ADVERTISEMENT

ಶತಕಗಳ ಭರಾಟೆಯಲ್ಲಿ ಬಾಡಿದ ವಿಂಡೀಸ್

ಸ್ವದೇಶದಲ್ಲಿ ಎರಡನೇ ಶತಕ ದಾಖಲಿಸಿದ ರಾಹುಲ್, ಜಡೇಜ–ಜುರೇಲ್ ಅಮೋಘ ಬ್ಯಾಟಿಂಗ್

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 1:19 IST
Last Updated 4 ಅಕ್ಟೋಬರ್ 2025, 1:19 IST
<div class="paragraphs"><p>ಭಾರತ ತಂಡದ ಕೆ.ಎಲ್. ರಾಹುಲ್ ಅರ್ಧಶತಕ ಗಳಿಸಿ ಸಂಭ್ರಮಿಸಿದರು&nbsp; –ಪಿಟಿಐ ಚಿತ್ರ</p></div>

ಭಾರತ ತಂಡದ ಕೆ.ಎಲ್. ರಾಹುಲ್ ಅರ್ಧಶತಕ ಗಳಿಸಿ ಸಂಭ್ರಮಿಸಿದರು  –ಪಿಟಿಐ ಚಿತ್ರ

   

ಅಹಮದಾಬಾದ್: ದೀರ್ಘ ಸಮಯದ ನಂತರ ಕೆ.ಎಲ್. ರಾಹುಲ್ ಸ್ವದೇಶದ ನೆಲದಲ್ಲಿ ಶತಕ ಬಾರಿಸಿದರು. ಉಪನಾಯಕ ರವೀಂದ್ರ ಜಡೇಜ ಮತ್ತು ‘ಹಂಗಾಮಿ’ ವಿಕೆಟ್‌ಕೀಪರ್ ಧ್ರುವ ಜುರೇಲ್ ಅವರೂ ವೆಸ್ಟ್ ಇಂಡೀಸ್‌ನ ಮೊನಚಿಲ್ಲದ ಬೌಲಿಂಗ್ ಪುಡಿಗಟ್ಟಿದರು. ಶತಕ ಸಂಭ್ರಮ ಆಚರಿಸಿದರು. 

ನುರಿತ ಕಲಾವಿದನ ಕುಸುರಿ ಕೆಲಸದಂತೆ ರಾಹುಲ್ ಬ್ಯಾಟಿಂಗ್ ಮನಸೆಳೆಯಿತು. ಈಚೆಗೆ ಇಂಗ್ಲೆಂಡ್‌ ನೆಲದಲ್ಲಿ ಮಿಂಚಿದ್ದ ಕನ್ನಡಿಗ ಇಲ್ಲಿ 197 ಎಸೆತಗಳಲ್ಲಿ 100 ರನ್‌ ಗಳಿಸಿದರು. 2016ರ ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ 199 ರನ್ ಹೊಡೆದ ನಂತರ ಅವರು ಭಾರತದ ನೆಲದಲ್ಲಿ ಶತಕ ಹೊಡೆದಿರಲಿಲ್ಲ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅವರು ತಮ್ಮ ಟೆಸ್ಟ್ ಕ್ರಿಕೆಟ್‌ನ 11ನೇ ಶತಕ ದಾಖಲಿಸಿದರು.

ADVERTISEMENT

ಗಾಯಗೊಂಡಿರುವ ರಿಷಭ್ ಪಂತ್ ಅವರ ಬದಲಿಗೆ ಸ್ಥಾನ ಪಡೆದಿರುವ  24 ವರ್ಷದ ಜುರೇಲ್ 210 ಎಸೆತಗಳಲ್ಲಿ 125 ರನ್‌ ಗಳಿಸಿದರು.  ಅವರ ಬ್ಯಾಟಿಂಗ್ ಆತ್ಮವಿಶ್ವಾಸದಿಂದ ಕೂಡಿತ್ತು. ಈಚೆಗೆ ಇಂಗ್ಲೆಂಡ್‌ ನಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ರಿಷಭ್ ಅವರ ಬಲಪಾದಕ್ಕೆ ಚೆಂಡು ಬಡಿದು ಮೂಳೆಮುರಿದಿತ್ತು. ಆದ್ದರಿಂದ ಅವರು ವಿಶ್ರಾಂತಿಯಲ್ಲಿದ್ದಾರೆ. 

ಇನ್ನು 36 ವರ್ಷದ ಆಲ್‌ರೌಂಡರ್ ಜಡೇಜ ತಮ್ಮ ವೃತ್ತಿಜೀವನದ ಅಮೋಘ ಕಾಲಘಟ್ಟದಲ್ಲಿದ್ದಾರೆ. ಇಂಗ್ಲೆಂಡ್ ಎದುರಿನ ಸರಣಿಯಲ್ಲಿಯೂ ಮಹತ್ವದ ಕಾಣಿಕೆ ನೀಡಿದ್ದ ಅವರು ಇಲ್ಲಿಯೂ ಶತಕದ ರಂಗು ಚೆಲ್ಲಿದರು. 176 ಎಸೆತಗಳಲ್ಲಿ 104 ರನ್‌ ಗಳಿಸಿದರು. ಇದು ಅವರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆರನೇ ಶತಕವಾಗಿದೆ. 

ಇವರೆಲ್ಲರ ಭರ್ಜರಿ ಬ್ಯಾಟಿಂಗ್ ಫಲವಾಗಿ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡವು 128 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 448 ರನ್ ಗಳಿಸಿತು. ಒಟ್ಟು 286 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತು. ಜಡೇಜ ಮತ್ತು ವಾಷಿಂಗ್ಟನ್ ಸುಂದರ್ (ಬ್ಯಾಟಿಂಗ್ 9) ಕ್ರೀಸ್‌ನಲ್ಲಿದ್ದಾರೆ.

