ADVERTISEMENT

ಮಗುವಿನ ಆಗಮನದ ನಿರೀಕ್ಷೆಯೊಂದಿಗೆ ಆಸ್ಟ್ರೇಲಿಯಾದಿಂದ ಭಾರತಕ್ಕೆ ಕೊಹ್ಲಿ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 13:56 IST
Last Updated 22 ಡಿಸೆಂಬರ್ 2020, 13:56 IST
   

ಅಡಿಲೇಡ್ (ಪಿಟಿಐ): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಂಗಳವಾರ ಆಸ್ಟ್ರೇಲಿಯಾದಿಂದ ಭಾರತಕ್ಕೆ ಪ್ರಯಾಣಿಸಿದರು.

ವಿರಾಟ್ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಜನವರಿ ಮೊದಲ ವಾರದಲ್ಲಿ ಮಗುವಿಗೆ ಜನ್ಮನೀಡುವ ನಿರೀಕ್ಷೆಯಿದೆ. ಅಪ್ಪನಾಗುವ ಖುಷಿಯಲ್ಲಿರುವ ವಿರಾಟ್ ಸರಣಿಯ ಮುಂದಿನ ಮೂರು ಟೆಸ್ಟ್‌ಗಳಲ್ಲಿ ಆಡುವುದಿಲ್ಲ.

ಹೋದ ಶನಿವಾರ ಅಡಿಲೇಡ್‌ನಲ್ಲಿ ಮುಕ್ತಾಯವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಎಂಟು ವಿಕೆಟ್‌ಗಳಿಂದ ಸೋತಿತ್ತು. ಅಲ್ಲದೇ ಎರಡನೇ ಇನಿಂಗ್ಸ್‌ನಲ್ಲಿ ತಂಡವು ಕೇವಲ 36 ರನ್‌ ಗಳಿಸಿ ಕನಿಷ್ಠ ಮೊತ್ತದ ’ದಾಖಲೆ‘ ಮಾಡಿತ್ತು. ಅದರಿಂದಾಗಿ ಅವರು ಪಿತೃತ್ವ ರಜೆಯನ್ನು ರದ್ದು ಮಾಡಿ ಮುಂದಿನ ಪಂದ್ಯಗಳಲ್ಲಿ ಆಡಬೇಕು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದರು.

ADVERTISEMENT

ಆಸ್ಟ್ರೇಲಿಯಾದಿಂದ ಹೊರಡುವ ಮುನ್ನ ತಂಡದ ಸಹ ಆಟಗಾರರನ್ನು ಭೇಟಿಯಾಗಿ ಪ್ರೋತ್ಸಾಹದ ನುಡಿಗಳನ್ನಾಡಿದರು. ಸರಣಿಯಲ್ಲಿ ಉಳಿದಿರುವ ಮೂರು ಟೆಸ್ಟ್‌ಗಳಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸುವರು.

ಅಡಿಲೇಡ್ ಟೆಸ್ಟ್ ನಂತರ ತಂಡದ ಆಟಗಾರರಲ್ಲಿ ಕುಂದಿರುವ ಆತ್ಮವಿಶ್ವಾಸವನ್ನು ಮತ್ತೆ ಉದ್ದೀಪನಗೊಳಿಸುವಂತಹ ಮಾತುಕತೆಯನ್ನು ವಿರಾಟ್ ಮಾಡಿದರು ಎಂದು ಹೇಳಲಾಗಿದೆ.

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪಣಕ್ಕೊಡ್ಡಿ ಆಡಿರಿ. ಹೋರಾಟದ ಮನೋಭಾವವನ್ನು ಬಿಡಬೇಡಿ. ಗುಡ್‌ ಲಕ್ ಎಂದು ಸಂದೇಶ ನೀಡಿದರು.

ಮೊದಲ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ವಿರಾಟ್ 74 ರನ್ ಗಳಿಸಿದ್ದರು. 2014ರಿಂದ ಭಾರತ ಟೆಸ್ಟ್ ತಂಡವನ್ನು ವಿರಾಟ್ ಮುನ್ನಡೆಸುತ್ತಿದ್ದಾರೆ. 2018ರಲ್ಲಿ ತಂಡವು ಆಸ್ಟ್ರೇಲಿಯಾದಲ್ಲಿ ಸರಣಿ ಜಯದ ಇತಿಹಾಸ ಬರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.