ADVERTISEMENT

ಟಿ20 ವಿಶ್ವಕಪ್‌: ಕೆನಡಾ ತಂಡದಲ್ಲಿ ಭಾರತ, ಪಾಕ್‌ ಮೂಲದ ಆಟಗಾರರೇ ಹೆಚ್ಚು

ಪಿಟಿಐ
Published 3 ಮೇ 2024, 4:55 IST
Last Updated 3 ಮೇ 2024, 4:55 IST
ಸಾದ್‌ ಬಿನ್ ಜಾಫರ್
ಸಾದ್‌ ಬಿನ್ ಜಾಫರ್   

ಟೊರೆಂಟೊ: ಮುಂದಿನ ತಿಂಗಳು ವೆಸ್ಟ್‌ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ  ಪದಾರ್ಪಣೆ ಮಾಡುತ್ತಿರುವ ಕೆನಡಾ ತಂಡಕ್ಕೆ ಪಾಕಿಸ್ತಾನ ಮೂಲದ ಆಲ್‌ರೌಂಡರ್ ಸಾದ್‌ ಬಿನ್ ಜಾಫರ್ ನಾಯಕರಾಗಿದ್ದಾರೆ. 

ಭಾರತ ಮತ್ತು ಪಾಕಿಸ್ತಾನ ಮೂಲದ ಆಟಗಾರರನ್ನು ಒಳಗೊಂಡಿರುವ ಕೆನಡಾ ತಂಡ 'ಎ' ಗುಂಪಿನಲ್ಲಿ ಅಮೆರಿಕ, ಭಾರತ, ಪಾಕಿಸ್ತಾನ ಮತ್ತು ಐರ್ಲೆಂಡ್ ತಂಡಗಳೊಂದಿಗೆ ಸ್ಥಾನ ಪಡೆದಿದೆ.

ಕೆನಡಾ ತನ್ನ ಮೊದಲ ಪಂದ್ಯವನ್ನು ಜೂನ್ 1 ರಂದು ಡಲ್ಲಾಸ್‌ನಲ್ಲಿ ಅಮೆರಿಕ ವಿರುದ್ಧ ಆಡಲಿದ್ದು, ನಂತರ ಜೂನ್ 7 ರಂದು ಐರ್ಲೆಂಡ್, ಜೂನ್ 11 ರಂದು ಪಾಕಿಸ್ತಾನ ಮತ್ತು ಜೂನ್ 15 ರಂದು ಭಾರತವನ್ನು ಎದುರಿಸಲಿದೆ.

ADVERTISEMENT

ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಅಮೆರಿಕ ವಲಯ ಫೈನಲ್‌ನಲ್ಲಿ ಕೆನಡಾ ತಂಡ ಬರ್ಮುಡಾವನ್ನು ಮಣಿಸಿ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆದಿತ್ತು. ಟಿ20 ವಿಶ್ವಕ‍ಪ್‌ನ ಹಿಂದಿನ ಎಂಟು ಆವೃತ್ತಿಗಳಲ್ಲಿ ಕೆನಡಾ ತಂಡ ವಿಶ್ವಕಪ್ ಪ್ರವೇಶಿಸಲು ವಿಫಲವಾಗಿತ್ತು. 

ಎಡಗೈ ಸ್ಪಿನ್ನರ್ ಆಗಿರುವ 37 ವರ್ಷದ ಸಾದ್, 38 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕೆನಡಾ ತಂಡದ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರು. ಅಗ್ರ ಕ್ರಮಾಂಕದ ಬ್ಯಾಟರ್‌ ಆರೋನ್ ಜಾನ್ಸನ್ ಮತ್ತು ಎಡಗೈ ವೇಗಿ ಕಲೀಮ್ ಸನಾ ಕೂಡ ಅಂತಿಮ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಅಂತರರಾಷ್ಟ್ರೀಯ ಮಾಜಿ ಆಟಗಾರ, ಶ್ರೀಲಂಕಾದ ಪುಬುಡು ದಸ್ಸಾನಾಯಕೆ ಅವರು 2022ರಲ್ಲಿ ತಂಡದ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ಹರ್ಷ್ ಥಾಕರ್, ನಿಕೋಲಸ್ ಕಿರ್ಟನ್ ಮತ್ತು ದಿಲ್‌ಪ್ರೀತ್ ಬಾಜ್ವಾ ಮಾತ್ರ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಂಡ ಇಂತಿದೆ: ಸಾದ್ ಬಿನ್ ಜಾಫರ್ (ನಾಯಕ), ಆರೋನ್ ಜಾನ್ಸನ್, ದಿಲ್ಲಾನ್ ಹೇಲಿಗರ್, ದಿಲ್‌ಪ್ರೀತ್ ಬಜ್ವಾ, ಹರ್ಷ್ ಥಾಕರ್, ಜೆರೆಮಿ ಗಾರ್ಡನ್, ಜುನೈದ್ ಸಿದ್ದಿಕಿ, ಕಲೀಮ್ ಸನಾ, ಕನ್ವರ್‌ಪಾಲ್ ತಾತಗುರ್ (ವಿಕೆಟ್ ಕೀಪರ್), ನವನೀತ್ ಧಲಿವಾಲ್, ನಿಕೋಲಸ್ ಕಿರ್ಟನ್, ಪರ್ಗತ್ ಸಿಂಗ್, ರವೀಂದ್ರಪಾಲ್ ಸಿಂಗ್, ರಯಾನ್ ಖಾನ್ ಪಠಾಣ್, ಶ್ರೇಯಸ್ ಮೋವಾ (ವಿಕೆಟ್ ಕೀಪರ್).

ಮೀಸಲು ಆಟಗಾರರು: ತಜಿಂದರ್ ಸಿಂಗ್, ಆದಿತ್ಯ ವರದರಾಜನ್, ಅಮ್ಮರ್ ಖಾಲಿದ್, ಜತೀಂದರ್ ಮಾಥರು, ಪರ್ವೀನ್ ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.