ADVERTISEMENT

ಆ್ಯಷಸ್: ಕಮಿನ್ಸ್ ದಾಳಿಗೆ ಇಂಗ್ಲೆಂಡ್ ತತ್ತರ

ಏಜೆನ್ಸೀಸ್
Published 8 ಸೆಪ್ಟೆಂಬರ್ 2019, 20:15 IST
Last Updated 8 ಸೆಪ್ಟೆಂಬರ್ 2019, 20:15 IST
ಸಹ ಆಟಗಾರರೊಂದಿಗೆ ಸಂಭ್ರಮಿಸಿದ ಪ್ಯಾಟ್‌ ಕಮಿನ್ಸ್‌ –ರಾಯಿಟರ್ಸ್‌ ಚಿತ್ರ
ಸಹ ಆಟಗಾರರೊಂದಿಗೆ ಸಂಭ್ರಮಿಸಿದ ಪ್ಯಾಟ್‌ ಕಮಿನ್ಸ್‌ –ರಾಯಿಟರ್ಸ್‌ ಚಿತ್ರ   

ಮ್ಯಾಂಚೆಸ್ಟರ್: ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್‌ (41ಕ್ಕೆ4) ಅವರ ಬಿರುಗಾಳಿ ವೇಗದ ಬೌಲಿಂಗ್‌ಗೆ ಇಂಗ್ಲೆಂಡ್ ತತ್ತರಿಸಿತು.

ಎಮಿರೆಟ್ಸ್‌ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆ್ಯಷಸ್ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ಜಯಿಸಲು ಭಾನುವಾರ 383 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್‌ ಸಂಕಷ್ಟದಲ್ಲಿದೆ. 71 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 173ರನ್‌ ಗಳಿಸಿತು. ತಂಡವನ್ನು ಸೋಲಿನಿಂದ ಪಾರು ಮಾಡಲು ಜೋಸ್ ಬಟ್ಲರ್ (34; 107ಎಸೆತ) ಮತ್ತು ಕ್ರೇಗ್ ಓವರ್ಟನ್ (ಬ್ಯಾಟಿಂಗ್ 12) ಅವರು ಹೋರಾಟ ನಡೆಸಿದರು.

ಆಸ್ಟ್ರೇಲಿಯಾ ತಂಡದ ಸ್ಟೀವನ್‌ ಸ್ಮಿತ್ ಅವರು ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಅರ್ಧ ಶತಕ ಗಳಿಸಿದ್ದರಿಂದ ದೊಡ್ಡ ಮೊತ್ತದ ಗುರಿಯನ್ನು ನೀಡಲು ಸಾಧ್ಯವಾಯಿತು. ಆದರೆ, ಉತ್ತಮ ಬ್ಯಾಟಿಂಗ್ ಪಡೆ ಇರುವ ಇಂಗ್ಲೆಂಡ್ ತಂಡವು ಆರಂಭದಲ್ಲಿಯೇ ಎಡವಿತು.

ADVERTISEMENT

ಮೊದಲ ಓವರ್‌ನಲ್ಲಿಯೇ ರೋರಿ ಬರ್ನ್ಸ್‌ ವಿಕೆಟ್ ಗಳಿಸಿದ ಪ್ಯಾಟ್ ತಮ್ಮ ಬೇಟೆ ಆರಂಭಿಸಿದರು. ನಂತರದ ಎಸೆತದಲ್ಲಿ ನಾಯಕ ಜೋ ರೂಟ್ ಅವರ ವಿಕೆಟ್ ಕಿತ್ತರು. ಆಗಿನ್ನೂ ತಂಡದ ಖಾತೆಯಲ್ಲಿ ಒಂದು ರನ್‌ ಸೇರಿರಲಿಲ್ಲ. ಜೋ ಡೆನ್ಲಿ (53; 123ಎಸೆತ) ಮಾತ್ರ ತಾಳ್ಮೆಯ ಆಟಕ್ಕೆ ಮೊರೆ ಹೋದರು. ಡೆನ್ಲಿ ಮತ್ತು ಜೇಸನ್ ರಾಯ್ (31 ರನ್) ಮೂರನೇ ವಿಕೆಟ್‌ಗೆ 66 ರನ್ ಸೇರಿಸಿದರು. 25ನೇ ಓವರ್‌ನಲ್ಲಿ ಪ್ಯಾಟ್ ತಮ್ಮ ಸ್ವಿಂಗ್‌ ಎಸೆತದಲ್ಲಿ ಜೇಸನ್ ಅವರನ್ನು ಕ್ಲೀನ್‌ ಬೌಲ್ಡ್ ಮಾಡಿದರು. 31ನೇ ಓವರ್‌ನಲ್ಲಿ ಕೇವಲ ಒಂದು ರನ್ ಗಳಿಸಿದ್ದ ಬೆನ್ ಸ್ಟೋಕ್ಸ್‌ ವಿಕೆಟ್‌ನ್ನೂ ಕಬಳಿಸಿದ ಪ್ಯಾಟ್‌ ಸಂತಸ ಮುಗಿಲುಮುಟ್ಟಿತು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 8ಕ್ಕೆ497ಡಿಕ್ಲೆರ್ಡ್‌ ಮತ್ತು 6ಕ್ಕೆ186 ಡಿಕ್ಲೆರ್ಡ್‌: ಇಂಗ್ಲೆಂಡ್ 301 ಮತ್ತು 71 ಓವರ್‌ಗಳಲ್ಲಿ 8ಕ್ಕೆ 173 (ಜೋ ಡೆನ್ಲಿ 53, ಜೇಸನ್ ರಾಯ್ 31, ಜಾನಿ ಬೆಸ್ಟೊ 25, ಜೋಸ್ ಬಟ್ಲರ್ 34, ಕ್ರೇಗ್ ಓವರ್ಟನ್ ಬ್ಯಾಟಿಂಗ್ 14, ಪ್ಯಾಟ್ ಕಮಿನ್ಸ್‌ 41ಕ್ಕೆ4, ನೇಥನ್ ಲಯನ್ 49ಕ್ಕೆ2, ಮಿಷೆಲ್ ಸ್ಟಾರ್ಕ್‌ 36ಕ್ಕೆ1) ವಿವರ ಅಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.