ಅಫ್ಗಾನ್ ಕ್ರಿಕೆಟ್ ತಂಡ
– ಕಡತ ಚಿತ್ರ (ಪಿಟಿಐ)
ಕಾಬೂಲ್: ಪಾಕಿಸ್ತಾನ ಹಾಗೂ ಅಫ್ಗನ್ ನಡುವೆ ಸಂಘರ್ಷ ಮುಂದುವರೆದಿದ್ದು ಪಾಕ್ ನಡೆಸಿದ ಮೈಮಾನಿಕ ದಾಳಿಯಲ್ಲಿ ಅಫ್ಗಾನಿಸ್ತಾನದ ಮೂವರು ಕ್ರಿಕೆಟರ್‌ಗಳು ಹಾಗೂ ಐವರು ನಾಗರೀಕರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡ ಒಳಗೊಂಡ ತ್ರಿಕೋನ ಟಿ20ಐ ಸರಣಿಯಿಂದ ಅಫ್ಗಾನಿಸ್ತಾನ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ಅಫ್ಗನ್ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ.
ಪಾಕಿಸ್ತಾನ ನಡೆಸಿರುವುದು ಹೇಡಿತನದ ದಾಳಿ ಎಂದು ಅಫ್ಗಾನಿಸ್ತಾನ ಕಿಡಿಕಾರಿದೆ. ಮಾತ್ರವಲ್ಲ, ನವೆಂಬರ್ 17 ರಿಂದ 29 ರವರೆಗೆ ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲಿ ನಡೆಯಬೇಕಿದ್ದ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳನ್ನು ಒಳಗೊಂಡ ತ್ರಿಕೋನ ಸರಣಿಯನ್ನು ಆಡದಿರಲು ನಿರ್ಧರಿಸಿರುವುದಾಗಿ ಎಸಿಬಿ ತಿಳಿಸಿದೆ.
'ಪಾಕಿಸ್ತಾನ ನಡೆಸಿರುವ ಹೇಡಿತನದ ದಾಳಿಯಿಂದ ಪಕ್ತಿಕಾ ಪ್ರಾಂತ್ಯದ ಉರ್ಗುನ್ ಜಿಲ್ಲೆಯಲ್ಲಿ ನಮ್ಮ ಮೂವರು ಧೈರ್ಯಶಾಲಿ ಕ್ರಿಕೆಟಿಗರು ಹಾಗೂ ಐವರು ನಾಗರೀಕರು ಮೃತಪಟ್ಟಿದ್ದು, ಅವರ ನಿಧನಕ್ಕೆ ಅಫ್ಗನ್ ಕ್ರಿಕೆಟ್ ಮಂಡಳಿ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ’ ಎಂದು ಎಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
‘ಈ ದುರಂತಕ್ಕೆ ಪ್ರತಿಯಾಗಿ ಮತ್ತು ಮೃತಪಟ್ಟವರ ಆತ್ಮಕ್ಕೆ ಗೌರವ ಸೂಚಿಸುವ ಸಂಕೇತವಾಗಿ ನವೆಂಬರ್ ಅಂತ್ಯದಲ್ಲಿ ನಡೆಯಬೇಕಿದ್ದ ಪಾಕಿಸ್ತಾನ ತಂಡವನ್ನು ಒಳಗೊಂಡ ತ್ರಿಕೋನ ಟಿ20ಐ ಸರಣಿಯಿಂದ ಅಫ್ಗಾನಿಸ್ತಾನ ಹಿಂದೆ ಸರಿಯಲು ನಿರ್ಧರಿಸಿದೆ‘ ಎಂದು ಎಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.