ದುಬೈ: ಏಷ್ಯಾ ಕಪ್‌ನ ಸೂಪರ್–4 ಪಂದ್ಯದಲ್ಲಿ ಭಾರತ ವಿರುದ್ಧ ಅನುಚಿತ ವರ್ತನೆ ತೋರಿದ್ದ ಪ್ರಕರಣದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರವೂಫ್ ಅವರಿಗೆ ಪಂದ್ಯದ ಸಂಭಾವನೆಯ ಶೇ 30ರಷ್ಟು ದಂಡ ವಿಧಿಸಲಾಗಿದೆ.
ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಇಬ್ಬರು ಆಟಗಾರರು ಪ್ರಚೋದನಕಾರಿ ಸನ್ನೆಗಳನ್ನು ಮಾಡಿದ್ದರು ಎಂದು ಬಿಸಿಸಿಐ ಬುಧವಾರ ದೂರು ದಾಖಲಿಸಿತ್ತು.
ಪಂದ್ಯದ ವೇಳೆ ಕ್ರೀಡಾಂಗಣದ ಗ್ಯಾಲರಿಯಲ್ಲಿದ್ದ ಭಾರತದ ಅಭಿಮಾನಿಗಳಿಗೆ, ವಿಮಾನಗಳು ಉರುಳಿ ಬೀಳುತ್ತಿರುವಂತೆ ಸನ್ನೆ ಮಾಡಿ ಹ್ಯಾರಿಸ್ ರವೂಫ್ ಅಣಕಿಸಿದ್ದರು.
ಪಾಕ್ ಆಟಗಾರರ ಜೊತೆ ಪಂದ್ಯದ ರೆಫ್ರಿಯಾಗಿದ್ದ ರಿಚಿ ರಿಚರ್ಡ್ಸನ್ ಅವರು ಶುಕ್ರವಾರ ಸಭೆ ನಡೆಸಿದ್ದಾರೆ. ನಂತರ ದಂಡ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅದೇ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ ವೇಳೆ ತೆರೆದ ಗಾಳಿಯಲ್ಲಿ ಗುಂಡು ಹಾರಿಸುವ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ್ದ ಪಾಕ್ ಬ್ಯಾಟರ್ ಸಾಹಿಬ್‌ಝಾದಾ ಫರ್ಹಾನ್ ಅವರಿಗೆ ಎಚ್ಚರಿಕೆ ನೀಡಲಾಗಿದ್ದು, ದಂಡದಿಂದ ಪಾರಾಗಿದ್ದಾರೆ.
ಇದಕ್ಕೆ ಮೊದಲು ರವೂಫ್ ಮತ್ತು ಫರ್ಹಾನ್ ಅವರು, ಭಾರತ ವಿರುದ್ಧದ ಪಂದ್ಯದಲ್ಲಿ ತಾವು ತಪ್ಪು ಮಾಡಿಲ್ಲ ಎಂದು ಹೇಳಿದ್ದರು. ನಂತರ ಇಬ್ಬರೂ, ಟೀಮ್ ಮ್ಯಾನೇಜರ್ ನವೀದ್ ಅಕ್ರಂ ಚೀಮಾ ಜೊತೆ ವಿಚಾರಣೆಗೆ ಹಾಜರಾದರು.
ಅಪರೇಷನ್ ಸಿಂಧೂರ ನಂತರ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಪರಿಸ್ಥಿತಿ ಹದಗೆಟ್ಟಿದ್ದು, ಏಷ್ಯಾ ಕಪ್‌ನಲ್ಲಿ ಪಾಕ್ ವಿರುದ್ಧ ಭಾರತವು ಆಡಬಾರದು ಎಂದು ಒತ್ತಾಯ ಕೇಳಿಬಂದಿತ್ತು.
ಈ ಬಾರಿಯ ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡರಲ್ಲೂ ಭಾರತವು ಗೆಲುವು ಸಾಧಿಸಿದೆ. ಭಾನುವಾರ(ಸೆ.28) ಏಷ್ಯಾ ಕಪ್‌ನ ಫೈನಲ್‌ನಲ್ಲಿ ಉಭಯ ತಂಡಗಳು ಮತ್ತೆ ಎದುರಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.