ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಏಷ್ಯಾ ಕಪ್ ಟೂರ್ನಿಗೆ 15 ಮಂದಿಯ ಭಾರತ ತಂಡವನ್ನು ಆಯ್ಕೆ ಮಾಡಲು ರಾಷ್ಟ್ರೀಯ ಆಯ್ಕೆ ಸಮಿತಿ ಮಂಗಳವಾರ ಸಭೆ ಸೇರಲಿದೆ. ಆದರೆ ಪ್ರತಿಭಾವಂತ ಬ್ಯಾಟರ್ ಶುಭಮನ್ ಗಿಲ್ ಅವರಿಗೆ, ಈಗಾಗಲೇ ಅತ್ಯುತ್ತಮ ಎನಿಸಿರುವ ಟಿ20 ತಂಡದಲ್ಲಿ ಅವಕಾಶ ಕಲ್ಪಿಸುವುದು ಆಯ್ಕೆ ಸಮಿತಿ ಮುಂದಿರುವ ದೊಡ್ಡ ಸವಾಲಾಗಿದೆ.
ಯುಎಇಯಲ್ಲಿ ಸೆ. 9 ರಿಂದ 28ರವರೆಗೆ ಏಷ್ಯಾ ಕಪ್ ನಡೆಯಲಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಮೋಘವಾಗಿ ಆಡಿದ್ದ ನಾಯಕ ಗಿಲ್ ಅವರು ಈ ಹಿಂದಿನ ಟಿ20 ತಂಡದಲ್ಲಿರಲಿಲ್ಲ.
ಈಗಾಗಲೇ ಸುಸಜ್ಜಿತವಾಗಿರುವ ತಂಡದಲ್ಲಿ ಗಿಲ್ ಅವರಿಗೆ ಸ್ಥಾನ ಹೊಂದಿಸುವುದಾದರೂ ಹೇಗೆ ಎಂಬುದು ಅಜಿತ್ ಅಗರಕರ್ ನೇತೃತ್ವದ ಸಮಿತಿ ಮುಂದಿರುವ ಪ್ರಶ್ನೆಯಾಗಿದೆ.
ಈಗಾಗಲೇ ಟಿ20 ತಂಡದಲ್ಲಿ ಯುವ ಆಟಗಾರರ ಪಡೆಯಿದೆ. ಪ್ರತಿಯೊಂದು ಸ್ಥಾನಕ್ಕೂ ಮೂರರಿಂದ ನಾಲ್ಕು ಮಂದಿ ಪೈಪೋಟಿಯಲ್ಲಿರುವ ಪರಿಸ್ಥಿತಿಯಲ್ಲಿ ಆಯ್ಕೆಗಾರರು ಸಂದಿಗ್ಧ ಎದುರಿಸುತ್ತಿದ್ದಾರೆ.
ಮೊದಲ ಮೂರು ಸ್ಥಾನಗಳಿಗೆ ಅಂತಹದೇ ಸಾಮರ್ಥ್ಯ ಹೊಂದಿರುವ ಆಟಗಾರರು ಲಭ್ಯವಿದ್ದಾರೆ. ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರು ಈ ಹಿಂದಿನ ಋತುವಿನಲ್ಲಿ ಅಮೋಘ ಆಟವಾಡಿದ್ದಾರೆ. ಅವರನ್ನು ಮೀರಿಸದಿದ್ದರೂ, ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ (ಐಪಿಎಲ್ ಕಿತ್ತಳೆ ಕ್ಯಾಪ್ ವಿನ್ನರ್) ಅವರೂ ಸಾಮರ್ಥ್ಯದಲ್ಲಿ ಕಡಿಮೆಯೇನಿಲ್ಲ.
ಬೌಲಿಂಗ್‌ನಲ್ಲಿ ಒಂದು ಸ್ಥಾನಕ್ಕಾಗಿ ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ರವಿ ಬಿಷ್ಣೋಯಿ ನಡುವೆ ಪೈಪೋಟಿಯಿದೆ. ಅಷ್ಟೇ ಕೌಶಲ ಹೊಂದಿರುವ ಯಜುವೇಂದ್ರ ಚಾಹಲ್ ದೀರ್ಘಕಾಲದಿಂದ ಅವಕೃಪೆಗೆ ಒಳಗಾಗಿದ್ದಾರೆ. ಆಯ್ಕೆಗಾರರಿಗೆ ಅವಕಾಶವಿರುವುದು 15 ಮಂದಿಯ ಆಯ್ಕೆಗಷ್ಟೇ. ಹೀಗಾಗಿ ಅವರ ನಿರ್ಧಾರದ ಮೇಲೆ ಕುತೂಹಲದ ಕಣ್ಣಿದೆ.
ದೊಡ್ಡ ಹೆಸರಿನ ಅಥವಾ ವರ್ಚಸ್ಸಿನ ಇನ್ನೊಬ್ಬರನ್ನು ಸೇರ್ಪಡೆಗೊಳಿಸಲು ಈಗಾಗಲೇ 11ರ ತಂಡದಲ್ಲಿ ನಿಯಮಿತವಾಗಿ ಆಡುವವರನ್ನು ಕೈಬಿಡುವುದು ಉಚಿತವಲ್ಲ ಎಂಬುದು ಚಿಂತಕರ ಚಾವಡಿಯಲ್ಲಿರುವ ಸದಸ್ಯರೊಬ್ಬರ ಅಭಿಪ್ರಾಯ.
