ADVERTISEMENT

ಟಿ20 ವಿಶ್ವಕಪ್: ಅಫ್ಘಾನಿಸ್ತಾನಕ್ಕೆ ಶುಭಾರಂಭದ ನಿರೀಕ್ಷೆ

ಪ್ರಕ್ಷುಬ್ಧ ಪರಿಸ್ಥಿಯಿಂದ ಎದ್ದು ಬಂದ ಮೊಹಮ್ಮದ್ ನಬಿ ಬಳಗಕ್ಕೆ ಸ್ಕಾಟ್ಲೆಂಡ್ ತಂಡದ ಸವಾಲು

ಪಿಟಿಐ
Published 24 ಅಕ್ಟೋಬರ್ 2021, 11:53 IST
Last Updated 24 ಅಕ್ಟೋಬರ್ 2021, 11:53 IST
ಸ್ಕಾಟ್ಲೆಂಡ್ ನಾಯಕ ಕೈಲ್ ಕೊಯೆಟ್ಜರ್ –ಎಎಫ್‌ಪಿ ಚಿತ್ರ
ಸ್ಕಾಟ್ಲೆಂಡ್ ನಾಯಕ ಕೈಲ್ ಕೊಯೆಟ್ಜರ್ –ಎಎಫ್‌ಪಿ ಚಿತ್ರ   

ಶಾರ್ಜಾ: ತಾಲಿಬಾನ್ ಆಡಳಿತದ ಹಿನ್ನೆಲೆಯಲ್ಲಿ ದೇಶದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿಯ ನಡುವಿನಿಂದ ಎದ್ದು ಬಂದಿರುವ ಅಫ್ಗಾನಿಸ್ತಾನ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದೆ. ಸೋಮವಾರ ನಡೆಯಲಿರುವ ಎರಡನೇ ಗುಂಪಿನ ಪಂದ್ಯದಲ್ಲಿ ಮೊಹಮ್ಮದ್ ನಬಿ ಬಳಗ ಸ್ಕಾಟ್ಲೆಂಡ್ ವಿರುದ್ಧ ಸೆಣಸಲಿದೆ.

ಆಗಸ್ಟ್‌ನಲ್ಲಿ ದಿಢೀರ್ ಉಂಟಾದ ಬೆಳವಣಿಗೆಯಲ್ಲಿ ಅಫ್ಗಾನಿಸ್ತಾನದ ಆಡಳಿತವನ್ನು ತಾಲಿಬಾನ್ ವಹಿಸಿಕೊಂಡಿತ್ತು. ಇದರ ನಂತರ ತಂಡಕ್ಕೆ ಸಮರ್ಪಕವಾಗಿ ಅಭ್ಯಾಸ ಮಾಡಲು ಆಗಲಿಲ್ಲ. ವಿಶ್ವಕಪ್‌ಗೆ ಸಿದ್ಧತೆ ಆರಂಭವಾಗುತ್ತಿದ್ದಂತೆ ತಂಡದ ಒಳಗೆಯೂ ಗೊಂದಲ ಉಂಟಾಗಿತ್ತು. ತಂಡದ ಆಯ್ಕೆಯಲ್ಲಿ ಅನುಭವಿ ಸ್ಪಿನ್ನರ್ ರಶೀದ್ ಖಾನ್ ಅಸಮಾಧಾನಗೊಂಡಿದ್ದರು.

