ಕಾರ್ಡಿಫ್ (ಎಎಫ್‌ಪಿ): ಶಿಸ್ತಿನ ಬೌಲಿಂಗ್ ದಾಳಿ ಸಂಘಟಿಸಿದ ಶ್ರೀಲಂಕಾ ತಂಡ ಅಫ್ಗಾನಿಸ್ತಾನ ಎದುರಿನ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು.
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಅಫ್ಗಾನಿಸ್ತಾನ ನಿರೀಕ್ಷಿತ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಲಾಗದೆ ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾರ 201 ರನ್ ಗಳಿಸಿತ್ತು. ಮಳೆ ಕಾಡಿದ್ದರಿಂದ ಒಂದು ತಾಸಿಗೂ ಅಧಿಕ ಸಮಯ ಪಂದ್ಯಕ್ಕೆ ಅಡ್ಡಿಯಾಯಿತು. ಅಫ್ಗಾನ್ ತಂಡದ ಗೆಲುವಿಗೆ 41 ಓವರ್‌ಗಳಲ್ಲಿ 187 ರನ್‌ಗಳ ಪರಿಷ್ಕೃತ ಗುರಿ ನೀಡಲಾಗಿತ್ತು. ತಂಡ 152 ರನ್‌ಗಳಿಗೆ ಪತನ ಕಂಡಿತು.
ಚೇತೋಹಾರಿ ಆಟವಾಡಿದ ಅಫ್ಗಾನಿಸ್ತಾನ ತಂಡವು ಕ್ರಿಕೆಟ್‌ಪ್ರೇಮಿಗಳ ಮನಗೆದ್ದಿತು.
ಅಫ್ಗಾನ್ ತಂಡದ ಆಫ್‌ಸ್ಪಿನ್ನರ್ ಮೊಹ ಮ್ಮದ್ ನಬಿ (30ಕ್ಕೆ4) ಮಿಂಚಿದರು.
ಶ್ರೀಲಂಕಾ ತಂಡವು 33 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 189 ರನ್ ಗಳಿಸಿದ್ದ ಸಂದರ್ಭದಲ್ಲಿ ಮಳೆ ಸುರಿಯಲಾರಂಭಿಸಿತು. ಮಳೆ ನಿಂತ ಮೇಲೆ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 41 ಓವರ್‌ಗಳಿಗೆ ಇನಿಂಗ್ಸ್ ನಿಗದಿ ಪಡಿಸಲಾಯಿತು. ಶ್ರೀಲಂಕಾ ಬ್ಯಾಟಿಂಗ್ ಮುಂದುವರಿಸಿತು. ಆದರೆ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ.
ಟಾಸ್ ಗೆದ್ದ ಅಫ್ಗಾನಿಸ್ತಾನ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಲಂಕಾ ತಂಡದ ನಾಯಕ ದಿಮುತ ಕರುಣಾರತ್ನೆ ಮತ್ತು ಕುಶಾಲ ಪೆರೆರಾ ಉತ್ತಮ ಆರಂಭ ನೀಡಿದರು. ಅಫ್ಗಾನ್ ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದ ಅವರು ರನ್ ಗಳಿಕೆಗೆ ಒತ್ತು ನೀಡಿದರು. ಮಧ್ಯಮವೇಗಿಗಳು ಮತ್ತು ಸ್ಪಿನ್ನರ್‌ಗಳ ಎಸೆತಗಳನ್ನು ಬೌಂಡರಿಗೆ ಕಳಿಸುವಲ್ಲಿ ಸಫಲರಾದರು. ಇಬ್ಬರೂ ಸೇರಿ ಮೊದಲ ವಿಕೆಟ್ ಜೊತೆಯಾಟದಲ್ಲಿ 92 ರನ್‌ಗಳನ್ನು ಸೇರಿಸಿದರು. 14ನೇ ಓವರ್ ಬೌಲಿಂಗ್ ಮಾಡಿದ ಮೊಹಮ್ಮದ್ ನಬಿ ತಮ್ಮ ಖಾತೆ ತೆರೆದರು. ಕರುಣಾರತ್ನೆ ಅವರ ವಿಕೆಟ್ ಗಳಿಸಿದ ಅವರು ಕೇಕೆ ಹಾಕಿದರು.
ಆದರೆ ಇನ್ನೊಂದು ಬದಿಯಲ್ಲಿ ಕುಶಾಲ ಪರೆರಾ ಮಾತ್ರ ತಾಳ್ಮೆಯಿಂದ ಆಡುತ್ತಿದ್ದರು. ಅವರೊಡಗೂಡಿದ ತಿರಿಮಾನ್ನೆ (25 ರನ್) ಕೂಡ ಒಂದಷ್ಟು ರನ್‌ಗಳ ಕಾಣಿಕೆ ನೀಡಿದರು. ಆದರೆ, ತಿರಿಮಾನ್ನೆಗೂ ನಬಿಯೇ ಪೆವಿಲಿಯನ್ ದಾರಿ ತೋರಿಸಿದರು. ಮುಂದಿನ ಹಂತದಲ್ಲಿ ಬ್ಯಾಟಿಂಗ್‌ಗೆ ಬಂದವರು ಯಾರೂ ಎರಡಂಕಿ ಮೊತ್ತ ಗಳಿಸಲಿಲ್ಲ. ನಬಿ ಮತ್ತು ರಶೀದ್ ಖಾನ್ (17ಕ್ಕೆ2) ಅವರಿಬ್ಬರ ಸ್ಪಿನ್ ದಾಳಿಗೆ ಲಂಕಾ ಬ್ಯಾಟಿಂಗ್ ಕುಸಿಯಿತು.
ಅಫ್ಗಾನ್ ತಂಡದ ಆಟಗಾರರು ಪರಸ್ಪರ ನಗುತ್ತ, ಚರ್ಚಿಸುತ್ತ ಆಡಿದ್ದು ಗಮನ ಸೆಳೆಯಿತು. ಫೀಲ್ಡರ್‌ಗಳು ಕ್ಯಾಚ್ ಬಿಟ್ಟಾಗ ಮತ್ತು ಪಡೆದಾಗ ಪರಸ್ಪರ ಸಂತೈಸುತ್ತ, ಅಭಿನಂದಿಸುತ್ತ ವಿಶ್ವಾಸ ಹೆಚ್ಚಿಸುವಂತೆ ನಡೆದುಕೊಂಡರು. ಇದರಿಂದಾಗಿ ಇನಿಂಗ್ಸ್‌ನುದ್ದಕ್ಕೂ ಚೇತೋಹಾರಿ ವಾತಾವರಣ ನೆಲೆಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.