ADVERTISEMENT

ವೇಗ ಪಡೆದುಕೊಂಡ ರಾಜ್ಯ ಕ್ರಿಕೆಟ್ ಸಂಸ್ಥೆಗಳ ದೂರು ಪರಿಶೀಲನೆ

ಪಿಟಿಐ
Published 24 ಏಪ್ರಿಲ್ 2019, 11:09 IST
Last Updated 24 ಏಪ್ರಿಲ್ 2019, 11:09 IST

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸಾಂವಿಧಾನಿಕ ಬಿಕ್ಕಟ್ಟು ಮತ್ತು ಹಣ ಬಿಡುಗಡೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ನೇಮಕ ಮಾಡಿರುವ ಅಮಿಕಸ್ ಕ್ಯೂರಿ ಇದೇ 25ರಂದು ವರದಿ ಸಲ್ಲಿಸುವ ಸಾಧ್ಯತೆ ಇದೆ.

ಪಿ.ಎಸ್‌.ನರಸಿಂಹ ಅವರು ಅಮಿಕಸ್ ಕ್ಯೂರಿ (ನ್ಯಾಯಾಲಯಕ್ಕೆ ಸಹಾಯ ಮಾಡುವ ವಕೀಲರು) ಆಗಿದ್ದು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಸಲ್ಲಿಸಿರುವ ಮನವಿಗಳಿಗೆ ಸಂಬಂಧಿಸಿ ವಿವರಗಳನ್ನು ವೇಗವಾಗಿ ಕಲೆ ಹಾಕುತ್ತಿದ್ದಾರೆ. ಏಪ್ರಿಲ್ 25ರಂದು ಅಪೆಕ್ಸ್ ಕೋರ್ಟ್‌ ಮುಂದಿನ ವಿಚಾರಣೆಯನ್ನು ನಡೆಸಲಿದ್ದು ಅಷ್ಟರಲ್ಲಿ ನರಸಿಂಹ ಅವರು ರಾಜ್ಯ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಮಾತನಾಡಿ ಮಾಹಿತಿ ಕಲೆ ಹಾಕಲಿದ್ದಾರೆ. ಈಗಾಗಲೇ 18 ಸಂಸ್ಥೆಗಳ ಜೊತೆ ಅವರು ಮಾತುಕತೆ ಪೂರ್ಣಗೊಳಿಸಿದ್ದಾರೆ.

ಸುಪ್ರಿಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್‌.ಎ.ಬೊದ್ದೆ ಮತ್ತು ಎ.ಎಂ. ಸಪ್ರೆ ಅವರು ವಿವಾದಕ್ಕೆ ಸಂಬಂಧಿಸಿ ಸಮಗ್ರ ಮಾಹಿತಿ ಕಲೆ ಹಾಕುವಂತೆ ನರಸಿಂಹ ಅವರಿಗೆ ಸೂಚನೆ ನೀಡಿದ್ದಾರೆ.

ADVERTISEMENT

‘ಈಶಾನ್ಯದ ಆರು ರಾಜ್ಯ ಸಂಸ್ಥೆಗಳ ಪ್ರತಿನಿಧಿಗಳು ಅಮಿಕಸ್ ಕ್ಯೂರಿಗೆ ಜೊತೆಯಾಗಿ ಹೇಳಿಕೆ ನೀಡಲಿದ್ದೇವೆ. ಬಿಸಿಸಿಐ ಚುನಾವಣೆಯಲ್ಲಿ ಈ ಬಾರಿ ನಾವೆಲ್ಲ ಮೊದಲ ಬಾರಿ ಮತ ಚಲಾಯಿಸಲಿರುವುದರಿಂದ ಒಟ್ಟಾಗಿ ಹೇಳಿಕೆ ನೀಡುವುದೇ ಒಳಿತು ಎಂಬ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ಆ ಭಾಗದ ಪ್ರತಿನಿಧಿಯೊಬ್ಬರು ತಿಳಿಸಿದರು.

ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳ ನಿಯಮಾವಳಿಗಳು ಏಕರೂಪದಲ್ಲಿ ಇರಬೇಕು ಎಂದು ಲೋಧಾ ಸಮಿತಿಯು ಸೂಚಿಸಿತ್ತು. ಇದು ಅಸಾಧ್ಯವಾಗಿದ್ದು ಸುಪ್ರಿಂ ಕೋರ್ಟ್ ನೇಮಕ ಮಾಡಿರುವ ಆಡಳಿತಾಧಿಕಾರಿಗಳ ಸಮಿತಿಯು ಇದನ್ನು ಪಾಲಿಸುವಂತೆ ಒತ್ತಡ ಹೇರುತ್ತಿದೆ ಎಂದು ಕೆಲವು ರಾಜ್ಯ ಸಂಸ್ಥೆಗಳು ದೂರಿದ್ದವು.

‘ಪ್ರತಿ ರಾಜ್ಯ ಸಂಸ್ಥೆಯಲ್ಲೂ ಸದಸ್ಯರ ಸಂಖ್ಯೆಯಲ್ಲಿ ವ್ಯತ್ಯಾಸವಿದೆ. ಹೀಗಿರುವಾಗ ಏಕರೂಪದ ಸಮಿತಿಯನ್ನು ರಚಿಸುವುದು ಹೇಗೆ ಎಂದು ಪದೇ ಪದೇ ಕೇಳಿದ್ದೇವೆ. ಇದಕ್ಕೆ ಉತ್ತರ ಸಿಗಲಿಲ್ಲ. ಪರಿಣಿತರು ಮತ್ತು ಅವರಿಗೆ ಬೇಕಾಗಿರುವ ಅರ್ಹತೆಯ ಕುರಿತ ಸಂದೇಹಗಳಿಗೂ ಉತ್ತರ ಲಭ್ಯವಾಗಲಿಲ್ಲ’ ಎಂದು ಪದಾಧಿಕಾರಿಯೊಬ್ಬರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.