ಸೂರ್ಯ ಪಡೆಗೆ ಏಷ್ಯಾ ಕಪ್ ಟಿ20 ಕ್ರಿಕೆಟ್ ಕಿರೀಟ
(ಚಿತ್ರ– @BCCI)
ದುಬೈ: ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ಎದುರು 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ಭಾರತ ಪ್ರಶಸ್ತಿಗೆ ಮುತ್ತಿಕ್ಕಿತ್ತು.
ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸ್ಪಿನ್ನರ್ ಕುಲದೀಪ್ ಯಾದವ್ (30ಕ್ಕೆ4) ಮೋಡಿಗೆ ಪಾಕ್ ತಂಡವು 19.1 ಓವರ್‌ಗಳಲ್ಲಿ 146 ರನ್ ಗಳಿಸಿ ಆಲೌಟ್ ಅಯಿತು. ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಆದರೆ ತಿಲಕ್ ವರ್ಮಾ (ಅಜೇಯ 69) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ತಂಡವು 19.4 ಓವರ್‌ಗಳಲ್ಲಿ 5ಕ್ಕೆ 150 ರನ್ ಗಳಿಸಿತು.
ಏಷ್ಯಾ ಕಪ್ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು.
ಇದೇ ಟೂರ್ನಿಯ ಗುಂಪು ಹಂತ ಮತ್ತು ಸೂಪರ್ ಫೋರ್ ಹಂತದಲ್ಲಿಯೂ ಭಾರತ ತಂಡವು ಪಾಕ್ ಎದುರು ಜಯಿಸಿತ್ತು.
ಅಪಾರ ಒತ್ತಡದ ಪರಿಸ್ಥಿತಿಯಲ್ಲಿ ತಿಲಕ್ ವರ್ಮಾ ತಮ್ಮ ಜೀವನದ ಸ್ಮರಣೀಯ ಇನಿಂಗ್ಸ್ ಆಡಿದರು. ಅವರ ದಿಟ್ಟ ಆಟದ ಫಲವಾಗಿ ಭಾರತ ತಂಡವು ಏಷ್ಯಾ ಕಪ್ ಗೆದ್ದು ಸಂಭ್ರಮಿಸಿತು.
147 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡವು ಆರಂಭದಲ್ಲಿಯೇ ಎಡವಿತ್ತು. 4 ಓವರ್‌ಗಳಲ್ಲಿ 20 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಅದರಲ್ಲಿ ಸಿಡಿಲಮರಿ ಅಭಿಷೇಕ್ ಶರ್ಮಾ, ನಾಯಕ ಸೂರ್ಯಕುಮಾರ್ ಮತ್ತು ಶುಭಮನ್ ಗಿಲ್ ಅವರು ಡಗ್‌ಔಟ್ ಸೇರಿದರು.
ಸ್ಪಿನ್ನರ್ ಕುಲದೀಪ್ ಯಾದವ್ (30ಕ್ಕೆ4) ಅವರ ಶ್ರಮವು ವ್ಯರ್ಥವಾಗುವ ಆತಂಕ ಎದುರಾಗಿತ್ತು. ಏಕೆಂದರೆ ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಪಾಕ್ ತಂಡದ ಆರಂಭಿಕ ಜೋಡಿಯು ಅಮೋಘ ಆಟವಾಡಿದ್ದರು. ಆದರೂ ಪಾಕ್ ತಂಡವನ್ನು 146 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಕುಲದೀಪ್ ಪ್ರಮುಖ ಪಾತ್ರ ವಹಿಸಿದ್ದರು.
ಕುಲದೀಪ್ ಶ್ರಮ ವ್ಯರ್ಥವಾಗದಂತೆ ತಿಲಕ್ (ಔಟಾಗದೇ 69; 53ಎಸೆತ, 4X3, 6X4) ನೋಡಿಕೊಂಡರು. ಭಾರತ ತಂಡವು 5 ವಿಕೆಟ್‌ಗಳಿಂದ ಜಯಿಸಿತು.
ಈ ಮೂಲಕ ಭಾರತವು 9ನೇ ಬಾರಿ ಏಷ್ಯಾ ಕಪ್ ಮುಡಿಗೇರಿಸಿಕೊಂಡಿತು.
ಪಾಕಿಸ್ತಾನ ತಂಡದ ಎದುರಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಗೆದ್ದ ಭಾರತ ತಂಡವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಪಾಕಿಸ್ತಾನದ ಸಚಿವ ಮೊಹಸೀನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲಿಲ್ಲ.
ಭಾನುವಾರ ತಡರಾತ್ರಿ ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಯಿತು. ಪೂರ್ವನಿಗದಿಯಂತೆ ನಖ್ವಿ ಅವರೇ ಟ್ರೋಫಿ ಪ್ರದಾನ ಮಾಡಲು ಸಿದ್ಧರಾಗಿದ್ದರು. ಎಸಿಸಿ ಅಧ್ಯಕ್ಷರಾಗಿ ನಖ್ವಿ ಅವರು ಪ್ರಶಸ್ತಿ ಪ್ರದಾನ ಮಾಡುವುದು ಶಿಷ್ಟಾಚಾರ. ಆದರೆ ಅವರು ಪಾಕ್ ಸರ್ಕಾರದಲ್ಲಿ ಸಚಿವರಾಗಿ ಭಾರತ ವಿರೋಧಿ ನಿಲುವು ಹೊಂದಿದ್ದಾರೆ. ಈ ಹಿಂದೆಯೂ ಅವರು ಭಾರತದ ಎದುರು ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರೆನ್ನಲಾಗಿದೆ.
ಆಟದ ಮೈದಾನದಲ್ಲಿಯೂ ‘ಆಪರೇಷನ್ ಸಿಂಧೂರ’...ಫಲಿತಾಂಶ ಒಂದೇ– ಭಾರತದ ವಿಜಯ. ನಮ್ಮ ಕ್ರಿಕೆಟ್ ಆಟಗಾರರಿಗೆ ಅಭಿನಂದನೆಗಳುನರೇಂದ್ರ ಮೋದಿ, ಪ್ರಧಾನ ಮಂತ್ರಿ
ಏಷ್ಯಾಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಅಜೇಯರಾಗುಳಿದು, ಮತ್ತೊಮ್ಮೆ ಪಾಕಿಸ್ತಾನವನ್ನು ಬಗ್ಗುಬಡಿದು ಪ್ರಶಸ್ತಿ ಮುಡಿಗೇರಿಸಿಕೊಂಡ ನಮ್ಮವರ ಆಟ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು. ಒತ್ತಡದ ಸಮಯದಲ್ಲಿ ಸಂಯಮದ ಆಟ ಆಡಿದ ತಿಲಕ್ ವರ್ಮಾ, ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಕಡಿಮೆ ಮೊತ್ತಕ್ಕೆ ಎದುರಾಳಿಗಳನ್ನು ಕಟ್ಟಿಹಾಕಿದ ಕುಲ್‌ದೀಪ್ ಯಾದವ್ ಮತ್ತು ನಿರ್ಣಾಯಕ ಪಂದ್ಯದಲ್ಲಿ ತಂಡ ತೋರಿದ ಸಂಘಟಿತ ಹೋರಾಟದಿಂದ ಭಾರತ ಗೆದ್ದಿದೆ. ಯುವ ಆಟಗಾರರೇ ತುಂಬಿದ್ದ ಭಾರತೀಯ ತಂಡ ದೊಡ್ಡ ಸಾಧನೆ ಮಾಡಿ, ಇತಿಹಾಸ ಸೃಷ್ಟಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.