ಅಬುಧಾಬಿ: ಸೆದಿಕುಲ್ಲಾ ಅಟಲ್ (73;52ಎ) ಮತ್ತು ಅಜ್ಮತ್‌ವುಲ್ಲಾ ಒಮರ್‌ಝೈ (53; 21ಎ) ಅವರ ಅರ್ಧಶತಕಗಳ ಬಲದಿಂದ ಅಫ್ಗಾನಿಸ್ತಾನ ತಂಡವು ಮಂಗಳವಾರ ಆರಂಭವಾದ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಹಾಂಗ್‌ಕಾಂಗ್ ತಂಡವನ್ನು 94 ರನ್‌ಗಳಿಂದ ಸುಲಭವಾಗಿ ಮಣಿಸಿ ಶುಭಾರಂಭ ಮಾಡಿತು.
ಶೇಖ್ ಝೈದ್ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಬಲಿಷ್ಠ ಅಫ್ಗನ್ ತಂಡ ನೀಡಿದ್ದ 189 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿದ ‘ಕ್ರಿಕೆಟ್ ಶಿಶು’ ಹಾಂಗ್‌ಕಾಂಗ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 94 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಬಾಬರ್ ಹಯಾತ್ (39;43ಎ) ಮತ್ತು ನಾಯಕ ಯಾಸಿಮ್ ಮುರ್ತಾಜಾ (16) ಮಾತ್ರ ಎರಡಂಕಿ ರನ್ ಗಳಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಅಫ್ಗನ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹಾಂಗ್‌ಕಾಂಗ್ ತಂಡದ ಬೌಲರ್‌ಗಳಾದ ಆಯುಷ್ ಶುಕ್ಲಾ, ಕಿಂಚಿತ್ ಶಾ ಮತ್ತು ಅತೀಕ್ ಇಕ್ಬಾಲ್ ಅವರ ಪ್ರಭಾವಿ ದಾಳಿಯಿಂದಾಗಿ ಬೇಗನೆ ವಿಕೆಟ್ ಪತನವಾದವು.
ಈ ಹಂತದಲ್ಲಿ ಅಜೇಯ ಅರ್ಧಶತಕ ಗಳಿಸಿದ ಅಟಲ್ ಮತ್ತು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಒಮರ್‌ಝೈ ಅವರ ಬ್ಯಾಟಿಂಗ್ ಬಲದಿಂದ ಅಫ್ಗನ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 188 ರನ್ ಗಳಿಸಿತು.
ಅಟಲ್ ಮತ್ತು ಮೊಹಮ್ಮದ್ ನಬಿ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 51 ರನ್ ಸೇರಿಸಿದರು. ಕೊನೆಯ ಹಂತದ ಓವರ್‌ಗಳಲ್ಲಿ ಒಮರ್‌ಝೈ ಅಬ್ಬರಿಸಿದರು. ಅಟಲ್ ಮತ್ತು ಒಮರ್‌ಝೈ ಅವರು ಐದನೇ ವಿಕೆಟ್ ಜೊತೆಯಾಟದಲ್ಲಿ 82 ರನ್ ಸೇರಿಸಿದರು.
ಸಂಕ್ಷಿಪ್ತ ಸ್ಕೋರು:
ಅಫ್ಗಾನಿಸ್ತಾನ: 20 ಓವರ್‌ಗಳಲ್ಲಿ 6ಕ್ಕೆ188 (ಸೆದಿಕುಲ್ಲಾ ಅಟಲ್ ಔಟಾಗದೇ 73, ಮೊಹಮ್ಮದ್ ನಬಿ 33, ಅಜ್ಮತ್‌ವುಲ್ಲಾ ಒಮರ್‌ಝೈ 53, ಆಯುಷ್ ಶುಕ್ಲಾ 54ಕ್ಕೆ2, ಕಿಂಚಿತ್ ಶಾ 24ಕ್ಕೆ2).
ಹಾಂಗ್‌ಕಾಂಗ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 94 (ಬಾಬರ್ ಹಯಾತ್ 39, ಫಜಲ್‌ಹಕ್ ಫಾರೂಕಿ 16ಕ್ಕೆ 2, ಗುಲ್ಬದಿನ್ ನೈಬ್ 8ಕ್ಕೆ 2). ಫಲಿತಾಂಶ: ಅಫ್ಗಾನಿಸ್ತಾನ ತಂಡಕ್ಕೆ 94 ರನ್‌ಗಳ ಜಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.