ಈ ಬೆಳವಣಿಗೆಗಳ ನಂತರವೂ ತಂಡದ ಸಾಮರ್ಥ್ಯ ಕುಗ್ಗಿಲ್ಲ ಎಂಬುದು ಅಭ್ಯಾಸ ಪಂದ್ಯಗಳಲ್ಲಿ ಸಾಬೀತಾಗಿತ್ತು. ಹಾಲಿ ಚಾಂಪಿಯನ್‌ ವೆಸ್ಟ್ ಇಂಡೀಸ್ ವಿರುದ್ಧ ತಂಡ ಭರ್ಜರಿ ಜಯ ಸಾಧಿಸಿತ್ತು. ಅದೇ ಲಯದಲ್ಲಿ ಆಡಲು ಈಗ ಸಜ್ಜಾಗಿದೆ. ಹಜರತ್ ಉಲ್ಲಾ ಜಜಾಯ್, ಮೊಹಮ್ಮದ್ ಶೆಹಜಾದ್, ನಜೀಬುಲ್ಲಾ ಜದ್ರಾನ್ ಮತ್ತು ನಾಯಕ ಮೊಹಮ್ಮದ್ ನಬಿ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದು ರಶೀದ್ ಖಾನ್, ಮುಜೀಬ್ ಜದ್ರಾನ್ ಅವರೊಂದಿಗೆ ನಬಿ ಕೂಡ ಬೌಲಿಂಗ್‌ನಲ್ಲಿ ಮಿಂಚಬಲ್ಲರು.

ADVERTISEMENT

ಸ್ಕಾಟ್ಲೆಂಡ್ ತಂಡ ಮೊದಲ ಸುತ್ತಿನ ಪಂದ್ಯಗಳಲ್ಲಿ ಅಮೋಘ ಸಾಧನೆ ಮಾಡಿ ಸೂಪರ್ 12ರಲ್ಲಿ ಸ್ಥಾನ ಗಳಿಸಿದೆ. ಬ್ರಾಡ್ಲಿ ವ್ಹೀಲ್, ಜೋಶ್‌ ಡೇವಿ, ಮಾರ್ಕ್ ವ್ಯಾಟ್‌ ಮುಂತಾದವರು ತಂಡಕ್ಕೆ ಬಲ ತುಂಬಿದ್ದಾರೆ.

ತಂಡಗಳು:

ಅಫ್ಗಾನಿಸ್ತಾನ: ರಶೀದ್ ಖಾನ್‌, ರಹಮಾನುಲ್ಲ ಗುರ್ಬಜ್, ರಹಮತ್ ಉಲ್ಲ ಜಜಾಯ್, ಉಸ್ಮಾನ್ ಘನಿ, ಅಸ್ಗರ್ ಅಫ್ಗಾನ್, ಮೊಹಮ್ಮದ್ ನಬಿ (ನಾಯಕ), ನಜೀಬುಲ್ಲ ಜದ್ರಾನ್‌, ಹಸ್ಮತ್ ಉಲ್ಲಾ ಶಾಹಿದಿ, ಮೊಹಮ್ಮದ್ ಶಹಜಾದ್, ಮುಜೀಬ್ ಉರ್ ಹರಮಾನ್‌, ಕರೀಂ ಜನ್ನತ್‌, ಗುಲ್ಬದಿನ್ ನಯೀಬ್‌, ನವೀನ್ ಉಲ್ ಹಕ್‌, ಹಮೀದ್ ಹಸನ್‌, ಫರೀದ್ ಅಹಮ್ಮದ್‌,

ಸ್ಕಾಟ್ಲೆಂಡ್‌:ಕೈಲ್ ಕೊಯೆಟ್ಜರ್‌ (ನಾಯಕ), ರಿಚಿ ಬೆರಿಂಗ್ಟನ್‌, ಡೈಲಾನ್ ಬಜ್‌, ಮ್ಯಾಥ್ಯೂ ಕ್ರಾಸ್, ಜೋಶ್ ಡೇವಿ, ಅಲಸ್ಡೇರ್ ಇವಾನ್ಸ್‌, ಕ್ರಿಸ್ ಗ್ರೀವ್ಸ್‌, ಮೈಕೆಲ್ ಲೀಸ್ಕ್‌, ಕಲಂ ಮೆಕ್‌ಲೀಡ್‌, ಜಾರ್ಜ್ ಮುನ್ಸಿ, ಸಫಿಯಾನ್ ಷರೀಫ್‌, ಹಂಝ ತಾಹಿರ್‌, ಕ್ರೇಗ್ ವಲೇಸ್‌, ಮಾರ್ಕ್‌ ವ್ಯಾಟ್‌, ಬ್ರಾಡ್ಲಿ ವ್ಹೀಲ್‌.

ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.