ಸರ್ವಮಾದರಿಗೆ ಒಬ್ಬರೇ ನಾಯಕರಿದ್ದರೆ ಸೂಕ್ತ ಎಂಬ ಚಿಂತನೆಯೂ ಇದೆ. ಈ ನಿಟ್ಟಿನಲ್ಲಿ ಈಗ ಗಿಲ್ ಹೆಸರು ಚಾಲ್ತಿಯಲ್ಲಿದೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಟಿ20 ತಂಡ ಶೇ 85ರಷ್ಟು ಯಶಸ್ಸಿನ ದಾಖಲೆ ಹೊಂದಿದೆ. ಆಡಿದ ಕೊನೆಯ 20 ಪಂದ್ಯಗಳಲ್ಲಿ 17ರಲ್ಲಿ ಗೆಲುವಿನ ಸವಿಯುಂಡಿದೆ. ಈ ತಂಡದಲ್ಲಿ ಗಿಲ್ ಅಥವಾ ಜೈಸ್ವಾಲ್ ಇರಲಿಲ್ಲ.
ಆದರೆ ಟೆಸ್ಟ್ ತಂಡದಲ್ಲಿ ಕಾಯಂ ಆಗುವ ಮೊದಲು ಗಿಲ್ ಮತ್ತು ಜೈಸ್ವಾಲ್ ಅವರು ಟಿ20 ತಂಡದಲ್ಲೂ ಇದ್ದರು. ಐಪಿಎಲ್‌ನಲ್ಲೂ ತಾಕತ್ತು ಪ್ರದರ್ಶಿಸಿದ್ದರು. ಗಿಲ್ ಅವರು ಹಿಂದೊಮ್ಮೆ ಟಿ20 ತಂಡದ ಉಪನಾಯಕರೂ ಆಗಿದ್ದರು.
ಗಿಲ್ ಅವರನ್ನು ಸೇರ್ಪಡೆಗೊಳಿಸಿದರೆ ಅವರಿಗೆ ಆಡುವ ತಂಡದಲ್ಲಿ ಸ್ಥಾನ ನೀಡಬೇಕಾಗುತ್ತದೆ. ಹಾಗಾದಲ್ಲಿ ಸಂಜು, ಅಭಿಷೇಕ್ ಮತ್ತು ತಿಲಕ್ ಇವರಲ್ಲಿ ಒಬ್ಬರು ಸ್ಥಾನ ತೆರವುಗೊಳಿಸಬೇಕಾಗುತ್ತದೆ. ರಿಂಕು ಸಿಂಗ್ ಸ್ಥಾನವೂ ಅಲುಗಾಡಲಿದೆ.
ವೇಗದ ಬೌಲಿಂಗ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ ಜೊತೆ ಜಸ್‌ಪ್ರೀತ್ ಬೂಮ್ರಾ ಮತ್ತು ಅರ್ಷದೀಪ್ ಅವರು ಸಹಜ ಆಯ್ಕೆ ಎನಿಸಲಿದ್ದಾರೆ. ಮೀಸಲು ವೇಗಿಯ ಸ್ಥಾನಕ್ಕೆ ಹರ್ಷಿತ್ ರಾಣಾ, ಕನ್ನಡಿಗ ಪ್ರಸಿದ್ಧ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ನಡುವೆ ಪೈಪೋಟಿಯಿದೆ.
ಸ್ಪಿನ್ನರ್‌ಗಳ ಆಯ್ಕೆ:
ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಸ್ಪಿನ್ ವಿಭಾಗದಲ್ಲಿ ಮೊದಲ ಮೂರು ಆಯ್ಕೆಯಾಗಿದ್ದಾರೆ. ಆದರೆ ಕೋಚ್ ಗಂಭೀರ್ ಅವರು ಆಲ್‌ರೌಂಡರ್‌ಗೆ ಒತ್ತು ನೀಡುವ ಕಾರಣ ವಾಷಿಂಗ್ಟನ್ ಸುಂದರ್ ಅವರಿಗೂ ಮಣೆಹಾಕಬಹುದು.
ಎರಡನೇ ವಿಕೆಟ್ ಕೀಪರ್ ಸ್ಥಾನಕ್ಕೆ ಜಿತೇಶ್ ಶರ್ಮಾ ಮತ್ತು ಧ್ರುವ್ ಜುರೇಲ್ ನಡುವೆ ರೇಸ್ ಇದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಕೆಳಕ್ರಮಾಂಕದಲ್ಲಿ ಆಡಿದ್ದ ಜಿತೇಶ್, ಕೆಲವು ಪಂದ್ಯಗಳಲ್ಲಿ ಫಿನಿಷರ್ ಪಾತ್ರದಲ್ಲಿ ಮಿಂಚಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.