ಅಭ್ಯಾಸದಲ್ಲಿ ನಿರತವಾಗಿರುವ ಭಾರತೀಯ ಆಟಗಾರರು
ಪಿಟಿಐ
ದುಬೈ: ಯುಎಇ ಅಲ್ಲಿ ಆರಂಭಗೊಳ್ಳುತ್ತಿರುವ ಏಷ್ಯಾ ಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಭಾರತ ತಂಡವು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಟಿ–20 ಮಾದರಿಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯು ಮಂಗಳವಾರ(ಸೆ.9) ಆರಂಭಗೊಳ್ಳಲಿದೆ. ಭಾರತವು ಸೆ.10ರಂದು ಯುಎಇ ಎದುರು ಟೂರ್ನಿಯ ಮೊದಲ ಪಂದ್ಯ ಆಡಲಿದೆ.
ಸೂರ್ಯಕುಮಾರ್ ಯಾದವ್ ನಾಯಕತ್ವದ ಯುವ ಪಡೆಯು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ತಂಡವು, ಸೆ.10 ರಂದು ಯುಎಇ, ಸೆ.14 ರಂದು ಪಾಕಿಸ್ತಾನ ಹಾಗೂ ಸೆ.19 ರಂದು ಒಮಾನ್ ವಿರುದ್ಧ ಆಡಲಿದೆ. ಗುಂಪು ಹಂತದ ಮೊದಲ ಎರಡು ಪಂದ್ಯಗಳು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಲಿವೆ. ಒಮಾನ್ ವಿರುದ್ದದ ಪಂದ್ಯವು ಅಬುಧಾಬಿಯಲ್ಲಿ ಜರುಗಲಿದೆ.
ಟೂರ್ನಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ತಂಡದಲ್ಲಿ ಹೆಚ್ಚು ಬದಲಾವಣೆಗಳು ಸಾಧ್ಯವಿಲ್ಲ. ಲಯದಲ್ಲಿರುವ ತಂಡವನ್ನೇ ಎಲ್ಲಾ ಪಂದ್ಯಗಳಿಗೂ ಉಳಿಸಿಕೊಳ್ಳಲಾಗುತ್ತದೆ’ ಎಂದು ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
ಯುವ ಪಡೆಯನ್ನು ಹೊಂದಿರುವ ಭಾರತ ತಂಡವು ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ನಾಯಕ ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಅವರನ್ನು ಒಳಗೊಂಡ ಬ್ಯಾಟಿಂಗ್ ಪಡೆಯು ಟಿ–20 ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಹಾರ್ದಿಕ್, ದುಬೆ, ಅಕ್ಷರ್ ಅವರಂತಹ ಅನುಭವಿ ಅಲ್ರೌಂಡರ್‌ಗಳು ತಂಡದಲ್ಲಿದ್ದಾರೆ. ಬೂಮ್ರಾ ಮುಂದಾಳತ್ವದ ಬೌಲಿಂಗ್ ಪಡೆಯು ಯುವ ಹಾಗೂ ಅನುಭವಿ ಬೌಲರ್‌ಗಳಿಂದ ಕೂಡಿದೆ. ವೇಗದ ಬೌಲಿಂಗ್‌ನಲ್ಲಿ ಬೂಮ್ರಾಗೆ ಹರ್ಷಿತ್ ರಾಣಾ ಹಾಗೂ ಅರ್ಶದೀಪ್ ಸಿಂಗ್ ಬಲ ನೀಡಿದರೆ, ಸ್ಪಿನ್ ಬೌಲಿಂಗ್‌ನಲ್ಲಿ ಅಕ್ಷರ್ ಹಾಗೂ ವರುಣ್ ಚಕ್ರವರ್ತಿ ಮಿಂಚುವ ವಿಶ್ವಾಸದಲ್ಲಿದ್ದಾರೆ.
ಆದರೆ, ಕೋಚ್ ಗಂಭೀರ್ ಹಾಗೂ ನಾಯಕ ಸೂರ್ಯಗೆ ಆಡುವ 11ರ ಬಳಗವನ್ನು ರೂಪಿಸುವ ಸವಾಲು ಎದುರಾಗಿದೆ. ಆರಂಭಿಕ ಸ್ಥಾನಕ್ಕೆ ಗಿಲ್, ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ನಡುವೆ ಪೈಪೋಟಿ ಏರ್ಪಟ್ಟಿದೆ. ಶುಭಮನ್ ಗಿಲ್ ಅವರು ಉಪನಾಯಕರಾಗಿರುವುದರಿಂದ ಅವರ ಸ್ಥಾನ ಭದ್ರವಾಗಿದ್ದು, ಟಿ–20 ಅಲ್ಲಿ ಅಗ್ರ ಶ್ರೇಯಾಂಕದಲ್ಲಿರುವ ಅಭಿಷೇಕ್ ಅಥವಾ ಉತ್ತಮ ಲಯದಲ್ಲಿರುವ ಸ್ಯಾಮ್ಸನ್ ಅವರಿಬ್ಬರಲ್ಲಿ ಒಬ್ಬರು ಗಿಲ್ ಜೊತೆ ಆರಂಭಿಕರಾಗಿ ಆಡಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ತಿಲಕ್ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಆಡುವ ಸಾಧ್ಯತೆಯಿದೆ.
ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಹಾಗೂ ವರುಣ್ ಚಕ್ರವರ್ತಿ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಇಬ್ಬರು ವೇಗದ ಬೌಲರ್ಗಳೊಂದಿಗೆ ಕಣಕ್ಕಿಳಿಯುವ ನಿರೀಕ್ಷೆಯಿದ್ದು, ಬೂಮ್ರಾ ಹಾಗೂ ಅರ್ಶದೀಪ್‌ಗೆ ಮಣೆ ಹಾಕುವ ಸಾಧ್ಯತೆಯಿದೆ.
ಸಂಭವ್ಯ ತಂಡ: ಶುಭಮನ್ ಗಿಲ್, ಅಭಿಷೇಕ್ ಶರ್ಮಾ / ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್(ನಾಯಕ), ಹಾರ್ದಿಕ್ ಪಾಂಡ್ಯ, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ಬೂಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ/ ಕುಲದೀಪ್ ಯಾದವ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.