ADVERTISEMENT

ಏಷ್ಯಾ ಕಪ್‌: ಒಮಾನ್‌ ವಿರುದ್ಧ ಗಾಯಗೊಂಡಿದ್ದ ಅಕ್ಷರ್‌ ಪಟೇಲ್‌ ಚೇತರಿಕೆ

ಏಜೆನ್ಸೀಸ್
Published 20 ಸೆಪ್ಟೆಂಬರ್ 2025, 7:46 IST
Last Updated 20 ಸೆಪ್ಟೆಂಬರ್ 2025, 7:46 IST
   

ಅಬುಧಾಬಿ: ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಒಮಾನ್‌ ನಡುವಿನ ಪಂದ್ಯದ ವೇಳೆ ಗಾಯಗೊಂಡಿದ್ದ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಚೇತರಿಸಿಕೊಂಡಿದ್ದಾರೆ ಎಂದು ಭಾರತ ಕ್ರಿಕೆಟ್‌ ತಂಡದ ಫಿಲ್ಡಿಂಗ್‌ ಕೋಚ್‌ ಟಿ. ದಿಲೀಪ್‌ ತಿಳಿಸಿದ್ದಾರೆ ಎಂದು 'ಕ್ರಿಕ್‌ಬಝ್‌' ವರದಿ ಮಾಡಿದೆ.

ಒಮಾನ್‌ ವಿರುದ್ದದ ಲೀಗ್‌ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುವಾಗ ಅಕ್ಷರ್‌ ಪಟೇಲ್‌ ಗಾಯಗೊಂಡಿದ್ದರು.

ಪಂದ್ಯದ 15ನೇ ಓವರ್‌ನಲ್ಲಿ ಬ್ಯಾಟರ್‌ ಹಮ್ಮದ್ ಮಿರ್ಜಾ ಅವರು ಮಿಡ್‌ ಆಫ್‌ ಕಡೆಗೆ ಬಾರಿಸಿದ ಚೆಂಡನ್ನು ಕ್ಯಾಚ್‌ ಪಡೆಯುವ ಪ್ರಯತ್ನ ಮಾಡಿದರು. ಕೈ ತಪ್ಪಿದ ಚೆಂಡನ್ನು ಮತ್ತೆ ಹಿಡಿಯಲು ಪ್ರಯತ್ನಿಸಿದಾಗ, ತಲೆಗೆ ಗಾಯವಾಗಿತ್ತು. ತಕ್ಷಣವೇ ಅವರು ಮೈದಾನದಿಂದ ಹೊರ ನಡೆದಿದ್ದರು.

ADVERTISEMENT

ಒಮಾನ್‌ ವಿರುದ್ಧ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ಅಕ್ಷರ್‌, ಕೇವಲ 13 ಎಸೆತಗಳಲ್ಲಿ 26 ರನ್‌ ಗಳಿಸಿದ್ದರು. ಗಾಯಗೊಂಡ ವೇಳೆ ಕೇವಲ 1 ಓವರ್‌ ಬೌಲಿಂಗ್‌ ಮಾಡಿದ್ದ ಅವರು ನಂತರ ಮತ್ತೆ ಮೈದಾನಕ್ಕೆ ಇಳಿಯಲಿಲ್ಲ.

ಒಮಾನ್‌ ವಿರುದ್ದದ ಪಂದ್ಯದಲ್ಲಿ ಭಾರತವು 21 ರನ್‌ಗಳ ಗೆಲುವು ದಾಖಲಿಸಿದೆ. ಭಾನುವಾರ (ಸೆ.21) ಸೂಪರ್‌–4ನಲ್ಲಿ ಸೂರ್ಯಕುಮಾರ್‌ ಯಾದವ್‌ ಪಡೆಯು ಪಾಕಿಸ್ತಾನ ವಿರುದ್ದ ದುಬೈನಲ್ಲಿ ಸೆಣಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.