ಪಂದ್ಯದ ಮೊದಲ ದಿನವಾದ ಗುರುವಾರ ವಿಂಡೀಸ್ ಬಳಗವು 44.1 ಓವರ್‌ಗಳಲ್ಲಿ 162 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ಆತಿಥೇಯ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗಳಿಗೆ 121 ರನ್ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ರಾಹುಲ್ ಮತ್ತು ಗಿಲ್ ಶುಕ್ರವಾರ ತಮ್ಮ ಜೊತೆಯಾಟ ಮುಂದುವರಿಸಿದರು.

ಪ್ರವಾಸಿ ಬಳಗದ ವೇಗಿಗಳಾದ ಜೇಡನ್ ಸೀಲ್ಸ್ ಮತ್ತು ಜಸ್ಟಿನ್ ಗ್ರೀವ್ಸ್ ಅವರು ಬೆಳಗಿನ ಅವಧಿಯಲ್ಲಿ ಬ್ಯಾಟರ್‌ಗಳಿಗೆ ಒಂದಿಷ್ಟು ಬಿಸಿ ಮುಟ್ಟಿಸಿದರು. ರಾಹುಲ್ ಬ್ಯಾಟ್ ಅಂಚಿಗೆ ಸವರಿದ ಚೆಂಡು ಕೀಪರ್ ಹಾಗೂ ಸ್ಲಿಪ್ ಫೀಲ್ಡರ್‌ ಮಧ್ಯದ ಗ್ಯಾಪ್‌ನಲ್ಲಿ ಹಾದುಹೋಯಿತು. ಇನ್ನೊಂದು ಸಲ ರಾಹುಲ್ ಆಡಿದ ಚೆಂಡು ಗಲ್ಲಿ ಫೀಲ್ಡರ್‌ ಸಮೀಪದಲ್ಲಿ ಗಾಳಿಯಲ್ಲಿ ತೇಲಿಹೋಯಿತು. ಆದರೆ  ರಾಹುಲ್‌ಗೆ ‘ಅದೃಷ್ಟ’ ಜೊತೆ ನೀಡಿತು. 

ಇದರಿಂದಾಗಿ ರಾಹುಲ್ ಶತಕದತ್ತ ಹೆಜ್ಜೆ ಹಾಕಿದರು. ಅಲ್ಲದೇ ಗಿಲ್ ಜೊತೆಗೆ ಜೊತೆಯಾಟ ಬೆಳೆಸಿದರು. ಆಗಾಗ ರಿವರ್ಸ್ ಸ್ವೀಪ್ ಕೂಡ ಪ್ರಯೋಗಿಸುವಲ್ಲಿ ರಾಹುಲ್ ಯಶಸ್ವಿ ಆದರು. ಆದರೆ ತಮ್ಮ  ಅರ್ಧಶತಕದ ನಂತರ ಗಿಲ್ ಅವರು ರಾಸ್ಟನ್ ಚೇಸ್ ಬೌಲಿಂಗ್‌ನಲ್ಲಿ ರಿವರ್ಸ್ ಸ್ವೀಪ್ ಆಡಿದರು. ದೇಹದ ಸಮತೋಲನ ತಪ್ಪಿದ್ದರಿಂದ ಸ್ಲಿಪ್ ನಲ್ಲಿದ್ದ ಗ್ರೀವ್ಸ್‌ಗೆ ಕ್ಯಾಚ್ ಕೊಟ್ಟರು. 

ಆದರೆ ರಾಹುಲ್ ಆಟಕ್ಕೆ ಇದರಿಂದ ಭಂಗ ಬರಲಿಲ್ಲ. ಊಟದ ವಿರಾಮಕ್ಕೂ ಕೆಲವೇ ನಿಮಿಷಗಳ ಮುನ್ನ ಶತಕದ ಗಡಿ ಮುಟ್ಟಿದರು. ಕೈಬೆರಳುಗಳನ್ನು ಬಾಯಲ್ಲಿಟ್ಟುಕೊಂಡು ಸಂಭ್ರಮಿಸಿದರು. ತವರಿನಲ್ಲಿ ಶತಕದ ಬರ ನೀಗಿಸಿದ ತೃಪ್ತಿಯ ಭಾವ ಅವರ ಮುಖದಲ್ಲಿತ್ತು. ಆದರೆ  ಇದರ ನಂತರ ಅವರು ಕ್ರೀಸ್‌ನಲ್ಲಿ ಬಹಳ ಹೊತ್ತು ಇರಲಿಲ್ಲ. ಜೊಮೆಲ್ ವಾರಿಕನ್ ಎಸೆತವನ್ನು ಕವರ್‌ಡ್ರೈವ್ ಮಾಡುವ ಯತ್ನ ಅವರಿಗೆ ಕೈಕೊಟ್ಟಿತು. ಗ್ರೀವ್ಸ್‌ ಕ್ಯಾಚ್ ಪಡೆದು ಸಂಭ್ರಮಿಸಿದರು.

ರಾಹುಲ್ ಔಟಾಗಿದ್ದರಿಂದ ಭಾರತದ ಓಟಕ್ಕೆ ಕಡಿವಾಣ ಹಾಕಬಹುದು ಎಂಬ ವಿಂಡೀಸ್ ಆಟಗಾರರ ನಿರೀಕ್ಷೆ ಹುಸಿಯಾಯಿತು. ಜುರೇಲ್ ಮತ್ತು ಜಡೇಜ ಅವರ ಚುರುಕಿನ ಆಟಕ್ಕೆ ಬೌಲರ್‌ಗಳು ಪರದಾಡಿದರು. ಐದನೇ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರೂ 206 ರನ್ ಗಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.