ಅಮಿತ್ ಮಿಶ್ರಾ ಐಎಎನ್‌ಎಸ್ ಚಿತ್ರ
ನವದೆಹಲಿ: ಸುಮಾರು ಎರಡು ದಶಕಗಳ ವೃತ್ತಿಜೀವನದ ನಂತರ ಭಾರತ ತಂಡದ ಅನುಭವಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುರುವಾರ ವಿದಾಯ ಘೋಷಿಸಿದರು.
2017ರಲ್ಲಿ ಕೊನೆಯ ಬಾರಿ ಮಿಶ್ರಾ ಅವರು ಭಾರತ ತಂಡದಲ್ಲಿ ಆಡಿದ್ದರು. 2024ರ ಐಪಿಎಲ್‌ನಲ್ಲಿ ಹರಿಯಾಣದ ಬೌಲರ್ ಲಖನೌ ಸೂಪರ್ ಜೈಂಟ್ಸ್ ಪರ ಆಡಿದ್ದರು.
ಆಗಾಗ ಗಾಯದ ಸಮಸ್ಯೆ ಕಾಡಿದ್ದರಿಂದ ಮತ್ತು ಯುವ ತಲೆಮಾರು ಬೆಳೆಯುವ ಅವಶ್ಯಕತೆಯಿರುವ ಕಾರಣ ನಿವೃತ್ತಿ ನಿರ್ಧಾರಕ್ಕೆ ಬಂದಿರುವುದಾಗಿ 42 ವರ್ಷ ವಯಸ್ಸಿನ ಬೌಲರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತ ತಂಡದ ಪರ ಅವರು 22 ಟೆಸ್ಟ್, 36 ಏಕದಿನ ಮತ್ತು 10 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. 2008ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ಅವರು ಈ ಮಾದರಿಯಲ್ಲಿ 76 ವಿಕೆಟ್ ಗಳಿಸಿದ್ದಾರೆ. ಐದು ವರ್ಷಗಳ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ ಅವರು ಏಕದಿನ ತಂಡಕ್ಕೆ ನಾಂದಿ ಹಾಡಿದ್ದರು.
ಹರಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆ ನೆರಳಿನಲ್ಲಿ ಅವರು ಟೆಸ್ಟ್ ಪಂದ್ಯಕ್ಕೆ ಆಡಲು ಸಾಕಷ್ಟು ಕಾಯಬೇಕಾಯಿತು. ಮೊದಲ ಪಂದ್ಯದ ಮೊಲ ಇನಿಂಗ್ಸ್‌ನಲ್ಲೇ ಐದು ವಿಕೆಟ್ ಪಡೆದಿದ್ದರು. ಆದರೆ ನಂತರ ಸಾಂಪ್ರದಾಯಿಕ ಮಾದರಿಯಲ್ಲಿ ಐದು ವಿಕೆಟ್‌ಗಳ ಗೊಂಚಲ ಪಡೆಯಲಾಗಲಿಲ್ಲ.
‘25 ವರ್ಷಗಳ ಪ್ರಥಮ ದರ್ಜೆ ಕ್ರಿಕೆಟ್ ಜೀವನ (2000ರಲ್ಲಿ ಪದಾರ್ಪಣೆ) ನನಗೆ ಸ್ಮರಣಾರ್ಹ. ಬಿಸಿಸಿಐಗೆ, ಹರಿಯಾಣ ಕ್ರಿಕೆಟ್ ಸಂಸ್ಥೆ, ನೆರವು ಸಿಬ್ಬಂದಿಗೆ, ಸಹ ಆಟಗಾರರಿಗೆ ಮತ್ತು ಕುಟುಂಬ ಸದಸ್ಯರಿಗೆ ನಾನು ಕೃತಜ್ಞ’ ಎಂದಿದ್ದಾರೆ.
ಅಶ್ವಿನ್ ಮತ್ತು ರವೀಂದ್ರ ಜಡೇಜ ಪ್ರವರ್ಧಮಾನಕ್ಕೆ ಬಂದ ನಂತರ ಅಮಿತ್ ರಾಷ್ಟ್ರೀಯ ತಂಡದಲ್ಲಿ ಅವಕಾಶಗಳು ದೂರವಾದವು.
ಬೆಂಗಳೂರಿನಲ್ಲಿ ಕೊನೆಯ ಪಂದ್ಯ: ಅಮಿತ್ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು 2017ರಲ್ಲಿ (ಇಂಗ್ಲೆಂಡ್ ವಿರುದ್ಧ ಟಿ20 ಪಂದ್ಯ) ಬೆಂಗಳೂರಿನಲ್ಲಿ ಆಡಿದ್ದರು. ಆ ಪಂದ್ಯದಲ್ಲಿ 4 ಓವರುಗಳಲ್ಲಿ 23 ರನ್ನಿಗೆ 1 ವಿಕೆಟ್ ಪಡೆದಿದ್ದರು.
ಕೋಚಿಂಗ್ ಮತ್ತು ವೀಕ್ಷಕ ವಿವರಣೆ ಮೂಲಕ ಈ ಆಟದಲ್ಲಿ ತೊಡಗಿಕೊಳ್ಳುವ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು 535 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್‌ನಲ್ಲಿ 23.98ರ ಸರಾಸರಿಯಲ್ಲಿ 166 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಸನ್‌ರೈಸರ್ಸ್ ಹೈದರಾಬಾದ್, ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಕ್ಯಾಪಿಟರಲ್ಸ್, ಲಖನೌ ಪರ ಆಡಿದ್ದಾರೆ.
ಐಪಿಎಲ್‌ನಲ್ಲಿ ಮೂರು ಹ್ಯಾಟ್ರಿಕ್‌ಗಳನ್ನು ಪಡೆದ ಏಕೈಕ ಬೌಲರ್ ಎಂಬ ಗರಿಮೆ ಅವರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.