ADVERTISEMENT

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಪಿ.ವಿ.ಸಿಂಧು

ಪಿಟಿಐ
Published 12 ಮಾರ್ಚ್ 2024, 14:24 IST
Last Updated 12 ಮಾರ್ಚ್ 2024, 14:24 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಬರ್ಮಿಂಗ್‌ಹ್ಯಾಮ್: ಎರಡು ಸಲದ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು, ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್ ಎರಡನೇ ಸುತ್ತಿಗೆ ಮುನ್ನಡೆದರು. ಮಂಗಳವಾರ ನಡೆದ ಪಂದ್ಯದಲ್ಲಿ ಅವರ ಎದುರಾಳಿಯಾಗಿದ್ದ ಜರ್ಮನಿಯ ವ್ಯೋನ್‌ ಲಿ ಮೊದಲ ಗೇಮ್‌ ಸೋತ ನಂತರ ಹಿಂದೆಸರಿದರು.

ಮಾಜಿ ವಿಶ್ವ ಚಾಂಪಿಯನ್ ಆಗಿರುವ 11ನೇ ಕ್ರಮಾಂಕದ ಸಿಂಧು 21–10 ರಿಂದ ಮೊದಲ ಗೇಮ್‌ ಪಡೆದಿದ್ದರು. ಈ ಹಂತದಲ್ಲಿ 26ನೇ ಕ್ರಮಾಂಕದ ಲಿ ಪಂದ್ಯದಿಂದ ನಿವೃತ್ತರಾದರು.

28 ವರ್ಷದ ಹೈದರಾಬಾದಿನ ಆಟಗಾರ್ತಿ ಮುಂದಿನ ಪಂದ್ಯದಲ್ಲಿ ತಮ್ಮ ‘ಕಡು ಎದುರಾಳಿ’ ಅಗ್ರ ಶ್ರೇಯಾಂಕದ ಆ್ಯನ್‌ ಸೆ ಯಂಗ್ (ಕೊರಿಯಾ) ಅವರನ್ನು ಎದುರಿಸಲಿದ್ದಾರೆ. ಯಂಗ್‌, ಈ ಹಿಂದಿನ ಎಲ್ಲ ಆರು ಮುಖಾಮುಖಿಗಳಲ್ಲಿ ಸಿಂಧು ವಿರುದ್ಧ ಜಯಗಳಿಸಿದ್ದಾರೆ. ದುಬೈನಲ್ಲಿ ಕಳೆದ ವರ್ಷ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಸಿಂಧು, ಈ ಎದುರಾಳಿಯಿಂದ ಒಂದು ಗೇಮ್ ಪಡೆಯುವಲ್ಲಿ ಯಶಸ್ವಿ ಆಗಿದ್ದರು.

ADVERTISEMENT

ಮೊಣಕಾಲಿನ ಗಾಯದಿಂದ ಗುಣಮುಖರಾಗಿರುವ ಆ್ಯನ್‌ ಸೆ ಯಂಗ್‌, ಕಳೆದ ಭಾನುವಾರವಷ್ಟೇ ಫ್ರೆಂಚ್‌ ಓಪನ್‌ ಮಹಿಳಾ ಸಿಂಗಲ್ಸ್‌ನಲ್ಲಿ ಗೆದ್ದು, ಋತುವಿನ ಎರಡನೇ ಪ್ರಶಸ್ತಿ ಸಂಪಾದಿಸಿದ್ದರು.

ಸಿಂಧು ಅವರಿಗೆ ಮೊದಲ ಸುತ್ತಿನ ಆರಂಭದಲ್ಲಿ ಲೀ ಪೈಪೋಟಿ ನೀಡುವಂತೆ ಕಂಡಿತ್ತು. ಆಗ ಸ್ಕೋರ್‌ 4–4 ಸಮನಾಗಿತ್ತು. ಆದರೆ ಮೇಲುಗೈ ಸಾಧಿಸಿದ ಭಾರತದ ಆಟಗಾರ್ತಿ 11–7ರಲ್ಲಿ ಮುನ್ನಡೆ ಸಾಧಿಸಿದರಲ್ಲದೇ, ಪ್ರಯಾಸವಿಲ್ಲದೇ ಮೊದಲ ಗೇಮ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.