ADVERTISEMENT

ಮುಜೀಬ್‌ ಮ್ಯಾಜಿಕ್‌; ಅಫ್ಘಾನಿಸ್ತಾನ ಜಯಭೇರಿ

ಗುರ್ಬಾಜ್–ನಜೀಬುಲ್ಲಾ ಜದ್ರಾನ್ ಭರ್ಜರಿ ಬ್ಯಾಟಿಂಗ್‌; ರಶೀದ್ ಖಾನ್‌ಗೆ ನಾಲ್ಕು ವಿಕೆಟ್‌

ಏಜೆನ್ಸೀಸ್
Published 25 ಅಕ್ಟೋಬರ್ 2021, 20:11 IST
Last Updated 25 ಅಕ್ಟೋಬರ್ 2021, 20:11 IST
ಅರ್ಧಶತಕ ಗಳಿಸಿದ ನಜೀಬುಲ್ಲಾ ಜದ್ರಾನ್ ಸಂಭ್ರಮ –ಪಿಟಿಐ ಚಿತ್ರ
ಅರ್ಧಶತಕ ಗಳಿಸಿದ ನಜೀಬುಲ್ಲಾ ಜದ್ರಾನ್ ಸಂಭ್ರಮ –ಪಿಟಿಐ ಚಿತ್ರ   

ಶಾರ್ಜಾ: ಚುಟುಕು ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ಮುಜೀಬ್ ಉರ್ ರಹಮಾನ್ ಅವರ ಅಮೋಘ ದಾಳಿಯ ನೆರವಿನಿಂದ ಅ‍ಫ್ಗಾನಿಸ್ತಾನ ತಂಡ ಸ್ಕಾಟ್ಲೆಂಡ್ ವಿರುದ್ಧ 130 ರನ್‌ಗಳ ಜಯ ಸಾಧಿಸಿತು.

ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಎರಡನೇ ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಮುಂದಿಟ್ಟ 191 ರನ್‌ಗಳ ಗೆಲುವಿನ ಗುರಿಬೆನ್ನತ್ತಿದ ಸ್ಕಾಟ್ಲೆಂಡ್ 60 ರನ್‌ಗಳಿಗೆ ಆಲೌಟಾಯಿತು. 20 ರನ್‌ಗಳಿಗೆ ಐದು ವಿಕೆಟ್ ಉರುಳಿಸಿದ ಮುಜೀಬ್ ಮತ್ತು ಒಂಬತ್ತಕ್ಕೆ ನಾಲ್ಕು ವಿಕೆಟ್ ಕಬಳಿಸಿದ ರಶೀದ್ ಖಾನ್10.2 ಓವರ್‌ಗಳಲ್ಲಿ ಸ್ಕಾಟ್ಲೆಂಡ್ ಇನಿಂಗ್ಸ್‌ಗೆ ಅಂತ್ಯ ಹಾಡಿದರು. ಐದು ಮಂದಿ ಬ್ಯಾಟರ್‌ಗಳು ಶೂನ್ಯಕ್ಕೆ ಔಟಾದರೆ, ಮೂವರು ಮಾತ್ರ ಎರಡಂಕಿ ಮೊತ್ತ ದಾಟಿದರು.

ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಸೇರಿದಂತೆ ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಉರುಳಿಸಿದ ಮುಜೀಬ್ ತಂಡಕ್ಕೆ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಅಂತರದ ಜಯದ ಕೊಡುಗೆ ನೀಡಿದರು.

ADVERTISEMENT

ಅಫ್ಘಾನ್ ಬ್ಯಾಟರ್‌ಗಳ ಅಬ್ಬರ

ಟಾಸ್ ಗೆದ್ದ ಅಫ್ಘಾನಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭಿಕ ಜೋಡಿ ಹಜರತ್ ಉಲ್ಲಾ ಜಜೈ ಮತ್ತು ಮೊಹಮ್ಮದ್ ಶೆಹಜಾದ್ ಅವರ ಅಬ್ಬರದ ಬೆನ್ನಲ್ಲೇ ಮಿಂಚಿದ ರಹಮಾನುಲ್ಲ ಗುರ್ಬಾಜ್ ಮತ್ತು ನಜೀಬುಲ್ಲಾ ಜದ್ರಾನ್ ಅವರ ಅಮೋಘ ಬ್ಯಾಟಿಂಗ್ ಬಲದಿಂದಾಗಿ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 190 ರನ್‌ ಕಲೆ ಹಾಕಿತು.

ಆರಂಭದ ಕೆಲವು ಎಸೆತಗಳನ್ನು ತಾಳ್ಮೆಯಿಂದ ಎದುರಿಸಿದ ಹಜರತ್ ಉಲ್ಲಾ ಜಜೈ ಮತ್ತು ಮೊಹಮ್ಮದ್ ಶೆಹಜಾದ್ ನಂತರ ಬೌಂಡರಿಗಳನ್ನು ಗಳಿಸಲು ಶುರು ಮಾಡಿದರು. 35 ಎಸೆತಗಳಲ್ಲಿ 54 ರನ್ ಕಲೆ ಹಾಕಿದರು. ಷರೀಫ್ ಎಸೆತದಲ್ಲಿ ಮೊಹಮ್ಮದ್ ಶೆಹಜಾದ್ ಔಟಾದರು. ಈ ಸಂದರ್ಭದಲ್ಲಿ ಜಜೈ ಜೊತೆಗೂಡಿದ ಗುರ್ಬಜ್ ರನ್‌ ಗಳಿಕೆಯ ವೇಗ ಹೆಚ್ಚಿಸಿದರು.

30 ಎಸೆತಗಳಲ್ಲಿ ತಲಾ ಮೂರು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿದ ಜಜೈ 44 ರನ್ ಗಳಿಸಿ ಔಟಾದರು. ನಂತರ ಗುರ್ಬಾಜ್ ಮತ್ತು ಜದ್ರಾನ್ ಜೋಡಿ ಸ್ಫೋಟಕ ಬ್ಯಾಟಿಂಗ್ ಮೂಲಕ ಬೌಲರ್‌ಗಳನ್ನು ಕಂಗೆಡಿದರು. ಮೂರನೇ ವಿಕೆಟ್‌ಗೆ ಇವರಿಬ್ಬರು 87 ರನ್ ಕಲೆ ಹಾಕಿದರು. ಕೊನೆಯ ಓವರ್‌ಗಳಲ್ಲಿ ಜದ್ರಾನ್ ಮತ್ತಷ್ಟು ಆಕ್ರಮಣಕಾರಿಯಾದರು. ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಅವರ ಬ್ಯಾಟಿನಿಂದ ಹರಿದು ಬಂದವು. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಜದ್ರಾನ್ ಔಟಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.