ADVERTISEMENT

ಕ್ರೀಡೆ: ಅಲೀಂ ದರ್‌ಗೆ ಡಬಲ್ ದಾಖಲೆ

ವಿಕ್ರಂ ಕಾಂತಿಕೆರೆ
Published 3 ನವೆಂಬರ್ 2020, 19:30 IST
Last Updated 3 ನವೆಂಬರ್ 2020, 19:30 IST
ಅಲೀಂ ದರ್‌ -ಎಎಫ್‌ಪಿ ಚಿತ್ರ
ಅಲೀಂ ದರ್‌ -ಎಎಫ್‌ಪಿ ಚಿತ್ರ   

ಎರಡು ದಶಕಗಳಿಂದ ಏಕದಿನ ಕ್ರಿಕೆಟ್‌ನಲ್ಲಿ ಅಂಪೈರಿಂಗ್ ಮಾಡುತ್ತಿರುವ ಪಾಕಿಸ್ತಾನದ ಅಲೀಂ ದರ್ ಅತಿ ಹೆಚ್ಚು ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ತೀರ್ಪು ನೀಡಿದ ದಾಖಲೆಯೂ ಅವರ ಹೆಸರಿನಲ್ಲೇ ಇದೆ. ಒಟ್ಟಾರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಪಂದ್ಯಗಳನ್ನು ನಿಯಂತ್ರಿಸಿದ ಅಂಪೈರ್ ಎಂಬ ಖ್ಯಾತಿಯೂ ಅವರದೇ. ಟಿ20ಯಲ್ಲಿ ದಾಖಲೆ ಬರೆಯಲು ಅವರಿಗೆ ಇನ್ನು ಬೇಕಾಗಿರುವುದು ನಾಲ್ಕು ಪಂದ್ಯ ಮಾತ್ರ.

ವಿಶಿಷ್ಟ ಹಾವ–ಭಾವ, ತಪ್ಪು ತೀರ್ಪುಗಳು ಮುಂತಾದ ಕಾರಣಗಳಿಂದ ಕ್ರಿಕೆಟ್ ಕ್ಷೇತ್ರದಲ್ಲಿ ಅಂಪೈರ್‌ಗಳು ಹೆಚ್ಚು ಸುದ್ದಿಯಾಗುತ್ತಿರುವ ಕಾಲ ಇದು. ಇಂತ ಸಂದರ್ಭದಲ್ಲಿ ಯಾವುದೇ ಭಾವೋದ್ವೇಗವಿಲ್ಲದೆ ಬೌಲರ್ ಮತ್ತು ಬ್ಯಾಟ್ಸಮನ್ ಮಧ್ಯದಲ್ಲಿ ಗಂಭೀರವಾಗಿ ನಿಂತು ಅಷ್ಟೇ ಗಂಭೀರ ತೀರ್ಪು ಕೊಡುತ್ತಿರುವ ಪಾಕಿಸ್ತಾನದ ಅಲೀಂ ದರ್ ಒಂದು ವರ್ಷದ ಒಳಗೆ ಎರಡು ದಾಖಲೆಗಳನ್ನು ಮಾಡಿದ್ದಾರೆ.

ಅತಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ ದಾಖಲೆಯನ್ನು ಕಳೆದ ಡಿಸೆಂಬರ್‌ನಲ್ಲಿ ತಮ್ಮದಾಗಿಸಿಕೊಂಡ ಅಲೀಂ ಅವರು ಈಗ ಏಕದಿನ ಕ್ರಿಕೆಟ್‌ನಲ್ಲೂ ಅತಿ ಹೆಚ್ಚು ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ ದಾಖಲೆಯ ಒಡೆಯರಾಗಿದ್ದಾರೆ. ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. 52 ವರ್ಷದ ಅಲೀಂ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ 210ನೇ ಪಂದ್ಯ ಆಗಿತ್ತು ಅದು. ಈ ಮೂಲಕ ದಕ್ಷಿಣ ಆಫ್ರಿಕಾದ ರೂಡಿ ಕರ್ಟ್ಸನ್ ದಾಖಲೆಯನ್ನು ಅಲೀಂ ಹಿಂದಿಕ್ಕಿದರು.

ADVERTISEMENT

ಕಳೆದ ಡಿಸೆಂಬರ್‌ನಲ್ಲಿ ನಡೆದ ಆಸ್ಟ್ರೇಲಿಯಾ–ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಅಲೀಂ, ಜಮೈಕಾದ ಸ್ಟೀವ್ ಬಕ್ನರ್ ದಾಖಲೆಯನ್ನು ಹಿಂದಿಕ್ಕಿದ್ದರು. ಅದು ಅವರ 132ನೇ ಟೆಸ್ಟ್ ಪಂದ್ಯ ಆಗಿತ್ತು. 46 ಟಿ20 ಪಂದ್ಯಗಳಲ್ಲೂ ಅವರು ಅಂಪೈರಿಂಗ್ ಮಾಡಿದ್ದಾರೆ. ಹೀಗಾಗಿ ಒಟ್ಟಾರೆ ಅತಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ ದಾಖಲೆಯೂ ಅವರ ಹೆಸರಿನಲ್ಲಿದೆ. ಟಿ20ಯಲ್ಲಿ ಹೆಚ್ಚು ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ ದಾಖಲೆ ಮುರಿಯಲು ಅವರಿಗೆ ಇನ್ನು ನಾಲ್ಕು ಪಂದ್ಯಗಳು ಬೇಕು. ತಮ್ಮದೇ ದೇಶದ ಅಹಸನ್ ರಜಾ 49 ಪಂದ್ಯಗಳಲ್ಲಿ ತೀರ್ಪು ನೀಡಿ ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ.

1968ರಲ್ಲಿ ಜನಿಸಿದ ಅಲೀಂ ಪಾಕಿಸ್ತಾನ ರೈಲ್ವೆ, ಲಾಹೋರ್, ಗುಜ್ರನ್‌ವಾಲಾ ಕ್ರಿಕೆಟ್ ಸಂಸ್ಥೆ, ಅಲೈಡ್ ಬ್ಯಾಂಕ್ ಮುಂತಾದ ತಂಡಗಳ ಪರ ಆಡಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಆಗಿರುವ ಅವರು ಲೆಗ್‌ಬ್ರೇಕ್ ಬೌಲರ್ ಕೂಡ. 2000ನೇ ಇಸವಿಯ ಫೆಬ್ರುವರಿಯಲ್ಲಿ ನಡೆದ ಪಾಕಿಸ್ತಾನ–ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಅಂಪೈರಿಂಗ್ ಮಾಡಿದ ಅವರು 2003ರ ಅಕ್ಟೋಬರ್‌ನಲ್ಲಿ ನಡೆದ ಇಂಗ್ಲೆಂಡ್‌–ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಮೊದಲ ಬಾರಿ ಟೆಸ್ಟ್‌ ಅಂಪೈರ್ ಅಗಿ ಕಣಕ್ಕೆ ಇಳಿದಿದ್ದರು. 2009ರ ನವೆಂಬರ್‌ನಲ್ಲಿ ಮೊದಲ ಟಿ20 ಪಂದ್ಯದಲ್ಲಿ ಅಂಪೈರಿಂಗ್ ಮಾಡಿದ್ದರು. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಆ ಪಂದ್ಯ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.