ಪರಿಶ್ರಮ ಅವರನ್ನು ಉತ್ತಮ ಸ್ಥಾನದಲ್ಲಿರಿಸಿದೆ’ ಎಂದು ವಾಲ್ಟರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.