ADVERTISEMENT

ಅಮೆರಿಕ ಕ್ರಿಕೆಟ್‌ ತಂಡಕ್ಕೆ ಅರುಣ್‌ ಕೋಚ್‌

ಹಲವು ವರ್ಷಗಳ ಕಾಲ ಕರ್ನಾಟಕ ತಂಡದ ಕೋಚ್‌ ಆಗಿದ್ದ ‘ಜ್ಯಾಕ್‌’

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 20:07 IST
Last Updated 28 ಏಪ್ರಿಲ್ 2020, 20:07 IST
ಜೆ.ಅರುಣ್‌ ಕುಮಾರ್‌ (ಬಲ)
ಜೆ.ಅರುಣ್‌ ಕುಮಾರ್‌ (ಬಲ)   

ಬೆಂಗಳೂರು: ಕರ್ನಾಟಕದ ಜೆ.ಅರುಣ್‌ ಕುಮಾರ್‌ ಅವರು ಅಮೆರಿಕ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ.

ಹಲವು ವರ್ಷಗಳ ಕಾಲ ಕರ್ನಾಟಕ ತಂಡದ ಕೋಚ್‌ ಆಗಿದ್ದ ‘ಜ್ಯಾಕ್‌’, ಐಪಿಎಲ್‌ನಲ್ಲಿ ಆಡುವ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಬ್ಯಾಟಿಂಗ್‌ ತರಬೇತುದಾರರಾಗಿಯೂ ಕೆಲಸ ಮಾಡಿದ್ದಾರೆ. ಪುದುಚೇರಿ ತಂಡಕ್ಕೂ ಮಾರ್ಗದರ್ಶನ ನೀಡಿದ್ದರು.

ಅರುಣ್‌ ಅವರ ಗರಡಿಯಲ್ಲಿ ಪಳಗಿದ್ದ ರಾಜ್ಯ ತಂಡವು 2013–14 ಹಾಗೂ 2014–15ನೇ ಋತುಗಳಲ್ಲಿ ರಣಜಿ ಟ್ರೋಫಿ, ಇರಾನಿ ಕಪ್‌ ಹಾಗೂ ವಿಜಯ್‌ ಹಜಾರೆ ಟ್ರೋಫಿಗಳನ್ನು ಗೆದ್ದು ‘ಡಬಲ್‌ ತ್ರಿಬಲ್‌’ ಸಾಧನೆ ಮಾಡಿತ್ತು.

ADVERTISEMENT

‘ಅಮೆರಿಕ ಪುರುಷರ ತಂಡದ ಕೋಚ್‌ ಹುದ್ದೆಗೆ ಅರುಣ್ ಅರ್ಹ ವ್ಯಕ್ತಿ. ಹೀಗಾಗಿ ಅವರ ಜೊತೆ ಎರಡೂವರೆ ವರ್ಷ ಒಪ್ಪಂದ ಮಾಡಿಕೊಂಡಿದ್ದೇವೆ’ ಎಂದು ಅಮೆರಿಕ ಕ್ರಿಕೆಟ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಇಯಾನ್‌ ಹಿಗ್ಗಿನ್ಸ್‌, ಮಂಗಳವಾರ ಹೇಳಿದ್ದಾರೆ.

‘ಕೋವಿಡ್‌–19 ಬಿಕ್ಕಟ್ಟು ಶುರುವಾಗುವ ಮುನ್ನ ಸಂದರ್ಶನಕ್ಕೆ ಹಾಜರಾಗಿದ್ದೆ. ಅಮೆರಿಕ ಕ್ರಿಕೆಟ್‌ನ ಸಿಇಒ ಹಿಗ್ಗಿನ್ಸ್‌ ಅವರು ಮಂಗಳವಾರ ಬೆಳಿಗ್ಗೆ ದೂರವಾಣಿ ಕರೆ ಮಾಡಿದ್ದರು. ಕೋಚ್‌ ಆಗಿ ಆಯ್ಕೆ ಮಾಡಿದ ವಿಷಯ ತಿಳಿಸಿದಾಗ ನನಗೆ ಅಚ್ಚರಿಯ ಜೊತೆಗೆ ಖುಷಿಯೂ ಆಯಿತು’ ಎಂದು 45 ವರ್ಷ ವಯಸ್ಸಿನ ಅರುಣ್‌, ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊರೊನಾ ವೈರಾಣು ಸೃಷ್ಟಿಸಿರುವ ತಲ್ಲಣದಿಂದಾಗಿ ವಿಶ್ವದೆಲ್ಲೆಡೆ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ವೀಸಾವನ್ನೂ ತಾತ್ಕಾಲಿಕವಾಗಿ ರದ್ದುಮಾಡಲಾಗಿದೆ. ಹೀಗಾಗಿ ಸದ್ಯಕ್ಕಂತೂ ಅಮೆರಿಕಕ್ಕೆ ಪಯಣಿಸಲು ಸಾಧ್ಯವಿಲ್ಲ. ಈ ಬಿಕ್ಕಟ್ಟು ಬಗೆಹರಿಯುವವರೆಗೂ ಉಸಿರು ಬಿಗಿ ಹಿಡಿದು ಕಾಯಬೇಕಾಗಿದೆ’ ಎಂದು ಅವರು ಹೇಳಿದರು.

‘ಅಮೆರಿಕಕ್ಕೆ ಹೋಗಿದ್ದಾಗ ಹ್ಯೂಸ್ಟನ್‌ಗೆ ಭೇಟಿ ನೀಡಿದ್ದೆ. ಅಲ್ಲಿ ಕ್ರಿಕೆಟ್‌ಗೆ ಬೇಕಿರುವ ಮೂಲ ಸೌಕರ್ಯಗಳಿಲ್ಲ. ಅಲ್ಲಿ ಈಗ ಆರು ಅಂತರರಾಷ್ಟ್ರೀಯ ಕ್ರೀಡಾಂಗಣಗಳನ್ನು ನಿರ್ಮಿಸುವ ಕಾರ್ಯ ಶುರುವಾಗಿದೆ. ಈ ಹಂತದಲ್ಲಿ ಅಲ್ಲಿನ ಆಟಗಾರರಿಗೆ ತರಬೇತಿ ನೀಡುವುದು ಸವಾಲಿನ ಕೆಲಸ’ ಎಂದಿದ್ದಾರೆ.

ಅರುಣ್‌ ಅವರು ಕರ್ನಾಟಕದ ಪರ 109 ಪ್ರಥಮ ದರ್ಜೆ ಹಾಗೂ 100 ಲೀಸ್ಟ್‌ ‘ಎ’ ಪಂದ್ಯಗಳನ್ನು ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.